ಶನಿವಾರ, ಅಕ್ಟೋಬರ್ 16, 2021
22 °C

ಸಾಮಾನ್ಯರಿಗೂ ಅಧಿಕಾರ ನೀಡಿದ್ದು ಕಾಂಗ್ರೆಸ್‌: ಸಿ.ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರುವ ಮೂಲಕ ದಲಿತರು, ದುರ್ಬಲ ವರ್ಗಗಳು, ಮಹಿಳೆಯರು, ಅಲ್ಪಸಂಖ್ಯಾತರು ಸೇರಿ ಸಮಾಜದ ಕಟ್ಟಕಡೆಯ ಜನರಿಗೂ ರಾಜಕೀಯ ಅಧಿಕಾರ ನೀಡಿದ ಶ್ರೇಯ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದು ಕೆಪಿಸಿಸಿ ರಾಜೀವ್‌ ಗಾಂಧಿ ಪಂಚಾಯತ್ ರಾಜ್ ವಿಭಾಗದ ರಾಜ್ಯಾಧ್ಯಕ್ಷ  ಸಿ. ನಾರಾಯಣಸ್ವಾಮಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯಾ ನಂತರ ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ಅಧಿಕಾರ ಕೇಂದ್ರೀಕೃತವಾಗಿತ್ತು. ರಾಜೀವ್ ಗಾಂಧಿ ಅವರು ಅಧಿಕಾರಕ್ಕೆ ಬಂದ ನಂತರ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಿದರು. ಸಂವಿಧಾನಕ್ಕೆ ತಿದ್ದುಪಡಿ ತಂದು ಅಧಿಕಾರ ವಿಕೇಂದ್ರೀಕರಣ ಮಾಡಿದರು ಎಂದು ಸ್ಮರಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಪ್ರತಿನಿಧಿಗಳನ್ನು ಸೇರಿಸಿ, ಅವರಿಗೆ ಪಕ್ಷ ಸಂಘಟನೆಯ ಅರಿವು ಮೂಡಿಸಲು ಈ ರೀತಿಯ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲೇ ವಿರೋಧಿಗಳ ವಿರುದ್ಧ ಕಿಮ್ಮನೆ ವಾಗ್ದಾಳಿ: ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ಮಾತನಾಡಿ, ‘ಶರಾವತಿ ಸಂತ್ರಸ್ತರ ಹೆಸರಲ್ಲಿ ಜೆಡಿಎಸ್ ಮುಖಂಡರು, ಜೆಡಿಎಸ್ ಬಾವುಟದೊಂದಿಗೆ ಕೆಲವು ಕಾಂಗ್ರೆಸ್ ನಾಯಕರು ಹೋರಾಟದಲ್ಲಿ ಭಾಗವಹಿಸಿದ್ದಾರೆ. ಪಕ್ಷಕ್ಕೆ ಮುಜುಗರ ತಂದಿದ್ದಾರೆ. ನಾಳೆ ನಾನು ಕೂಡ ಹೋರಾಟ ನಡೆಸಿದರೆ ಕಾಂಗ್ರೆಸ್ ನಾಯಕರು ಬರಬೇಕು. ನಾನು ಪಕ್ಷಕ್ಕಾಗಿ ಎಲ್ಲವನ್ನೂ ಕಳೆದುಕೊಂಡಿರುವೆ. ಮನೆಯ ಮೇಲೂ ಸಾಲ ಮಾಡಿರುವೆ. ಮುಂದಿನ ದಿನಗಳಲ್ಲಿ ಸಾಲ ಮಾಡಿಯಾದರೂ ಪಕ್ಷ ಉಳಿಸಲು ಹೋರಾಡುತ್ತೇನೆ. ಜೆಡಿಎಸ್, ಬಿಜೆಪಿಯ ಪ್ರಮುಖರನ್ನು ಸೆಳೆದು ಚುನಾವಣೆಗೆ ನಿಲ್ಲಲು ತೀರ್ಥಹಳ್ಳಿಯಲ್ಲಿ ಒಂದು ಹೊಸ ವೇದಿಕೆ ಸೃಷ್ಟಿಯಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ನಾಯಕರು ಅಲೆಮಾರಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ಈ ಸಮಯದಲ್ಲಿ ಕೆಲವು ಪಂಚಾಯಿತಿಗಳ ಸದಸ್ಯರು ಕಿಮ್ಮನೆ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

‘ನಾವು ಯಾವುದೇ ಚಿಹ್ನೆ ಇಲ್ಲದೆ ಗೆದ್ದು ಬಂದಿದ್ದೇವೆ. ಹಿಂದೆ ಜೆಡಿಎಸ್‌ನಲ್ಲಿದ್ದೆವು. ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದು ನಿಷ್ಠಾವಂತರಾಗಿ ಪಕ್ಷದ ಕೆಲಸ ಮಾಡುತ್ತಿದ್ದೇವೆ. ರಾಜಕೀಯದಲ್ಲಿ ಪಕ್ಷಾಂತರ ಸಾಮಾನ್ಯ. ಈಗ ಕಾಂಗ್ರೆಸ್ ಕಾರ್ಯಕರ್ತರಾಗಿರುವ ನಾವು ಅಲೆಮಾರಿಗಳೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಭಯ ನಾಯಕರ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದು ಸಭೆಯಲ್ಲಿ ಭಾರಿ ಗೊಂದಲವಾಯಿತು. ವೇದಿಕೆ ಮೇಲಿದ್ದ ಆರ್.ಎಂ. ಮಂಜುನಾಥಗೌಡರಿಗೂ ಇರಿಸುಮುರಿಸು ಆಯಿತು. ಅವರೇ ಸ್ವತಃ ವೇದಿಕೆ ಮೇಲೆ ಕೂರುವಂತೆ ಕಿಮ್ಮನೆ ಅವರಿಗೆ ಹೇಳಿದರೂ ಕೇಳಿಸಿಕೊಳ್ಳದ ಕಿಮ್ಮನೆ ಅರ್ಧದಲ್ಲೇ ವೇದಿಕೆಯಿಂದ ನಿರ್ಗಮಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ವೀಕ್ಷಕ ವಿಜಯಸಿಂಗ್, ವಿಧಾನಪರಿಷತ್‌ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ವಿದ್ಯಾಶಂಕರ್, ಘೋರ್ಪಡೆ, ಡಾ. ಶ್ರೀನಿವಾಸ ಕರಿಯಣ್ಣ, ಎಸ್.ಪಿ. ದಿನೇಶ್, ವೇದಾ ವಿಜಯಕುಮಾರ್, ವಿನಿತಾ, ರಾಮೇಗೌಡ, ಚಂದ್ರಭೂಪಾಲ್ ಉಪಸ್ಥಿತರಿದ್ದರು.

‘ರಾಜಕೀಯ ಅಸ್ತಿತ್ವಕ್ಕಾಗಿ ಪಕ್ಷಾಂತರಿಗಳ ಹೋರಾಟ’

ರಾಜಕೀಯ ಅಲೆಮಾರಿಗಳು ಶರಾವತಿ ಸಂತ್ರಸ್ತರ ಹೆಸರಲ್ಲಿ ಕಾಂಗ್ರೆಸ್‌ ಹಾಳು ಮಾಡಲು ಹೊರಟಿದ್ದಾರೆ ಎಂದು ಕಿಮ್ಮನೆ ರತ್ನಾಕರ ಪರೋಕ್ಷವಾಗಿ ಆರ್‌.ಎಂ. ಮಂಜುನಾಥ ಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

‘ಹಿಂದೆ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಿರಂತರವಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಹೋರಾಟ ಹಮ್ಮಿಕೊಂಡು ಬಂದಿತ್ತು. ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದೇವೆ. ಸಂತ್ರಸ್ತರಿಗೆ ಭೂ ಹಕ್ಕು ಕೊಡಿಸಲು ಕಾಂಗ್ರೆಸ್ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಆದರೆ, ತಮ್ಮ ಅಸ್ತಿತ್ವಕ್ಕಾಗಿ, ಅಧಿಕಾರಕ್ಕಾಗಿ ಪಕ್ಷಾಂತರಿಗಳು ಶರಾವತಿ ಮುಳುಗಡೆ ಸಂತ್ರಸ್ತರ ಸಮಿತಿಯ ಬ್ಯಾನರ್ ಅಡಿ ಹೋರಾಟಕ್ಕೆ ಇಳಿದಿದ್ದಾರೆ. ಹಿಂದಿನ ವಿಧಾನಪರಿಷತ್‌ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಅವರನ್ನು ಸೋಲಿಸಲು ಇದೇ ನಾಯಕರು ₹ 20 ಲಕ್ಷ ಖರ್ಚು ಮಾಡಿದ್ದರು’ ಎಂದು ಪರೋಕ್ಷವಾಗಿ ಆರ್‌.ಎಂ.ಮಂಜುನಾಥ ಗೌಡ ಅವರನ್ನು ಕುಟುಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.