ಕೊರೊನಾ: ಸಾರ್ವಜನಿಕ ಆಸ್ಪತ್ರೆಗಳು ಖಾಲಿ.. ಖಾಲಿ..

ಹೊಳೆಹೊನ್ನೂರು: ಸದಾ ಜನರಿಂದ ತುಂಬಿರುತ್ತಿದ್ದ ಸಾರ್ವಜನಿಕ ಆಸ್ಪತ್ರೆಗಳು ಕೊರೊನಾ ಕಾರಣ ಸದ್ಯ ಖಾಲಿ.. ಖಾಲಿ.. ಕೊರೊನಾ ಬಗ್ಗೆ ಭಯಪಡುತ್ತಿರುವ ಜನರು ಸಾರ್ವಜನಿಕರ ಆಸ್ಪತ್ರೆಯತ್ತ ಮುಖ ಮಾಡದೇ ಖಾಸಗಿ ಕ್ಲಿನಿಕ್ಗಳತ್ತ ಮುಖ ಮಾಡಿದ್ದಾರೆ.
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ರೈತರು, ಕೂಲಿ ಕಾರ್ಮಿಕರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗದೇ ಖಾಸಗಿ ಕ್ಲಿನಿಕ್ಗಳಿಗೆ ಹೋಗುತ್ತಿದ್ದಾರೆ. ಜನರಲ್ಲಿ ನೆಗಡಿ, ಕೆಮ್ಮು ಹಾಗೂ ಜ್ವರ ಸಾಮಾನ್ಯವಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿರುವುದರಿಂದ ಕ್ಲಿನಿಕ್ಗಳತ್ತ ಮುಖ ಮಾಡಿದ್ದಾರೆ.
ಕ್ಲಿನಿಕ್ಗಳು ಜನರಿಂದ ತುಂಬಿ ತುಳುಕುತ್ತಿದ್ದು, ಮೆಡಿಕಲ್ಗಳಲ್ಲಿ ಜನರು ಜ್ವರ ಹಾಗೂ ಶೀತಕ್ಕೆ ಮಾತ್ರೆ ತೆಗೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.
‘ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಕೊರೊನಾ ಎಂದು ಕ್ವಾರಂಟೈನ್ನಲ್ಲಿ ಹಾಕುತ್ತಾರೆ ಎನ್ನುವ ಭಯದಿಂದ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಈಗ ಚಳಿಗಾಲವಾದ್ದರಿಂದ ನೆಗಡಿ, ಕೆಮ್ಮು ಹಾಗೂ ಜ್ವರ ಸಾಮಾನ್ಯವಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಮೊದಲು ಕೊರೊನಾ ಪರೀಕ್ಷೆ ನಡೆಸಿ ನಂತರ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದಾಗಿ ಬೇಸತ್ತ ಜನರು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ’ ಎಂದು ಅಗಸನಹಳ್ಳಿ ಕೃಷ್ಣಮೂರ್ತಿ ಹೇಳಿದರು.
‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿದ್ದು, ಸಾರ್ವಜನಿಕರು ಹೆದರುವ ಅವಶ್ಯಕತೆ ಇಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ’ ಎನ್ನುತ್ತಾರೆ ಅರಹತೊಳಲು ಗ್ರಾಮ ಪಂಚಾಯಿತಿ ಸದಸ್ಯ ಟಿ.ಎನ್. ಸಂಗನಾಥ.
*
ಜನರು ಭಯಪಡದೇ ಕೆಮ್ಮು, ಶೀತ, ಜ್ವರದ ಲಕ್ಷಣಗಳಿದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು.
-ಡಾ.ದೇವಾನಂದ, ವೈದ್ಯಾಧಿಕಾರಿ, ಹೊಳೆಹೊನ್ನೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.