ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದನ್ನು ಖಂಡಿಸಿ ಮಂಗಳವಾರ ಎನ್‌ಎಸ್‌ಯುಐ ವತಿಯಿಂದ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಕಾರರು ರೈಲು ನಿಲ್ದಾಣವನ್ನು ಪ್ರವೇಶಿಸಲು ಮುಂದಾದಾಗ, ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ಕಾರ್ಯ
ಕರ್ತರನ್ನು ತಡೆದರು. ಅದನ್ನು ಮೀರಿ ಒಳ ನುಸುಳಲು ಪ್ರಯತ್ನಿಸಿದವರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಅದೇ ರೀತಿ ತೀರ್ಪಿನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕೂಡ ನೀಡಲಾಗಿದೆ. ಆದರೆ ಆದೇಶದ ಪ್ರತಿ ಕೈಗೆ ಸಿಗುವ ಹೊತ್ತಿಗಾಗಲೇ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಕೇಂದ್ರ ಸರ್ಕಾರದ ರಾಜಕೀಯ ಪಿತೂರಿ ಎಂದು ದೂರಿದರು.
‘ಭಾಷಣದ ಮಧ್ಯ ಮೋದಿ ಹೆಸರಿನವರ ವಿರುದ್ಧ ರಾಹುಲ್ ಗಾಂಧಿ ಅವರು ಮಾತನಾಡಿದ್ದು ಒಬಿಸಿ ಪಟ್ಟಿಯಲ್ಲಿರುವರಿಗೆ ಅವಮಾನವಾಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ನೀರವ್ ಮೋದಿ ಒಬಿಸಿಗೆ ಸೇರಿದವನೇ?
ಲಲಿತ್ ಮೋದಿ ಒಬಿಸಿಯೇ? ಅವರು ಬಡ ಜನರ ಹಣದೊಂದಿಗೆ
ದೇಶ ಬಿಟ್ಟು ಪರಾರಿಯಾಗಿದ್ದಾರೆ. ಅಂತಹ ಭ್ರಷ್ಟರನ್ನು ಟೀಕಿಸಿದರೆ ಬಿಜೆಪಿ ಸರ್ಕಾರಕ್ಕೆ ನೋವಾಗುತ್ತದೆ. ದೇಶ ಉಳಿಸಲು ಕೆಲಸ ಮಾಡಿದವರನ್ನು ಬಿಜೆಪಿ ಶಿಕ್ಷಿಸುತ್ತದೆ. ದೇಶದ ಹಣ ಲೂಟಿ ಮಾಡಿದವರನ್ನು ವಿದೇಶಕ್ಕೆ ಕಳುಹಿಸುತ್ತದೆ’ ಎಂದು ಆರೋಪಿಸಿದರು.
‘ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದನ್ನು ಹಿಂಪಡೆಯಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ರಾಹುಲ್ ಗಾಂಧಿ ಅವರ ಅನರ್ಹತೆ ತಡೆ ಹಿಡಿಯಬೇಕು’ ಎಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಕಾಂಗ್ರೆಸ್ ಮುಖಂಡ
ಸಿಜಿ ಮಧುಸೂದನ್, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್, ಕಾರ್ಯಧ್ಯಕ್ಷ ರವಿ ಕಟಿಕೆರೆ, ಪ್ರಮುಖರಾದ ಚರಣ್, ಹರ್ಷಿತ್, ರವಿ, ಚಂದ್ರೋಜಿ ರಾವ್, ಚರಣ್, ಸಾಗರ್, ವರುಣ್ ವಿ. ಪಂಡಿತ್, ಪ್ರಮೋದ್, ಬಸವರಾಜ್, ಅಬ್ದುಲ್, ದರ್ಶನ್, ಆಕಾಶ, ಗಿರೀಶ್, ತೌಫಿಕ್, ಪ್ರದೀಪ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.