ಶಿವಮೊಗ್ಗ: ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಗೋಪಿ ವೃತ್ತದಲ್ಲಿ ಪೋಸ್ಟ್ ಕಾರ್ಡ್ ಚಳವಳಿ ನಡೆಸಿದರು.
ಕೋವಿಡ್ ಅಲೆಯ ಸಂಕಷ್ಟಕ್ಕೆ ಜನರು ಸಿಲುಕಿದ್ದಾರೆ. ಲಾಕ್‌ಡೌನ್‌ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ 2021–22ನೇ ಸಾಲಿನ ಆಸ್ತಿ ತೆರಿಗೆ ಕಾನೂನು ತಿದ್ದುಪಡಿ ಮಾಡುವ ಮೂಲಕ ಅವೈಜ್ಞಾನಿಕವಾಗಿ ಹೆಚ್ಚಿಸಿದೆ ಎಂದು ದೂರಿದರು.
‘ಎಸ್ಆರ್ ದರ ಆಧರಿಸಿ ವಾಸದ ಮನೆಗಳು, ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳಿಗೆ ಈ ಹಿಂದಿನ ವರ್ಷದ ತೆರಿಗೆ ಮೇಲೆ ಹಲವು ಪಟ್ಟು ಹೆಚ್ಚು ತೆರಿಗೆ ವಿಧಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಆಸ್ತಿ ತೆರಿಗೆ ಮೇಲೆ ಶೇ 50ರಷ್ಟು ರಿಯಾಯಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಏಕೆ ಸಾಧ್ಯವಾಗಿಲ್ಲ’ ಎಂದು ಪ್ರಶ್ನಿಸಿದರು.
ಎಸ್ಆರ್ ದರ ಆಧಾರಿತ ತೆರಿಗೆ ಕೈಬಿಡಬೇಕು. ತಿದ್ದುಪಡಿ ಮಸೂದೆ ಹಿಂದಕ್ಕೆ ಪಡೆಯಬೇಕು. ಶೇ 50ರಷ್ಟು ವಿನಾಯಿತಿ ಘೋಷಣೆ ಮಾಡಬೇಕು. ಇಂತಹ ಸಂಕಷ್ಟದ ಸಮಯದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಭರಿಸಲು ಸಾಧ್ಯವಿಲ್ಲ ಎಂದು ಪೋಸ್ಟ್ ಕಾರ್ಡ್‌ನಲ್ಲಿ ಬರೆದು ಆಗ್ರಹಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಡಾ.ಎನ್.ಎಲ್.ನಾಯಕ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಡಿ.ಜಿ.ಮಂಜುನಾಥ್, ಸತೀಶ್ ಕುಮಾರ್ ಶೆಟ್ಟಿ, ಪುಷ್ಪಾ ಶೆಟ್ಟಿ, ಎಸ್.ಬಿ.ಅಶೋಕ್ ಕುಮಾರ್, ವಿಜಯಕುಮಾರ್, ಕೆ.ರಂಗನಾಥ್ ಚಳವಳಿಯ ನೇತೃತ್ವ ವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.