ಮಂಗಳವಾರ, ಮೇ 11, 2021
26 °C
2020–21ನೇ ಸಾಲಿನಲ್ಲಿ ₹ 15.65 ಕೋಟಿ ನಿವ್ವಳ್ಳ ಲಾಭ: ಬ್ಯಾಂಕ್‌ ಅಧ್ಯಕ್ಷ ಚನ್ನವೀರಪ್ಪ ಮಾಹಿತಿ

ಡಿಸಿಸಿ ಬ್ಯಾಂಕ್‌: ₹ 1077 ಕೋಟಿ ಠೇವಣಿ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಡಿಸಿಸಿ ಬ್ಯಾಂಕ್ 2020-21ನೇ ಸಾಲಿನಲ್ಲಿ ₹ 1077.72 ಕೋಟಿ ಠೇವಣಿ ಸಂಗ್ರಹ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಸಾಲ ವಸೂಲಾತಿ ಹಾಗೂ ಲಾಭ ಗಳಿಕೆಯಲ್ಲೂ ಪ್ರಗತಿಪಥದಲ್ಲಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಹೇಳಿದರು.

ಮಾರ್ಚ್‌ 31ರವರೆಗೆ ₹ 1 ಸಾವಿರ ಕೋಟಿ ಠೇವಣಿ ಸಂಗ್ರಹದ ಗುರಿ ಹೊಂದಲಾಗಿತ್ತು. ನಿರೀಕ್ಷೆಗೂ ಮೀರಿ ₹ 1077.72 ಕೋಟಿ ಠೇವಣಿ ಸಂಗ್ರಹವಾಗಿದೆ. ಇದು ಬ್ಯಾಂಕ್‌ ಇತಿಹಾಸದಲ್ಲೇ ಪ್ರಥಮ. ₹ 20.35 ಕೋಟಿ ಲಾಭ ಪಡೆದಿದೆ. ಎಲ್ಲ ಖರ್ಚುಗಳನ್ನೂ ಕಳೆದು ₹ 15.65 ಕೋಟಿ ನಿವ್ವಳ ಲಾಭಗಳಿಸಿದೆ. ಬೆಳೆ ಸಾಲ ವಸೂಲಾತಿ ಶೇ 99.55ರಷ್ಟಿದೆ. ಎಲ್ಲ ಕಳಣಕ ಕಳೆದುಕೊಂಡು ಬ್ಯಾಂಕ್‌ ಪ್ರಗತಿ ಪಥದಲ್ಲಿ ಸಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದರು.

ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 98,070 ರೈತರಿಗೆ ₹ 793.92 ಕೋಟಿ ಸಾಲ ನೀಡಿದೆ.  9,546 ರೈತರಿಗೆ ₹ 102.43 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಹೆಚ್ಚುವರಿಯಾಗಿ 31,832 ರೈತರಿಗೆ ₹ 166 ಕೋಟಿ ನೀಡಲಾಗಿದೆ. ರಾಜ್ಯ ಸರ್ಕಾರದ ಬಡ್ಡಿ ಮನ್ನಾ ಯೋಜನೆಯನ್ನು 262 ರೈತರು ಪಡೆದಿದ್ದಾರೆ. 561.87 ಲಕ್ಷ ಡ್ಡಿ ಮನ್ನವಾಗಿದೆ. 2,408 ಸ್ವಸಹಾಯ ಸಂಘಗಳಿಗೆ ₹ 85.99 ಕೋಟಿ ಸಾಲ ನೀಡಿದೆ. ವಸೂಲಾತಿ ಶೇ 99.32ರಷ್ಟಿದೆ. ಕಾಯಕ ಯೋಜನೆಯಲ್ಲಿ 44 ಗುಂಪುಗಳಿಗೆ ₹ 3.20 ಕೋಟಿ ಸಾಲ ನೀಡಲಾಗಿದೆ ಎಂದು ವಿವರ ನೀಡಿದರು.

ಕೇಂದ್ರ ಸರ್ಕಾರ ಹಾಲು ಉತ್ಪಾದಕರ ಸಹಕಾರ ಯೋಜನೆ ಅಡಿ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ 790 ರೈತರಿಗೆ ₹ 10.5 ಕೋಟಿ ಸಾಲ ನೀಡಲಾಗಿದೆ.  ಸುಮಾರು 9,550 ಕೃಷಿಯೇತರ ಜನರಿಗೆ  ₹ 321.10 ಕೋಟಿ ಸಾಲ ನೀಡಲಾಗಿದೆ. 28 ಶಾಖೆಗಳ ವ್ಯಾಪ್ತಿಯಲ್ಲಿ 769 ಸಹಕಾರ ಸಂಘಗಳಿವೆ. 172 ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ದುಡಿಯುವ ಬಂಡವಾಳ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮಾರ್ಚ್‌ 31ಕ್ಕೆ ₹ 1613.56 ಕೋಟಿ ತಲುಪಿದೆ ಎಂದರು.

ಬ್ಯಾಂಕ್ ಮುಳುಗಿಹೋಯಿತು ಎನ್ನುವವರಿಗೆ ಬ್ಯಾಂಕ್‌ ತಕ್ಕ ಉತ್ತರ ಕೊಟ್ಟಿದೆ. ನಮ್ಮ ಗುರಿಗಳು ಹೆಚ್ಚಾಗಿವೆ. ಪ್ರಯೋಗಿಕವಾಗಿ ಮೈಕ್ರೋ ಎಟಿಎಂ ಮಷಿನ್ ಸೌಲಭ್ಯ ಒದಗಿಸುವುದು. ಮೊಬೈಲ್ ಬ್ಯಾಂಕಿಂಗ್, ಗ್ರಾಹಕರಿಗೆ ವಿವಿಧ ಡೆಬಿಟ್ ಕಾರ್ಡ್‌ಗಳು, ಎಟಿಎಂ ಸೌಲಭ್ಯ ನೀಡುವುದು, ರೈತರಿಗೆ, ಸ್ವಸಹಾಯ ಸಂಘದ ಸದಸ್ಯರಿಗೆ ಮನೆ ಬಾಗಿಲಿಗೆ ಸಾಲ ಸೌಲಭ್ಯ ನೀಡುವುದು. ರೈತರು, ಗ್ರಾಹಕರ ಅನುಕೂಲಕ್ಕಾಗಿ ಸೊರಬದ ಜಡೆ, ಶಿಕಾರಿಪುರದ ಸುಣ್ಣದ ಕೊಪ್ಪ, ಭದ್ರಾವತಿಯ ಕಲ್ಲಿಹಾಳ ಗ್ರಾಮದಲ್ಲಿ ಹೊಸ ಶಾಖೆ ತೆರೆಯಲು ನಿರ್ಧರಿಸಲಾಗಿದೆ. 2021-22 ನೇ ಸಾಲಿನಲ್ಲಿ ₹ 1,250 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಇದೆ. ಆ ಮೂಲಕ ಸುಮಾರು ₹ 20 ಕೋಟಿ ನಿವ್ವಳ ಲಾಭ ಗಳಿಸುವತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ.  ಅಪೆಕ್ಸ್ ಬ್ಯಾಂಕ್ ₹ 140 ಕೋಟಿ ವಿಶೇಷ ಸಾಲ ನೀಡಿದೆ. ಸಹಕಾರ ಸಂಘಗಳ ಅಭಿವೃದ್ಧಿ ಉದ್ದೇಶಕ್ಕಾಗಿ ₹ 30 ಲಕ್ಷ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ ಉಪಾಧ್ಯಕ್ಷ ಎಚ್.ಎಲ್.ಷಡಾಕ್ಷರಿ, ನಿರ್ದೇಶಕರಾದ ಶ್ರೀಪಾದ ರಾಯರು, ಜೆ.ಪಿ.ಯೋಗೀಶ ಗೌಡ, ಎಸ್.ಪಿ.ದಿನೇಶ್, ಜಿ.ಎನ್.ಸುರೇಶ್, ಕೆ.ಪಿ.ದುಗ್ಗಪ್ಪ ಗೌಡ, ಪರಮೇಶ್ವರಪ್ಪ, ಹುಲಿಮನೆ ವೆಂಕಟೇಶ್, ಸಿಇಒ ಮಂಜಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.