ಮಂಗಳವಾರ, ನವೆಂಬರ್ 30, 2021
22 °C
ದಸರಾ ದರ್ಬಾರ್‌ ಸಮಾರಂಭದಲ್ಲಿ ರಂಭಾಪುರಿಶ್ರೀ

ಸಂಸ್ಕಾರದಿಂದ ಸಂಸ್ಕೃತಿ ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೇನಂದಿಹಳ್ಳಿ (ಶಿರಾಳಕೊಪ್ಪ): ‘ಸಾಹಿತ್ಯ, ಸಂಸ್ಕೃತಿ ನಾಡಿನ ಅಮೂಲ್ಯ ಸಂಪತ್ತು. ಸಂಸ್ಕಾರದಿಂದ ಬದುಕು ಸುಸಂಸ್ಕೃತಗೊಳ್ಳುತ್ತದೆ. ಸಂಸ್ಕಾರದ ಜೀವನ ನಮ್ಮ ಬೆಳವಣಿಗೆಗೆ ಸಹಕಾರಿ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕಡೇನಂದಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಶರನ್ನವರಾತ್ರಿ ದಸರಾ ದರ್ಬಾರ್‌ ಧರ್ಮ ಸಮಾರಂಭದ 8ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜೀವನ ನಿಂತ ನೀರಾಗಬಾರದು. ನಿರಂತರ ಚಲನಶೀಲತೆ ಆದರ್ಶ ಜೀವನದ ಗುಟ್ಟು. ಜೀವನದಲ್ಲಿ ಏರಿಳಿತ, ಸುಖ, ದುಃಖ, ನೋವು ನಲಿವು, ಕೂಡುವುದು, ಅಗಲುವುದು ಅನಿವಾರ್ಯ. ಏರಿಳಿತದಲ್ಲಿ ತಾಳ್ಮೆ ಕಳೆದುಕೊಳ್ಳದೇ ಸಹನೆಯಿಂದ ಬಾಳಿ ಶಾಂತಿ ಪಡೆಯಬೇಕಾಗುತ್ತದೆ ಎಂದರು.

ಹಂಪಸಾಗರ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಗಳಿಸಿದ ಸಂಪತ್ತು ಸತ್ಕಾರ್ಯಗಳಿಗೆ ಬಳಕೆಯಾಗಬೇಕು. ದುರಾಚಾರಗಳಿಗೆ ಬಳಕೆಯಾಗಬಾರದು’ ಎಂದು ಸಲಹೆ ನೀಡಿದರು.

ಕಡೇನಂದಿಹಳ್ಳಿ ಮತ್ತು ದುಗ್ಲಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ‘ಸಾಧನ ಸಿರಿ’ ಪ್ರಶಸ್ತಿಯನ್ನು ರಂಭಾಪುರಿ ಸ್ವಾಮೀಜಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ರೇವಣಸಿದ್ಧೇಶ್ವರ ಸ್ವಾಮೀಜಿ, ‘ಸುಂದರ ಬದುಕನ್ನು ಕಟ್ಟಿಕೊಳ್ಳಲು ನಿರಂತರ ಪ್ರಯತ್ನ ಬೇಕು. ಅರಿವಿನ ಕಣ್ಣು ತೆರೆಯಿಸಲು ಗುರುಬೋಧೆ ಮತ್ತು ಆಚರಣೆ ಮುಖ್ಯ’ ಎಂದರು.

ನೇತೃತ್ವ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿಕಾರಿಪುರ ತಹಶೀಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿದರು.

ಚಿದಾನಂದಯ್ಯ ಚನ್ನೇಶ ಶಾಸ್ತ್ರಿ ಅವರು ಚಿತ್ರಿಸಿದ ಕಡೇನಂದಿಹಳ್ಳಿ ಸ್ವಾಮೀಜಿ ಅವರ ಭಾವಚಿತ್ರವನ್ನು ಬಿಡುಗಡೆಗೊಳಿಸಲಾಯಿತು.

ಭೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಸ್ವಾಮೀಜಿ, ಹಾವೇರಿ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕಾರ್ಜುವಳ್ಳಿ ಸದಾಶಿವ ಸ್ವಾಮೀಜಿ, ಎಸಳೂರು ತೆಂಕಲಗೋಡುಮಠದ ಚನ್ನಸಿದ್ಧೇಶ್ವರ ಸ್ವಾಮೀಜಿ ಸೇರಿ ಹಲವು ಗಣ್ಯರಿಗೆ ರಂಭಾಪುರಿಶ್ರೀ ಗುರುರಕ್ಷೆ ನೀಡಿದರು.

ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಧಾರವಾಡದ ಮಾರುತಿ ಚೌಡಕ್ಕನವರ ಸ್ವಾಗತಿಸಿದರು. ಗಾನಭೂಷಣ ವೀರೇಶ ಕಿತ್ತೂರ ಅವರು ಸಂಗೀತ ಸೌರಭ ಕಾರ್ಯಕ್ರಮ ನಡೆಸಿಕೊಟ್ಟರು. ರೇವಣಸಿದ್ಧಪ್ಪ ಪೂಜಾರ ತಬಲಾ ಸಾಥ್ ನೀಡಿದರು. ಸವಣೂರಿನ ಗುರುಪಾದಯ್ಯ ಸಾಲಿಮಠ ಮತ್ತು ಶಿವಮೊಗ್ಗದ ಶಾಂತಾ ನಿರೂಪಿಸಿದರು. ಬಳಿಕ ಮಠದ ಸಿಬ್ಬಂದಿ ಮತ್ತು ಭಕ್ತರಿಂದ ಆಕರ್ಷಕ ನಜರ್ (ಗೌರವ) ಸಮರ್ಪಣೆ ನಡೆಯಿತು. ಮಳಲಿ ನಾಗಭೂಷಣ ಶಿವಾಚಾರ್ಯರು ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು