ಬಾಲಕಿಗೆ ಲೈಂಗಿಕ ದೌರ್ಜನ್ಯ: ಜೀವಾವಧಿ ಶಿಕ್ಷೆ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಶುಕ್ರವಾರ ಆದೇಶಿಸಿದೆ. ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿಯಾಗಿ ಆರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ನೀಡಿದೆ.
ಆರ್ಮುಗಂ (38) ಬಂಧಿತ ವ್ಯಕ್ತಿ. ಬಾಲಕಿಯ ತಾಯಿ ನೀಡಿದ ದೂರಿನ ಮೇಲೆ ಭದ್ರಾವತಿ ಗ್ರಾಮಾಂತರ ಠಾಣೆ ಸಿಪಿಐ ಇ.ಒ.ಮಂಜುನಾಥ್ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶರಾದ ಜೆ.ಎಸ್.ಮೋಹನ್ ಆದೇಶ ಹೊರಡಿಸಿದರು. ಸರ್ಕಾರಿ ವಕೀಲ ಹರಿಪ್ರಸಾದ್ ಬಾಲಕಿಯ ಪರ ವಾದ ಮಂಡಿಸಿದ್ದರು.
ಬಾಲಕರ ಅಶ್ಲೀಲ ವಿಡಿಯೊ ಚಿತ್ರೀಕರಣ; 20 ವರ್ಷ ಕಠಿಣ ಸಜೆ
ಶಿವಮೊಗ್ಗ: ಬಾಲಕರ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದ ಸೊರಬ ತಾಲ್ಲೂಕಿನ ತಿಮ್ಮಪ್ಪ (42) ಎಂಬುವವನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.44 ಲಕ್ಷ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಮೂರು ವರ್ಷಗಳ ಕಾಲ ಸಾದಾ ಸೆರೆವಾಸದ ಶಿಕ್ಷೆ ವಿಧಿಸಿ ಆದೇಶಿಸಿದೆ.
ಬಾಲಕರ ಅಶ್ಲೀಲ ವಿಡಿಯೊಗಳನ್ನು ತಿಮ್ಮಪ್ಪ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಹಾಕಿರುವ ಬಗ್ಗೆ ಸೈಬರ್ ಟಿಪ್‌ಲೈನ್‌ನಿಂದ ಬಂದ ದೂರಿನ ಮೇರೆಗೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು 2020ರ ಜನವರಿ 12ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಹರಿಪ್ರಸಾದ್ ವಾದ ಮಂಡಿಸಿದ್ದರು. ಫೋಕ್ಸೊ ಹಾಗೂ ಐಟಿ ಕಾಯ್ದೆಯಡಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಲತಾ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.