ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಖಲಾತಿ ಹೆಚ್ಚಿಸಲು ‘ಮಗು ನಿಮ್ಮದು, ಶೈಕ್ಷಣಿಕ ಜವಾಬ್ದಾರಿ ನಮ್ಮದು’ ಯೋಜನೆ

ರವಿ ಆರ್‌. ತಿಮ್ಮಾಪುರ
Published 9 ಜೂನ್ 2024, 7:00 IST
Last Updated 9 ಜೂನ್ 2024, 7:00 IST
ಅಕ್ಷರ ಗಾತ್ರ

ಆನವಟ್ಟಿ: ಇಲ್ಲಿನ ನೇರಲಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ಸಲುವಾಗಿ ಶಿಕ್ಷಕರು ‘ಮಗು ನಿಮ್ಮದು, ಶೈಕ್ಷಣಿಕ ಜವಾಬ್ದಾರಿ ನಮ್ಮದು’ ಎಂಬ ವಿಶಿಷ್ಠ ಯೋಜನೆಯೊಂದನ್ನು ರೂಪಿಸಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವಂತೆ ಪ್ರೇರೇಪಿಸಲು ಸರ್ಕಾರ ನೀಡುವ ಸವಲತ್ತುಗಳ ಜೊತೆಗೆ ಶಿಕ್ಷಕರು ತಮ್ಮ ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಬೇಕಾಗುವಷ್ಟು ಪೆನ್ನು, ನೋಟ್‌ಬುಕ್‌, ಕಲಿಕಾ ಸಾಮಗ್ರಿ, ಬ್ಯಾಗ್‌ ಕೊಡುತ್ತಿದ್ದಾರೆ. ಸರ್ಕಾರ ನೀಡುವ ಸಮವಸ್ತ್ರ ಬಿಟ್ಟು ಒಂದು ಜೊತೆ ಪ್ರತ್ಯೇಕ ಕಲರ್ ಸಮವಸ್ತ್ರವನ್ನು ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿಗೆ ನೀಡುತ್ತಿದ್ದಾರೆ.

ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ 86 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 90 ಇತ್ತು. ಒಟ್ಟು ಆರು ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಕಳೆದ ವರ್ಷ ಶಾಲೆಗೆ ಒಂದನೇ ತರಗತಿಗೆ 7 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ವರ್ಷ ಶಿಕ್ಷಕರು ಕೈಗೊಂಡ ಹೊಸ ಯೋಜನೆಯಿಂದ ಪ್ರೇರಣೆಗೊಂಡು 12 ಮಂದಿ ದಾಖಲಾಗಿದ್ದಾರೆ. ಜೂನ್‍ ತಿಂಗಳ ಕೊನೆವರೆಗೂ ದಾಖಲಾತಿಗೆ ಅವಕಾಶವಿರುವುದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯನ್ನು ಶಿಕ್ಷಕರು ಹೊಂದಿದ್ದಾರೆ.

ಶಾಲೆಯ ವಿಶೇಷತೆ: ಶಾಲೆಯಲ್ಲಿ ಆರು ಸುಸಜ್ಜಿತ ಕೊಠಡಿಗಳು, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇವೆ. ಸ್ಮಾರ್ಟ್‌ ಕ್ಲಾಸ್‍, ಸ್ಮಾರ್ಟ್‌ ಟಿವಿ, ಗ್ರಂಥಾಲಯ, ಶಾಲೆಯ ಗೋಡೆಗಳ ಮೇಲೆ ಕಲಿಕಾ ವಿಷಯಗಳ ಆಧಾರದಲ್ಲಿ ಸುಂದರವಾದ ಚಿತ್ರಗಳನ್ನು ಬಿಡಿಸಲಾಗಿದೆ. ಅಗತ್ಯ ಸೌಲಭ್ಯ ಒದಗಿಸಲು ದಾನಿಗಳು ಹಾಗೂ ಎಸ್‍ಡಿಎಂಸಿ ಸದಸ್ಯರು ನೆರವಿನ ಹಸ್ತ ಚಾಚಿದ್ದಾರೆ. ಶಾಲೆಯ ಸುತ್ತಲೂ ಕಲಿಕೆಗೆ ಪೊರಕವಾದ ವಾತಾವರಣ ಇದೆ. ವಿದ್ಯಾರ್ಥಿಗಳನ್ನು ಕಾಳಜಿ ಮಾಡುವ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಪ್ರತಿಭಾವಂತ ಶಿಕ್ಷಕರ ತಂಡವಿರುವುದು ಶಾಲೆಯ ವಿಶೇಷತೆ.

‘ಕಳೆದ ವರ್ಷಕ್ಕಿಂತ ಈ ವರ್ಷ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ದಾಖಲಾಗಬೇಕು ಎಂಬ ಉದ್ದೇಶದಿಂದ ‘ಮಗು ನಿಮ್ಮದು, ಶೈಕ್ಷಣಿಕ ಜವಾಬ್ದಾರಿ ನಮ್ಮದು’ ಕಾರ್ಯಕ್ರಮ ರೂಪಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಮುಖ್ಯ ಶಿಕ್ಷಕಿ ಎಚ್‍. ಗೀತಾದೇವಿ ತಿಳಿಸಿದರು.

‘ಮುಖ್ಯ ಶಿಕ್ಷಕಿಯ ಜೊತೆಗೆ ಶಿಕ್ಷಕರಾದ ಕಲಾವತಿ, ರಾಜಶ್ರೀ, ನೀಲಾಕ್ಷಿ, ಪಾಲಾಕ್ಷಪ್ಪ ಬಾವೇರ, ಶಂಭುಲಿಂಗ ಹರಿ ಶೆಟ್ಟರ್ ಅವರ ಅರ್ಪಣಾ ಮನೋಭಾವದಿಂದ ನೇರಲಗಿ ಸರ್ಕಾರಿ ಶಾಲೆಗೆ ಒಳ್ಳೆಯ ಹೆಸರು ಬಂದಿದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಪೈಪೊಟಿ ನೀಡುತ್ತಿದ್ದೇವೆ’ ಎಂದು ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT