ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬ: ನಾಳೆಯಿಂದ ರೇಣುಕಾಂಬಾ ಜಾತ್ರೆ

Published 14 ಮಾರ್ಚ್ 2024, 6:52 IST
Last Updated 14 ಮಾರ್ಚ್ 2024, 6:52 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬಾ ಜಾತ್ರಾ ಮಹೋತ್ಸವ ಮಾರ್ಚ್ 15ರಿಂದ ಮಾರ್ಚ್ 20ರವರೆಗೆ ನಡೆಯಲಿದೆ.

ಮಹೋತ್ಸವಕ್ಕೆ ತಾಲ್ಲೂಕು ಆಡಳಿತ, ಚಂದ್ರಗುತ್ತಿ ಗ್ರಾಮ ಪಂಚಾಯಿತಿ ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಚ್ 15ರಂದು ಕಂಕಣ ಬಂಧನ, ಸಿಂಹ ಧ್ವಜಾರೋಹಣ ಭೇರಿತಾಡನೆ, ಮಾ. 16ರಂದು ಕಳಶ ಸ್ಥಾಪನೆ, ಯಾಗಶಾಲೆ ಪ್ರವೇಶ, ವೃಷಭ ಯಂತ್ರೋತ್ಸವ, ಪುಷ್ಪಮಂಜರಿ ಹಾಗೂ ಮಾರ್ಚ್ 17ರಂದು ಹೂವಿನ ತೇರು ನಡೆಯಲಿದೆ. ಮಾರ್ಚ್ 18ರಂದು ಬ್ರಹ್ಮ ರಥೋತ್ಸವ ಹಾಗೂ ಮಾರ್ಚ್‌ 19ರಂದು ದೇವಿಗೆ ಓಕುಳಿ ಹಾಗೂ ಮಾ. 20ರಂದು ತುಲಾಭಾರ ನಡೆಯಲಿದೆ. ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಪೂಜಾ ವಿಧಿ-ವಿಧಾನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ತೊಟ್ಟಿಲು ಬಾವಿ ಸಮೀಪ ದೇವರಿಗೆ ನೇವೈದ್ಯ ಹಾಗೂ ಹಣ್ಣು ಕಾಯಿ ಪೂಜೆ ಸಲ್ಲಿಸಲು ಅವಕಾಶವಿದೆ.

ತೊಟ್ಟಿಲು ಬಾವಿಯಲ್ಲಿ ನೀರು ತುಂಬುವುದನ್ನು ಹಾಗೂ ಬೆತ್ತಲೆ ಸೇವೆ ಆಚರಣೆಗೆ ಹಲವು ವರ್ಷಗಳಿಂದ ನಿಷೇಧ ಹೇರಲಾಗಿದೆ.

ಜಾತ್ರೆ ಅಂಗವಾಗಿ ರೇಣುಕಾಂಬಾ ದೇವಸ್ಥಾನದ ಮೆಟ್ಟಿಲು, ರಥಬೀದಿ ಆವರಣದುದ್ದಕ್ಕೂ ಮತ್ತು ಗ್ರಾಮದಲ್ಲಿನ ಪರಿವಾರ ದೇವಸ್ಥಾನಗಳನ್ನು ಸಿಂಗರಿಸಲಾಗಿದೆ. ಗ್ರಾಮವನ್ನು ಸಂಪೂರ್ಣ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿ ಆಡಳಿತ ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡಿಕೊಂಡಿದೆ. ಸ್ವಚ್ಛತೆಗೆ ಆದ್ಯತೆ ನೀಡಲು ಮುಂದಾಗಿದ್ದು, ಸುಲಭ ಶೌಚಾಲಯ ನಿರ್ಮಿಸಲಾಗಿದೆ.

ಸೊರಬ, ಶಿರಸಿ, ಸಿದ್ದಾಪುರ ಮಾರ್ಗವಾಗಿ ಬರುವ ವಾಹನಗಳ ದಟ್ಟಣೆ ತಪ್ಪಿಸಲು ಗ್ರಾಮ ಪಂಚಾಯಿತಿ ವತಿಯಿಂದ ಸಮರ್ಪಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಹಾವೇರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಧಾರವಾಡ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದು, ಅಂಗಡಿ ಹಾಕಿಕೊಂಡಿದ್ದಾರೆ.

‘ಬ್ರಹ್ಮ ರಥೋತ್ಸವದಂದು ಉಪಾಧ್ಯೆವಂತರು ಮತ್ತು ತಾಂತ್ರಿಕ ಅರ್ಚಕರ ಸಮ್ಮುಖದಲ್ಲಿ ಪರಿಹಾರ ದೇವತೆಗಳಿಗೆ ಅನ್ನ ಮತ್ತು ಸೊಪ್ಪಿನಿಂದ ಮಿಶ್ರಣ ಮಾಡಿದ ಆಹಾರವನ್ನು ಬಲಿ ಕೊಡುವುದರ ಮೂಲಕ ದೇವಿಯ ಪುರ ಮೆರವಣಿಗೆ ನಡೆಸಲಾಗುವುದು’ ಎಂದು ಪ್ರಧಾನ ಅರ್ಚಕ ಅರವಿಂದ್ ಭಟ್ ತಿಳಿಸಿದರು.

ಪ್ರತಿ ವರ್ಷ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಕಾರಣ ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹರೀಶಿ, ಸೊರಬ, ಸಿದ್ದಾಪುರ ರಸ್ತೆ ಮಾರ್ಗದಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ಬೈಕ್ ಹಾಗೂ ಕಾರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೂರು ದಿನಗಳಲ್ಲೂ ಅಧಿಕ ಸಂಖ್ಯೆಯಲ್ಲಿ ಜಾತ್ರೆಗೆ ಭಕ್ತರು ಬರುವುದರಿಂದ 24x7 ರಂತೆ ಮೂರು ಪಾಳಿಯಲ್ಲಿ ಪೊಲೀಸರನ್ನು ಬಂದೋಬಸ್ತ್‌‌ಗೆ ನಿಯೋಜನೆ ಮಾಡಲಾಗಿದೆ ಎಂದು ಸಿಪಿಐ ರಮೇಶರಾವ್ ತಿಳಿಸಿದರು.

ಉತ್ತರ ಕರ್ನಾಟಕದ ಭಾಗದಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಸಾರಿಗೆ ಸಂಸ್ಥೆಯಿಂದ ಜಡೆ, ಆನವಟ್ಟಿ, ಶಿರಾಳಕೊಪ್ಪ ಮಾರ್ಗವಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ರೇಣುಕಾಂಬಾ ದೇವಿ
ರೇಣುಕಾಂಬಾ ದೇವಿ

‘ನೀರು ವಸತಿ ವ್ಯವಸ್ಥೆ ಕಲ್ಪಿಸಿ’

ಚಂದ್ರಗುತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ಪ್ರಮುಖ ನದಿಯಾದ ವರದಾ ಹರಿದರೂ ಕುಡಿಯುವ ನೀರಿಗಾಗಿ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿಲ್ಲ ಎನ್ನುವ ಆರೋಪವಿದೆ. ಈಗಾಗಲೇ ನದಿಯ ಒಡಲು ಬರಿದಾಗಿದ್ದು ರೈತರು ಬೆಳೆ ಉಳಿಸಿಕೊಳ್ಳಲು ಹರಸಹಾಸಪಡುತ್ತಿದ್ದಾರೆ. ಜಾತ್ರೆಗೆ ಬರುವ ಭಕ್ತರಿಗೆ ಸಮರ್ಪಕ ನೀರಿನ ಸೌಲಭ್ಯ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಜಾತ್ರಾ ಮಹೋತ್ಸವಕ್ಕೆ ಅಪಾರ ಭಕ್ತರು ಬರುವುದರಿಂದ ಯಾತ್ರಿನಿವಾಸ ಕೊರತೆ ಇದೆ. ಭಕ್ತರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಒದಗಿಸುವ ಅಗತ್ಯವಿದೆ. ದೇವಸ್ಥಾನಕ್ಕೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರೂ ಧಾರ್ಮಿಕ ದತ್ತಿ ಇಲಾಖೆ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದೆ ಎಂದು ಭಕ್ತರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT