ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೀಕ್ಷಕನ ಅವೈಜ್ಞಾನಿಕ ಚಿಕಿತ್ಸೆಯಿಂದ ಎಮ್ಮೆ ಸಾವು

ವೇಲ್, ದಬ್ಬಳ ಬಳಸಿ ಎಮ್ಮೆ ಗರ್ಭಕೋಶಕ್ಕೆ ಹೊಲಿಗೆ
Last Updated 21 ಮಾರ್ಚ್ 2022, 5:24 IST
ಅಕ್ಷರ ಗಾತ್ರ

ಹೊಸನಗರ: ಕರು ಹಾಕಿದ್ದ ಎಮ್ಮೆಯ ಗರ್ಭಕೋಶಕ್ಕೆ, ವೇಲ್‌ ಹರಿದು ದಾರ ವನ್ನಾಗಿ ಮಾಡಿಕೊಂಡ ಪಶು ವೀಕ್ಷಕ ದಬ್ಬಳದಿಂದ ಹೊಲಿಗೆ ಹಾಕಿದರು. ಇದರಿಂದ ಎಮ್ಮೆ ಮೃತಪಟ್ಟಿದೆ ಎಂದು ಮಾಲೀಕರು ಆರೋಪಿಸಿದ್ದಾರೆ.

ತಾಲ್ಲೂಕಿನ ಮಾರುತಿಪುರ ಬಳಿಯ ಅರಗೋಡಿ ಗ್ರಾಮದ ರೈತ ಶಿವಾನಂದ ಅವರ ಎಮ್ಮೆಯು ಭಾನುವಾರ ಮೃತಪಟ್ಟಿದ್ದು, ಪಶು ವೀಕ್ಷಕ ಅವೈಜ್ಞಾನಿಕ ಚಿಕಿತ್ಸೆ ನೀಡಿದ್ದರಿಂದ ಸಾವನ್ನಪ್ಪಿದೆ. ಪ್ರಸವದ ಸಮಯದಲ್ಲಿ ವೈದ್ಯರು ಸಿಗದೇ ಆನಂತರ ನಂತರ ಬಂದ ಪಶು ವೀಕ್ಷಕರ ಚಿಕಿತ್ಸಾ ವಿಧಾನದಿಂದ ಬಾಣಂತಿ ಎಮ್ಮೆ ಅಸುನೀಗಿದೆ ಎಂದಿದ್ದಾರೆ.

‘4 ದಿನಗಳ ಹಿಂದೆ ನಮ್ಮ ಮನೆಯ ಎಮ್ಮೆ, ಕರು ಹಾಕುವ ಸಮಯದಲ್ಲಿ ತೀರಾ ಒದ್ದಾಡುತ್ತಿತ್ತು. ತಾಲ್ಲೂಕಿನ ಪಶು ವೈದ್ಯ ಇಲಾಖೆಯನ್ನು ಸಂಪರ್ಕಿಸಿದಾಗ ಇಲಾಖೆಯ ಯಾವ ಸಿಬ್ಬಂದಿಯೂ ಸ್ಪಂದಿಸಲಿಲ್ಲ’ ಎಂದು ಮಾಲೀಕ ಶಿವಾನಂದ ದೂರಿದರು.

‘ಎಮ್ಮೆಯು ಕರು ಹಾಕುವ ಸಮಯದಲ್ಲಿ ಹೊಸನಗರದ ಪಶು ಆಸ್ಪತ್ರೆಗೆ ಹೋದೆ. ಕೂಡಲೇ ಬನ್ನಿ ಎಂದು ಮನವಿ ಮಾಡಿದೆ. ತಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಸಬೂಬು ಹೇಳಿದರು ಎಂದರು.

‘ಸ್ಥಳೀಯ ಪಶು ಇನ್‌ಸ್ಪೆಕ್ಟರ್‌ ಸರಿಯಾದ ಸಮಯಕ್ಕೆ ಬಾರದೇ ಎರಡು ದಿನಗಳ ನಂತರ ಬಂದರು. ಇಲಾಖೆಯ ಔಷಧ, ಮಾತ್ರೆ, ಇಂಜೆಕ್ಷನ್ ಕೊಟ್ಟರೂ ಖಾಸಗಿ ಆಸ್ಪತ್ರೆಯಿಂದ ತಂದಿದ್ದು ಎಂದು ಕಾರಣ ಹೇಳಿ ಸಾವಿರಾರು ರೂಪಾಯಿ ತೆಗೆದುಕೊಂಡರು’ ಎಂದು ಆರೋಪಿಸಿದರು.

ಆರೈಕೆ ಮಾಡಿ ಒಂದು ದಿನ ಕಳೆದರೂ ಅಧಿಕ ರಕ್ತ ಸ್ರಾವವಾಗುತ್ತಿದ್ದುದರಿಂದ ಪಶು ವೀಕ್ಷಕ ನಾಗೇಂದ್ರ ಅವರು ಬಂದು, 'ಮನೆಯಲ್ಲಿದ್ದ ಚೂಡಿದಾರದ ವೇಲ್ ಅನ್ನು ಹರಿದು ಅದನ್ನು ದಾರವಾಗಿ ಮಾಡಿಕೊಂಡು ಗೋಣಿ ಚೀಲ ಹೊಲಿಯುವ ದಬ್ಬಳದಿಂದ ಎಮ್ಮೆಯ ಗರ್ಭಕೋಶದ ಹೊರಭಾಗಕ್ಕೆ ಹೊಲಿಗೆ ಹಾಕಿ ಎಲ್ಲಾ ಸರಿ ಹೋಗುತ್ತೆ ಎಂದು ಹೊರಟರು. ಇದರಿಂದಾಗಿ ಎಮ್ಮೆ ಅಸುನೀಗಿದೆ’ ಶಿವಾನಂದ ದೂರಿದರು.

ಗಣತಿ ಮಾಡದ ಇಲಾಖೆ: ‘ಪಶು ವೈದ್ಯ ಇಲಾಖೆಯಿಂದ ಜಾನುವಾರು ಗಣತಿ ಸಹ ಮಾಡಿಲ್ಲ. ಗಣತಿ ಮಾಡಿ, ಬ್ಯಾಡ್ಜ್ ಹಾಕಿದ್ದರೆ ಕನಿಷ್ಠ ಸರ್ಕಾರದಿಂದ ವಿಮೆಯ ಹಣವಾದರೂ ಬರುತ್ತಿತ್ತು. ₹ 30 ಸಾವಿರ ಬೆಲೆಯ ಎಮ್ಮೆ ಕಳೆದುಕೊಂಡೆ. ನಯಾಪೈಸೆ ಪರಿಹಾರ ಬಂದಿಲ್ಲ’ ಎಂದು ರೈತ ಶಿವಾನಂದ ನೊಂದು ನುಡಿದರು.

‘ಇಷ್ಟು ಮುಂದುವರಿದ ಕಾಲದಲ್ಲಿಯೂ ವೇಲ್, ದಬ್ಬಳ ಬಳಸಿ ಎಮ್ಮೆಗೆ ಅಮಾನುಷವಾಗಿ ಚಿಕಿತ್ಸೆ ಮಾಡಿದ್ದಾರೆ. ಪಶು ವೀಕ್ಷಕನ ಅಸಮರ್ಥತೆಯಿಂದ ಎಮ್ಮೆ ಪ್ರಾಣ ಬಿಟ್ಟಿದೆ. ಇಂತಹ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ರೈತನಿಗೆ ಪರಿಹಾರ ನೀಡಬೇಕು’ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT