ಶುಕ್ರವಾರ, ಏಪ್ರಿಲ್ 23, 2021
22 °C
ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗಾಗಿ ನಡೆದ ಪಾದಯಾತ್ರೆ

ಹೊಸನಗರ ಕ್ಷೇತ್ರ ಬಿಟ್ಟು ಹೋಗಿದ್ದು ದುರಂತ: ಸ್ವಾಮೀಜಿ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ‘ಕ್ಷೇತ್ರ ಮರುವಿಂಗಡನೆ ವೇಳೆ ಹೊಸನಗರ ವಿಧಾನಸಭಾ ಕ್ಷೇತ್ರ ಬಿಟ್ಟು ಹೋಗಿದ್ದು ನಮ್ಮೆಲ್ಲರ ದುರಂತ. ರಾಜ್ಯದ ಬೆಳಕಿಗಾಗಿ ನಮ್ಮ ನೆಲವನ್ನು ಹರಿದು ಹಂಚಿ ಧಾರೆ ಎರೆದು ಕೊಟ್ಟ ತಾಲ್ಲೂಕಿಗೆ ಈ ಬೆಳವಣಿಗೆ ನಿಜಕ್ಕೂ ಮರಣಶಾಸನವೇ ಆಯಿತು’ ಎಂದು ಮೂಲೆಗದ್ದೆ ಅಭಿನವ ಚನ್ನಬಸವ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆ ಆಗಬೇಕು ಎಂದು ಒತ್ತಾಯಿಸಿ ಸೋಮವಾರ ಪಟ್ಟಣದ ಮಾವಿನಕೊಪ್ಪದಿಂದ ತಾಲ್ಲೂಕು ಕಚೇರಿವರೆಗೂ ನಡೆದ ಪಾದಯಾತ್ರೆಯಲ್ಲಿ ಮಾತನಾಡಿದರು.

‘ನಾಡಿಗೆ ಬೆಳಕು ನೀಡಲು ಇಲ್ಲಿನ ಶರಾವತಿಗೆ ಜಲಾಶಯ ನಿರ್ಮಾಣ ಮಾಡಲಾಯಿತು. ಜೀವ ನದಿಯಾದ ಶರಾವತಿ ತಾಲ್ಲೂಕಿಗೆ ಶಾಪವಾದಳು. ಇಲ್ಲಿನವರ ಬದುಕು ಮೂರಾಬಟ್ಟೆಯಾಯಿತು. ಪರಿಹಾರಕ್ಕಾಗಿ ಅಲೆದಾಡಿ ಸುಸ್ತಾದರು. ಅಂದಿನಿಂದಲೇ ಹೊಸನಗರ ಹಿಂದುಳಿಯುತ್ತ ಹೋಯಿತು. ಅದರ ಮಧ್ಯೆ ಕ್ಷೇತ್ರ ವಿಂಗಡನೆಯಲ್ಲಿ ಹೊಸನಗರವನ್ನು ಮಲತಾಯಿ ಧೋರಣೆಯಿಂದ ನೋಡಲಾಯಿತು. ಯಾವ ಸೂಚನೆಯನ್ನೂ ನೀಡದೆ ಕ್ಷೇತ್ರ ನಮ್ಮ ಕೈಬಿಟ್ಟು ಹೋಯಿತು. ಅಕ್ಕ ಪಕ್ಕದ ತಾಲ್ಲೂಕಿಗೆ ಹರಿದು ಹಂಚಿಕೆ ಮಾಡಲಾಯಿತು. ಅದರ ಫಲವಾಗಿ ಹೊಸನಗರ ಮತ್ತಷ್ಟು ಹಿಂದುಳಿಯಿತು. ಇದೀಗ ಮತ್ತೆ ಹೋರಾಟದ ಕಾವು ಹೆಚ್ಚಬೇಕಾಗಿದೆ. ಕ್ಷೇತ್ರ ಮರಳಿ ಪಡೆಯುವಲ್ಲಿ ನಮ್ಮ ಹೋರಾಟ ನಿರಂತರ ಆಗಬೇಕಿದೆ’ ಎಂದರು.

ಪಾದಯಾತ್ರೆಗೆ ಕಹಳೆ ಓದುವ ಮೂಲಕ ಚಾಲನೆ ನೀಡಿದ ಮಾಜಿ ಶಾಸಕ ಬಿ. ಸ್ವಾಮಿರಾವ್, ‘ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ ಹೊಸನಗರವನ್ನು ಗುರುತಿಸಿ ಕ್ಷೇತ್ರ ಮರು ಸ್ಥಾಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಯಾವುದೇ ಹೋರಾಟಕ್ಕೂ ಸಿದ್ಧ. ದೆಹಲಿವರಗೆ ಪಾದಯಾತ್ರೆ ಹೋಗಲು ನಾವು ಸಜ್ಜಾಗಬೇಕಾಗಿದೆ’ ಎಂದರು.

ನಿಟ್ಟೂರು ಮಠದ ರೇಣುಕಾನಂದ ಸ್ವಾಮೀಜಿ, ವಿವಿಧ ಮಸೀದಿಯ ಗುರುಗಳು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ನಂತರ ತಾಲ್ಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆಲವಳ್ಳಿ ವೀರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ ಸ್ವಾಮಿರಾವ್, ಎನ್.ಆರ್ ದೇವಾನಂದ್, ಮಂಡಾನಿ ಮೋಹನ್, ಎ.ವಿ.ಮಲ್ಲಿಕಾರ್ಜುನ್, ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ಸುರೇಂದ್ರ ಕೋಟ್ಯಾನ್, ಗಾಯತ್ರಿ ನಾಗರಾಜ್, ಮಾಲಾ ಇದ್ದರು.

ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗೆ ಆಗ್ರಹಿಸಿ ಪಕ್ಷಾತೀತ ಹೋರಾಟ ಎಂಬುದಾಗಿ ಆಯೋಜಕರು ಪಾದಯಾತ್ರೆ ಮತ್ತು ಮನವಿಗೆ ಕರೆ ಕೊಟ್ಟಿದ್ದರು. ಪಾದಯಾತ್ರೆಯಲ್ಲಿ ಬಿಜೆಪಿ ಮುಖಂಡರೇ ಹೆಚ್ಚಿದ್ದು, ಬೇರೆ ಪಕ್ಷದ ಯಾವೊಬ್ಬ ಮುಖಂಡರ ಸುಳಿವು ಇರಲಿಲ್ಲ. ಮನವಿ ಕೊಡುವ ಸಭೆಯಲ್ಲಿ ಇದೊಂದು ಬಿಜೆಪಿ ಸಭೆಯಾಗಿ ಮಾರ್ಪಟಿತ್ತು. ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಅವರು ರಿಪ್ಪನ್‌ಪೇಟೆ ಯಿಂದ ಸೈಕಲ್‌ನಲ್ಲಿ ಬಂದು ಗಮನ ಸೆಳೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.