ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪ್ಪನ್‌ಪೇಟೆ: ಲಾಕ್‌ಡೌನ್‌ನಲ್ಲಿ ಬದುಕಿಗೆ ಆಸರೆಯಾದ ಮಿಡಿಸೌತೆ ಕೃಷಿ

Last Updated 1 ಸೆಪ್ಟೆಂಬರ್ 2021, 5:28 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಎರಡು ವರ್ಷಗಳಿಂದ ಕೊರೊನಾ ಕೆಲವರ ಬದುಕನ್ನೇ ಕಿತ್ತುಕೊಂಡರೆ, ಇನ್ನು ಕೆಲವರ ಬಾಳಿಗೆ ಬೆಳಕಾಗಿದೆ ಎಂದರೆ
ಅತಿಶಯೋಕ್ತಿಯಲ್ಲ.

ರಿಪ್ಪನ್‌ಪೇಟೆ ಸಮೀಪದ ಕುಕ್ಕಳಲೆ ಗ್ರಾಮದ ಪ್ರಕಾಶ್‌ ಅವರು 4 ಎಕರೆ ಜಮೀನಿನಲ್ಲಿ ಒಂದು ಎಕರೆ ಅಡಿಕೆ ಹಾಗೂ ಬಾಳೆ ಹಾಕಿದ್ದಾರೆ. ಅರ್ಧ ಎಕರೆ ಭತ್ತ ಬೆಳೆದಿದ್ದು, ಉಳಿಕೆ ಜಾಗದಲ್ಲಿ ಶುಂಠಿ ಬೆಳೆ ಹಾಕಿದ್ದರು. ದುರದೃಷ್ಟಕ್ಕೆ ಶುಂಠಿ ಬೆಳೆ ಕೈ ಕೊಟ್ಟ ಕಾರಣ ಸುಮಾರು ₹ 2 ಲಕ್ಷ ನಷ್ಟವಾಯಿತು.

ಇದರಿಂದ ಬೇಸತ್ತು ಮುಂದೇನು ಮಾಡುವುದು ಎಂದು ಯೋಚಿಸಿದವರಿಗೆ ಸಿಕ್ಕಿದ್ದು, ತರಕಾರಿ ಬೆಳೆಯ ಉಪಾಯ. ಅದೇ ವರ್ಷ ಶುಂಠಿ ಬೆಳೆದ ಜಾಗದಲ್ಲಿ ನಾಲ್ಕಾರು ಜಾತಿಯ ತರಕಾರಿ ಬೀಜಗಳನ್ನು ಬಿತ್ತಿದರು. ಎರಡು ತಿಂಗಳ ನಂತರ ಉತ್ತಮ ಫಸಲು ಸಿಕ್ಕಿತು.

ಆದರೆ, ಮಾರುಕಟ್ಟೆಗೆ ಕೊಂಡೊಯ್ದರೆ ನಿರೀಕ್ಷಿತ ಬೆಲೆ ಸಿಗಲಿಲ್ಲ. ಇದರಿಂದ ಬೇಸತ್ತ ಅವರು ಧೃತಿಗೆಡದೆ ತಾವೇ ಮಾರುಕಟ್ಟೆಯಲ್ಲಿ ಕುಳಿತು ವ್ಯಾಪಾರ ಮಾಡಲು ಶುರುವಿಟ್ಟರು. ಇದು ಅವರ ಬದುಕಿನ ದಿಕ್ಕನ್ನೇ ಬದಲಿಸಿ, ಲಾಭ ಗಳಿಕೆಗೆ ದಾರಿಯಾಯಿತು. ಲಾಕ್‌ಡೌನ್‌ ಸಮಯದಲ್ಲಿ ತರಕಾರಿ ಅವರ ಕೈ ಹಿಡಿಯಿತು. ನಿತ್ಯ 30 ಕೆ.ಜಿ. ಬೆಂಡೆ, 50 ಕೆ.ಜಿ. ಹೀರೆಕಾಯಿ, 50 ಕೆ.ಜಿ.ಮಿಡಿಸೌತೆ ಹೀಗೆ ವಿವಿಧ ತಾಜಾ ತರಕಾರಿಗಳನ್ನು ಕಿತ್ತು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದೇ ಇಂದಿಗೂ ಇವರ ಕಾಯಕ. ಮಾರುಕಟ್ಟೆ ದರದಲ್ಲಿಯೇ ಮನೆ ಬಾಗಿಲಿಗೆ ಬಂದು ಕೊಂಡು ಹೋಗುವ ಗ್ರಾಹಕರೂ ಇದ್ದಾರೆ.



ಕೊಳವೆಬಾವಿಯ ನೀರು ಬಳಸಿ ವರ್ಷವಿಡೀ ತರಹೇವಾರಿ ತರಕಾರಿ ಬೆಳೆಯುತ್ತಿದ್ದಾರೆ. ಇದೀಗ ಹೊಸದಾಗಿ ಹಾಕಿದ ಒಂದು ಎಕರೆ ಅಡಿಕೆ ತೋಟದ ನಡುವೆ ಮಿಶ್ರ ತಳಿ ಬೆಳೆಯಾಗಿ ತರಕಾರಿಯನ್ನು ಬೆಳೆದಿದ್ದಾರೆ.

ಅವರು ಬೆಳೆದ ಮಿಡಿಸೌತೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಸಾಗರ, ಕೊಣಂದೂರು, ಕುಂದಾಪುರ ಮಂಗಳೂರು ಸೇರಿ ವಿವಿಧ ಭಾಗಗಳಿಂದ ಬಂದು ಒಯ್ಯುತ್ತಾರೆ.

‘ಶುಂಠಿಯಲ್ಲಿ ಕಳೆದುಕೊಂಡ ₹ 2 ಲಕ್ಷ ನಷ್ಟವನ್ನು ತರಕಾರಿ ತುಂಬಿಕೊಟ್ಟಿತು’ ಎನ್ನುತ್ತಾರೆ ಪ್ರಕಾಶ್‌.

ಸುಖಿ ಸಂಸಾರ: ಗಂಡ, ಹೆಂಡತಿ, ಮಗ, ಮಗಳು ಇರುವ ಪುಟ್ಟ ಸಂಸಾರ ಅವರದು. ಪತ್ನಿ ಚಿತ್ರಲತಾ ಕುಟುಂಬ ನಿರ್ವಹಣೆಯೊಂದಿಗೆ ಕೃಷಿ ಕಾಯಕಕ್ಕೂ ನೆರವಾಗುತ್ತಾರೆ. ಪುತ್ರ ಬೈರೇಶ್‌ ಪಿಯುಸಿ ವ್ಯಾಸಂಗ ಮುಗಿಸಿ ತಂದೆಯೊಂದಿಗೆ ಕೃಷಿ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಮಗಳು ಸಿಂಧೂ ಎಂಎಸ್ಸಿ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರ ಸಂಪರ್ಕಕ್ಕೆ ಮೊ.ನಂ: 97406–02652

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT