ಮಂಗಳವಾರ, ಡಿಸೆಂಬರ್ 1, 2020
21 °C
ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಹಕಾರಿ ಮುಖಂಡ ಶ್ರೀಪಾದ ಹೆಗಡೆ

ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಬೆನ್ನೆಲುಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ಗ್ರಾಮಗಳ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಬೆನ್ನೆಲುಬಾಗಿದ್ದು, ಪ್ರತಿ ಗ್ರಾಮದಲ್ಲೂ ಸಹಕಾರ ಕ್ಷೇತ್ರ ವಿಸ್ತರಣೆ ಆಗಬೇಕಿದೆ ಎಂದು ಸಹಕಾರಿ ಮುಖಂಡ ಶ್ರೀಪಾದ ಹೆಗಡೆ ಹೇಳಿದರು.

ಪಟ್ಟಣದ ನಾಮದೇವ ಹರಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜಕೀಯ ಹಸ್ತಕ್ಷೇಪದಿಂದ ಸಹಕಾರ ಕ್ಷೇತ್ರ ಮುಕ್ತವಾಗಿದ್ದಾಗ ಮಾತ್ರ ಉನ್ನತಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ರಾಜಕೀಯ ಬೆರೆಸದೇ ದೂರ ಉಳಿದು ಸಹಕಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಸಲಹೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಕ್ಷೇತ್ರಕ್ಕೆ ಹೆಚ್ಚು ನೆರವು ನೀಡುತ್ತಿದ್ದು, ಕೊರೊನಾ ಸಂದರ್ಭದಲ್ಲಿ ಹಾಲು ಮಾರಾಟ ಸ್ಥಗಿತಗೊಂಡ ಸಮಯದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಹಾಲಿನ ಪುಡಿಗೆ ಸ್ಥಳೀಯ ಹಾಲನ್ನು ಬಳಸಿಕೊಳ್ಳಲು ಸಾಧ್ಯವಾಯಿತು. ಇದರಿಂದ ಹಾಲು ಒಕ್ಕೂಟಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ನೆರವಾಗಿದೆ ಎಂದು ಸ್ಮರಿಸಿದರು. ‌

ತಾಲ್ಲೂಕಿನಲ್ಲಿ ಪ್ರತಿದಿನ 35 ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಹಾಲು ಉತ್ಪಾದಕರ ಸಂಘಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ತಾಲ್ಲೂಕಿನಲ್ಲಿ 20 ಭಾಗಗಳಲ್ಲಿ ಹಾಲು ಉತ್ಪಾದಕ ಸಂಘಗಳ ಸ್ಥಾಪನೆಗೆ ಬೇಡಿಕೆ ಇದ್ದು, ಶೀಘ್ರ ಪ್ರಾರಂಭಿಸಲಾಗುವುದು. ಹಸುಗಳಿಗೆ ₹ 15 ಸಾವಿರದವರೆಗೆ ವಿಮೆ ವಿಸ್ತರಣೆ ಮಾಡಲಾಗಿದ್ದು, ರೈತರು ಕೃಷಿ ಜೊತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಬಲವರ್ಧನೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸಹಕಾರ ಬ್ಯಾಂಕಿನಿಂದ ತಾಲ್ಲೂಕಿಗೆ ₹ 91 ಕೋಟಿ ಸಾಲ ನೀಡಲಾಗಿದೆ. ವಾಹನ ಸಾಲವನ್ನು ಡಿಸೆಂಬರ್ ಮೊದಲ ವಾರದವರೆಗೂ ವಿಸ್ತರಣೆ ಮಾಡಲಾಗಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಹಕಾರ ಸಂಘದ ಉಪ ನಿರ್ದೇಶಕ ರಾಮಪ್ಪ, ಯೂಸುಫ್ ಸಾಬ್, ಬಸವನಗೌಡ, ನಿಂಗಪ್ಪ ಗುಂಡಶೆಟ್ಟಿಕೊಪ್ಪ, ರಾಜೇಂದ್ರ ನಾಯಕ್, ಜೆ. ಶಿವಾನಂದಪ್ಪ, ಶಿವಮೂರ್ತಿಗೌಡ, ಸಂತೋಷ್, ಅರವಿಂದ್, ಮೃತ್ಯುಂಜಯ, ವಿಜಯಗೌಡ, ಲೋಲಾಕ್ಷಮ್ಮ, ಜಯಪ್ಪ ಯಲವಳ್ಳಿ, ಮಹೇಶ ಖಾರ್ವಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.