ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಮ್ಮನಕಟ್ಟೆ ಕೆರೆ ಕೋಡಿ ಒಡೆದು ಭತ್ತದ ಬೆಳೆ ನೀರುಪಾಲು

ಶಾಶ್ವತ ಕಾಮಗಾರಿ ಮರೀಚಿಕೆ
ಮಲ್ಲಪ್ಪ ಸಂಕೀನ್‌
Published 29 ಆಗಸ್ಟ್ 2024, 6:53 IST
Last Updated 29 ಆಗಸ್ಟ್ 2024, 6:53 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಬೊಮ್ಮನಕಟ್ಟೆ ಕೆರೆಯ ಕೋಡಿ ಒಡೆದು ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ. 20 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಗೀಡಾಗಿದೆ.

ಜಿಲ್ಲೆಯಲ್ಲಿ ಭಾರಿ ಮಳೆಯಾದ ಪರಿಣಾಮ ಎರಡು ವಾರದ ಹಿಂದೆ ಕೆರೆ ಭರ್ತಿಯಾಗಿ ಕೆರೆಯ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ಎರಡು ಕಡೆಗೆ ಕೋಡಿ ಬಿದ್ದಿದೆ.

ಮಹಾನಗರ ಪಾಲಿಕೆ ವತಿಯಿಂದ ತಾತ್ಕಾಲಿಕವಾಗಿ ಎರಡು ಕಡೆ ಮಣ್ಣು ಹಾಕಲಾಗಿದೆ. ಮತ್ತೆ ಜೋರಾಗಿ ಮಳೆ ಸುರಿದರೆ ಹಾಕಿರುವ ಮಣ್ಣು ಕೊಚ್ಚಿ ಹೋಗುವ ಸಾಧ್ಯತೆ ಇದೆ. ಹೀಗಾಗಿ ರೈತರು ಆತಂಕದಲ್ಲಿಯೇ ಕೃಷಿ ಚಟುವಟಿಕೆ ನಡೆಸುವಂತಾಗಿದೆ.

‘ಕೆರೆಯ ಪಕ್ಕದಲ್ಲಿ ಸುಮಾರು 30 ರಿಂದ 35 ಎಕರೆ ಜಮೀನಿನಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಮಳೆಗಾಲ ಆರಂಭವಾದರೆ ಸಾಕು ಅವರಲ್ಲಿ ಆತಂಕ ಶುರುವಾಗುತ್ತದೆ. ಕೆರೆ ಕೋಡಿ ಒಡೆಯುವ ಭಯ ಕಾಡುತ್ತದೆ. ನಾಟಿ ಮಾಡಿದ ಭತ್ತದ ಬೆಳೆ ಕೆರೆಯ ಪಾಲಾಗುತ್ತಿದೆ. ಹಲವು ವರ್ಷಗಳಿಂದಲೂ ತೊಂದರೆ ಅನುಭವಿಸುತ್ತಿದ್ದೇವೆ. ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ’ ಎಂಬುದು ರೈತರ ಅಳಲು.

ಭತ್ತ ನಾಟಿ ಮಾಡಲು ಸಸಿಗಳಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಮತ್ತು ರಸಗೊಬ್ಬರ ಸೇರಿದಂತೆ ರೈತರು ಪ್ರತಿ ಎಕರೆಗೆ ಸುಮಾರು ₹ 20,000ದಿಂದ ₹ 30,000 ಖರ್ಚು ಮಾಡಿದ್ದರು. ಆದರೆ, ಎರಡು ವಾರಗಳ ಹಿಂದೆ ಸುರಿದ ಮಳೆಗೆ ಕೆರೆ ಮತ್ತೊಮ್ಮೆ ಕೋಡಿ ಬಿದ್ದಿದೆ. ಬೆಳೆ ಹಾನಿ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ರೈತರು ಇದೀಗ ಎರಡನೇ ಬಾರಿಗೆ ಭತ್ತದ ಸಸಿಗಳ ನಾಟಿ ಮಾಡಿದ್ದಾರೆ. 

‘ಕೆರೆಯ ಕೋಡಿ ಒಡೆಯದಂತೆ ಶಾಶ್ವತವಾಗಿ ಕಲ್ಲಿನ ತಡೆಗೋಡೆ ನಿರ್ಮಿಸುವಂತೆ ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಪರಿಹಾರ ಕಲ್ಪಿಸುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ. ಕೋಡಿ ಒಡೆದ ಪರಿಣಾಮ ಬೆಳೆ ನೀರು ಪಾಲಾಗಿದೆ. ಇದೀಗ ಎರಡನೇ ಬಾರಿಗೆ ಬೆಳೆ ನಾಟಿ ಮಾಡಿದ್ದೇವೆ’ ಎಂದು ರೈತ ಎನ್‌. ಸುಂದರೇಶ್‌ ‘ಪ್ರಜಾವಾಣಿ’ ಎದುರು ಸಂಕಷ್ಟ ಬಿಚ್ಚಿಟ್ಟರು.

‘ಕೆರೆಯ ಅಕ್ಕಪಕ್ಕದಲ್ಲಿ ಮನೆಗಳೂ ಇವೆ. ಕೆಲವೊಮ್ಮೆ ಮನೆಗಳಿಗೂ ಕೆರೆಯ ನೀರು ನುಗ್ಗುತ್ತದೆ. ಹೀಗಾಗಿಯೇ ಅಧಿಕಾರಿಗಳು ಮಳೆಗಾಲ ಮುಗಿದ ಬಳಿಕ ಶಾಶ್ವತ ಪರಿಹಾರ ಕಾಮಗಾರಿ ಮಾಡಬೇಕು’ ಎಂದು ಬೊಮ್ಮನಕಟ್ಟೆ ನಿವಾಸಿ ಎಚ್‌.ಕೆಂಚಪ್ಪ ಆಗ್ರಹಿಸಿದರು.

ಬೊಮ್ಮನಕಟ್ಟೆಯ ಕೆರೆಯ ಕೋಡಿ ಒಡೆದು ಭತ್ತದ ಬೆಳೆಗೆ ನೀರು ನುಗ್ಗಿರುವುದು
ಬೊಮ್ಮನಕಟ್ಟೆಯ ಕೆರೆಯ ಕೋಡಿ ಒಡೆದು ಭತ್ತದ ಬೆಳೆಗೆ ನೀರು ನುಗ್ಗಿರುವುದು
ಬೊಮ್ಮನಕಟ್ಟೆ ಕೆರೆಯ ಕೋಡಿ ಒಡೆಯದಂತೆ ಶಾಶ್ವತ ಕಾಮಗಾರಿಯನ್ನು ಮಳೆಗಾಲ ಮುಗಿದ ಬಳಿಕ ಕೈಗೊಳ್ಳಲಾಗುವುದು. ಇದೀಗ ತಾತ್ಕಾಲಿಕವಾಗಿ ಮಣ್ಣು ಹಾಕಲಾಗಿದೆ.
–ಕವಿತಾ ಯೋಗಪ್ಪನವರ, ಆಯುಕ್ತೆ ಮಹಾನಗರ ಪಾಲಿಕೆ
ಬೆಳೆ ಹಾನಿಯಾಗಿರುವ ಬಗ್ಗೆ ಜಂಟಿ ಸಮೀಕ್ಷೆ ಮಾಡಲಾಗುವುದು. ರೈತರು ಪಹಣಿ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದರೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.
–ರಮೇಶ್ ಎಸ್‌.ಟಿ. ಸಹಾಯಕ ಕೃಷಿ ನಿರ್ದೇಶಕ
ಮಹಾನಗರ ಪಾಲಿಕೆಯು ಕೆರೆ ಕೋಡಿ ಒಡೆಯದಂತೆ ಕಲ್ಲಿನ ತಡೆಗೋಡೆ ನಿರ್ಮಿಸಬೇಕು. ಈಗ ಹಾನಿಯಾಗಿರುವ ಬೆಳೆಗೆ ತಕ್ಷಣ ಸರ್ಕಾರ ಪರಿಹಾರ ನೀಡಬೇಕು.
–ಎನ್‌. ಸುಂದರೇಶ್‌ ರೈತ ಬೊಮ್ಮನಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT