ಪಿಎಸ್ಐ ನೇಮಕಾತಿ ಅಕ್ರಮ: ಗೃಹ ಸಚಿವ ಆರಗ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಶಿವಮೊಗ್ಗ: ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿ ಜತೆ ಶಾಮೀಲಾಗಿರುವ ಸಂಶಯವಿದೆ. ತಕ್ಷಣವೇ ಆರಗ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಬಯಲಾಗಿದೆ. ಬಿಜೆಪಿ ನಾಯಕಿಯೇ ಪ್ರಮುಖ ಆರೋಪಿ. ಅವರನ್ನು ಬಂಧಿಸಿರುವುದು ದೊಡ್ಡ ಸಾಧನೆಯಲ್ಲ. ಮಂಪರು ಪರೀಕ್ಷೆಗೆ ಒಳಪಡಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈ ಹೇಳಿಕೆಯ ಹಿಂದೆ ಕುತಂತ್ರವಿದೆ. ಅವರನ್ನು ರಕ್ಷಿಸುವ ತಂತ್ರ ಅಡಗಿದೆ’ ಎಂದು ಆರೋಪಿಸಿದರು.
ಪಿಎಸ್ಐ ನೇಮಕಾತಿ ಅಕ್ರಮದ ಕಾರಣ ಇಡೀ ಆಯ್ಕೆ ಪಟ್ಟಿಯನ್ನೇ ರದ್ದುಪಡಿಸಿ, ಮರುಪರೀಕ್ಷೆಗೆ ಸರ್ಕಾರ ಆದೇಶ ಮಾಡಿರುವುದು ಸರಿಯಲ್ಲ. ಮರು ಪರೀಕ್ಷೆ ನೆಪದಲ್ಲಿ ಆಪಾದಿತರನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ. ಪಿಎಸ್ಐ ಆಯ್ಕೆಗೆ ಪರೀಕ್ಷೆ ಬರೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿದೆ. ಹಲವು ಆಕಾಂಕ್ಷಿಗಳು ಅತ್ಯಂತ ಬಡತನದಿಂದ ಬಂದು, ಕಷ್ಟಪಟ್ಟು ಓದಿ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಈಗ ಮರು ಪರೀಕ್ಷೆ ಮಾಡಿದರೆ ಜಿಗುಪ್ಸೆಗೊಂಡು ಆತ್ಮಹತ್ಯೆಗೂ ಮುಂದಾಗಬಹುದು. ಹಾಗಾಗಿ, ತಾತ್ಕಾಲಿಕ ಪಟ್ಟಿಯನ್ನು ರದ್ದಪಡಿಸುವ ನಿರ್ಧಾರ ಮತ್ತೊಮ್ಮೆ ಪರಿಶೀಲಿಸಬೇಕು. ಸಿಐಡಿ ತನಿಖೆ ಪೂರ್ಣಗೊಳ್ಳುವ ಮುನ್ನವೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.