ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿರಂಜಿತ ವರದಿಗಳು ಪ್ರಚೋದನೆಗೆ ದಾರಿ: ಬಿ.ಎಸ್.ಯಡಿಯೂರಪ್ಪ

ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Last Updated 8 ಅಕ್ಟೋಬರ್ 2021, 16:00 IST
ಅಕ್ಷರ ಗಾತ್ರ

ಶಿವಮೊಗ್ಗ: ಸುದ್ದಿ ಬಿತ್ತರಣೆಯ ವಿಷಯದಲ್ಲಿ ಮಾಧ್ಯಮಗಳು ಪೈಪೋಟಿಗೆ ಇಳಿದಿವೆ. ಅತಿರಂಚಿತ ವರದಿಗಳಿಗೆ ಆದ್ಯತೆ ನೀಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದರು.

ಕುವೆಂಪು ರಂಗಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಅನನ್ಯ. ಜನತೆಯ ಆಶೋತ್ತರ ಈಡೇರಿಸುವಲ್ಲಿ ಶ್ರಮಿಸುತ್ತಿವೆ. ಸಮಾಜದ ಕುಂದುಕೊರತೆ, ದುಖಃ ದುಮ್ಮಾನಗಳಿಗೆ ಕನ್ನಡಿಯಾಗಿವೆ. ಸಮಾಜದ ಆಗುಹೋಗುಗಳನ್ನು ಸರ್ಕಾರದ ಗಮನಕ್ಕೆ ತರುತ್ತಿವೆ.ಸರ್ಕಾರ ಮತ್ತು ಜನರ ಮಧ್ಯೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿವೆ.ಕೋವಿಡ್‌ ಮತ್ತಿತರ ಸಂಕಷ್ಟದ ಸಮಯದಲ್ಲಿ ಕೊಡುಗೆ ಅನನ್ಯ. ಇಂತಹ ಶ್ರೇಯಸ್ಸು ಪಡೆದ ಮಾಧ್ಯಮಗಳು ರೋಚಕ ವರದಿಗಳಿಗಿಂತ, ರಚನಾತ್ಮಕ ವರದಿಗಳಿಗೆ ಆದ್ಯತೆ ನೀಡಿದರೆ ಸಮಾಜಕ್ಕೆ ಒಳಿತಾಗಲಿದೆ. ಅತಿ ರಂಚಿತ ವರದಿಗಳಿಂದ ಪ್ರಚೋದನೆಗೆ ದಾರಿಯಾಗುತ್ತದೆ. ಸಮಾಜಕ್ಕೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಕರ್ತರಿಗೆ ಸ್ವಯಂ ಶಿಸ್ತು ಅಗತ್ಯ. ಪತ್ರಿಕೆಗಳಿಗೆ ಓದುಗರು, ದೃಶ್ಯ ಮಾಧ್ಯಮಗಳಿಗೆ ವೀಕ್ಷಕರು ನಿಜವಾದ ಮಾಲೀಕರು. ವ್ಯಕ್ತಿ ಮೌಲ್ಯದ ಕುಸಿತ ಎಲ್ಲೆಡೆ ಕಾಣುತ್ತಿದ್ದೇವೆ. ಅದು ಮಾಧ್ಯಮಕ್ಕೂ ಸೋಕಿದೆ. ಪತ್ರಕರ್ತರಿಗೆ ವೃತ್ತಿಪರತೆ ಅಗತ್ಯ ಎಂದು ಕಿವಿಮಾತು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ದೃಶ್ಯ ಮಾಧ್ಯಮಗಳು ಅತಿರೇಕತೆಯ ಪರಮಾವಧಿ ತಲುಪಿವೆ. ಸತ್ಯಕ್ಕಿಂತ ಸುಳ್ಳುಗಳೇ ತುಂಬಿವೆ. ಮುದ್ರಣ ಮಾಧ್ಯಮಗಳು ಸಾಂಪ್ರದಾಯಿಕತೆ ಜತೆಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಸವಾಲುಗಳ ಮಧ್ಯೆಯೂ ಅಸ್ತಿತ್ವ ಉಳಿಸಿಕೊಂಡಿವೆ. ಓದುಗರ ಸಂಖ್ಯೆ ಹೆಚ್ಚಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದ ಮೇಲೆ ಏರಿದ ತುರ್ತುಪರಿಸ್ಥಿತಿ ಪತ್ರಿಕಾ ರಂಗದ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತ್ತು. ಪತ್ರಿಕೆಗಳು 18 ತಿಂಗಳು ಸಂಪಾದಕೀಯ ಬರೆಯಲಿಲ್ಲ. ಪತ್ರಿಕಾ ಸ್ವಾತಂತ್ರ್ಯದ ಹರಣ ನಡೆಯಿತು. ಬಹುತೇಕ ಮಾಧ್ಯಮಗಳು ಸೆನ್ಸರ್‌ಗೆ ಒಳಗಾಗಿದ್ದವು. ಪತ್ರಿಕಾ ಸ್ವಾತಂತ್ರ್ಯದ ಮೇಲೆ ಮತ್ತೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕಿದೆ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವೈ.ರಾಘವೇಂದ್ರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್‌.ಅರುಣ್‌, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಚ್‌.ಷಡಾಕ್ಷರಿ, ಜೆಡಿಎಸ್‌ ಮುಖಂಡ ಎಂ.ಶ್ರೀಕಾಂತ್, ರಾಜ್ಯ ಸಂಘದ ನಿರ್ದೇಶಕ ರವಿಕುಮಾರ್ ಟೆಲೆಕ್ಸ್, ಚನ್ನವೀರಪ್ಪ, ದತ್ತಾತ್ರಿ ಉಪಸ್ಥಿತರಿದ್ದರು.

ಉಸ್ತಾದ್‌ ಹುಮಾಯೂನ್‌ ಹರ್ಲಾಪುರ ಮತ್ತು ಸಂಗಡಿಗರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಾಗರ ಮಹಿಳಾ ತಂಡ ನಡೆಸಿಕೊಟ್ಟ ಡೊಳ್ಳುಕುಣಿತ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT