ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಪ್ರಚಾರಕ್ಕೆ ಮತದಾರರಿಂದ ಉತ್ತರ: ಬಿವೈಆರ್

ಇನ್ನು ಜನರ ಸಮಸ್ಯೆ, ರೈತಾಪಿ ವರ್ಗದ ಸಂಕಷ್ಟದತ್ತ ಗಮನಹರಿಸುವೆ
Published 5 ಜೂನ್ 2024, 15:44 IST
Last Updated 5 ಜೂನ್ 2024, 15:44 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಚುನಾವಣೆಗೆ ಮುನ್ನ ನಮ್ಮ ಕುಟುಂಬದ ವಿರುದ್ಧ ಮಾಡಿದ್ದ ಎಲ್ಲ ಅಪಪ್ರಚಾರಗಳಿಗೂ ಮತದಾರರೇ ಉತ್ತರ ಕೊಟ್ಟಿದ್ದಾರೆ. ಇನ್ನು ಆ ರಾಜಕಾರಣ ಸಾಕು. ಜಿಲ್ಲೆಯ ಜನರ ಸಮಸ್ಯೆ, ರೈತಾಪಿ ವರ್ಗದ ಸಂಕಷ್ಟಗಳತ್ತ ಗಮನಹರಿಸೋಣ’ ಎಂದು ನೂತನ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

‘ಲೋಕಸಭಾ ಚುನಾವಣೆ ಮುಗಿದಿದೆ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸೇತರ ಪಕ್ಷವೊಂದು 3ನೇ ಬಾರಿಗೆ ಸರ್ಕಾರ ರಚನೆ ಮಾಡುತ್ತಿದೆ. ಇದಕ್ಕೆ ಕಾರಣರಾದ ಎಲ್ಲ ಮತದಾರರಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ ಅಭಿನಂದನೆ ಸಲ್ಲಿಸುವೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆ, ಭದ್ರಾವತಿಯ ವಿಐಎಸ್ಎಲ್‌ಗೆ ಪುನಶ್ಚೇತನ, ಅರಣ್ಯ ಹಕ್ಕು ಮತ್ತು ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗಳಿವೆ. ಇದಕ್ಕೆ ಸ್ಪಂದಿಸಬೇಕಾಗಿದೆ. ರಾಜ್ಯ ಸರ್ಕಾರದ ನೆರವು ಕೂಡ ಇದಕ್ಕೆ ಬೇಕಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಬರಬೇಕು. ಅಭಿವೃದ್ಧಿಯ ಮೂಲಕವೇ ಜನರ ಋಣ ತೀರಿಸಬೇಕು. ಆ ನಿಟ್ಟಿನಲ್ಲಿ ಮತ್ತಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವೆ’ ಎಂದರು.

‘ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಗೆಲ್ಲುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ ಕೇವಲ 9 ಸ್ಥಾನಗಳಿಗೆ ಸೀಮಿತಗೊಂಡಿರುವುದು ಆ ಪಕ್ಷಕ್ಕೆ ಮುಖಭಂಗವಾಗಿದೆ. ಮತದಾರರು ನರೇಂದ್ರ ಮೋದಿಗೆ ಬೆಂಬಲ ನೀಡಿದ್ದಾರೆ. ಜೊತೆಗೆ ಜೆಡಿಎಸ್ ಬೆಂಬಲ ಕೂಡ ನಮಗೆ ಇದ್ದಿದ್ದರಿಂದ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಲು ನೆರವಾಯಿತು. ಎಚ್‌.ಡಿ.ಕುಮಾರಸ್ವಾಮಿ ಶಿವಮೊಗ್ಗ ಕ್ಷೇತ್ರಕ್ಕೆ ಎರಡು ಬಾರಿ ಬಂದು ಪ್ರಚಾರ ಮಾಡಿದರು ಅವರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದು ಹೇಳಿದರು.

‘ಬೈಂದೂರು ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನನಗೆ ಅತ್ಯಧಿಕ ಮತ ಬಂದಿವೆ. ಹಾಗೆ ನೋಡಿದರೆ ಶಿಕಾರಿಪುರದಲ್ಲಿ ಸ್ವಲ್ಪ ಅಂತರ ಕಡಿಮೆಯಾಗಿದೆ. ಉಳಿದೆಲ್ಲ ಕಡೆ ಹೆಚ್ಚಾಗಿದೆ. ಅದೇಕೋ ಶಿಕಾರಿಪುರದ ಜನ 87 ಸಾವಿರಕ್ಕಿಂತ ಹೆಚ್ಚು ಮತ ಬಿಜೆಪಿಗೆ ಕೊಡುತ್ತಿಲ್ಲ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್. ರುದ್ರೇಗೌಡ, ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್‌, ಮುಖಂಡರಾದ ಗಿರೀಶ್ ಪಟೇಲ್, ಆರ್.ಕೆ. ಸಿದ್ರಾಮಣ್ಣ, ಎಚ್‌.ದತ್ತಾತ್ರಿ, ಕೆ.ಜಿ. ಕುಮಾರಸ್ವಾಮಿ, ಅಶೋಕ್‌ನಾಯಕ್, ಎನ್‌.ಜೆ. ರಾಜಶೇಖರ್, ಡಾ.ಧನಂಜಯ ಸರ್ಜಿ, ಹರಿಕೃಷ್ಣ, ನಾಗರಾಜ್, ಮಧುಸೂದನ್, ಮಾಲತೇಶ್, ಅಣ್ಣಪ್ಪ, ಮೋಹನ್‌ರೆಡ್ಡಿ, ಶಿವಣ್ಣ, ಉಮೇಶ್ ಇದ್ದರು.

Quote - ಶಿವಮೊಗ್ಗದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ. ಯುವಶಕ್ತಿ ಅದಕ್ಕೆ ಬಲಿಯಾಗುತ್ತಿದೆ. ಅಹಿತಕರ ಘಟನೆಗಳು ಹೆಚ್ಚಾಗುತ್ತಿವೆ. ಅದು ಮರುಕಳಿಸಬಾರದು. ಬಿ.ವೈ.ರಾಘವೇಂದ್ರ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT