ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪ ಮಳೆಗೂ ಮುಳುಗೇಳುವ ತಗ್ಗು ಪ್ರದೇಶಗಳು; ದಶಕಗಳು ಕಳೆದರೂ ಸಿಗದ ಶಾಶ್ವತ ಪರಿಹಾರ

ತುಂಗಾ ಪ್ರವಾಹ, ರಾಜಕಾಲುವೆಗಳೇ ಸಮಸ್ಯೆಯ ಮೂಲ
Last Updated 29 ನವೆಂಬರ್ 2021, 6:31 IST
ಅಕ್ಷರ ಗಾತ್ರ

ಶಿವಮೊಗ್ಗ: ಅಲ್ಪ ಪ್ರಮಾಣದ ಮಳೆ ಬಂದರೆ ಸಾಕು ಶಿವಮೊಗ್ಗ ನಗರದ ಹಲವು ಬಡಾವಣೆಗಳು ಜಲಾವೃತವಾಗುತ್ತವೆ. ಮನೆಗಳ ಒಳಗೆ ನೀರು ನುಗ್ಗುತ್ತದೆ. ಪ್ರತಿ ಬಾರಿಯೂ ಒಂದಷ್ಟು ಮನೆಗಳು ಕುಸಿದು ಬೀಳುತ್ತವೆ. ಪುನರಾವರ್ತನೆಯಾಗುವ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ.

ನಗರದ ಶಾಂತಮ್ಮ ಲೇಔಟ್‌, ರಾಜೀವ್‌ ಗಾಂಧಿ ಬಡಾವಣೆ, ವಿದ್ಯಾನಗರ, ಗುರುಪುರ, ಚಿಕ್ಕಲ್, ಕುಂಬಾರಗುಂಡಿ, ಸೀಗೆಹಟ್ಟಿ, ಇಮಾಂಬಾಡ, ಮಂಡಕ್ಕಿಬಟ್ಟಿ, ಮುರಾದ್‌ ನಗರ, ಸೀಗೆಹಟ್ಟಿ, ಮದಾರಿಪಾಳ್ಯ, ಬಿ.ಬಿ. ರಸ್ತೆ, ಬಾಪೂಜಿ ನಗರ ಸೇರಿ ಹಲವು ಬಡಾವಣೆಗಳು ಪ್ರತಿ ಮಳೆಗಾಲದಲ್ಲೂ ಜಲಾವೃತವಾಗುತ್ತವೆ. ಮಳೆಗಾಲದಲ್ಲಿ ತುಂಬಿ ಹರಿಯುವ ತುಂಗಾ ನದಿ ಅತಿ ಹೆಚ್ಚಿನ ಸಮಸ್ಯೆ ಸೃಷ್ಟಿಸಿದರೆ, 20 ನಿಮಿಷ ಸತತ ಮಳೆ ಸುರಿದರೆ ಸಾಕು ಹೂಳು ತುಂಬಿದ ರಾಜಕಾಲುವೆಗಳು ರಸ್ತೆ ಮೇಲೆ ಹರಿದು ತಗ್ಗು ಪ್ರದೇಶದ ಮನೆಗಳಿಗೆ ಕಲ್ಮಶ ನೀರು ನುಗ್ಗುತ್ತದೆ.

ತುಂಗಾ ಜಲಾಶಯ ಸಮುದ್ರಮಟ್ಟದಿಂದ 588.24 ಮೀಟರ್ ಎತ್ತರವಿದೆ. 3.24 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯ ಚಿಕ್ಕದಾದರೂ ಒಳಹರಿವಿನ ಪ್ರಮಾಣ ಅಪಾರವಾಗಿದೆ. ಸುಮಾರು 10 ಪಟ್ಟು ನೀರು ವ್ಯರ್ಥವಾಗಿ ನದಿ ಸೇರುತ್ತದೆ. ಜಲಾಶಯ ಭರ್ತಿಯಾದ ಸಮಯದಲ್ಲಿ ಎಷ್ಟು ಒಳಹರಿವು ಇರುತ್ತದೆಯೋ ಅಷ್ಟೂ ನೀರನ್ನು ನದಿಗೆ ಹರಿಸಲಾಗುತ್ತದೆ. ನದಿಗೆ ಬಿಡುವ ನೀರು 80 ಸಾವಿರ ಕ್ಯುಸೆಕ್‌ ಮೀರಿದರೂ ನದಿಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ. ಕೆಲವು ಬಾರಿ ಒಳಹರಿವು 2 ಲಕ್ಷ ಕ್ಯುಸೆಕ್‌ ಮೀರುತ್ತದೆ. ಇಂತಹ ಸಮಯದಲ್ಲಿ ಅರ್ಧ ಶಿವಮೊಗ್ಗ ಅಪಾಯಕ್ಕೆ ಸಿಲುಕುತ್ತದೆ.

ತುಂಗಾ ತೀರದ ಉತ್ತರ ಭಾಗದಲ್ಲಿ ಹೊಸ ಸೇತುವೆಯಿಂದ ಮಲ್ಲೇಶ್ವರ ನಗರದವರೆಗೂ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಸಾಮಾನ್ಯ ಪ್ರವಾಹದ ಸನ್ನಿವೇಶದಲ್ಲಿ ಉತ್ತರ ಭಾಗದ ತಗ್ಗು ಪ್ರದೇಶದ ಬಡಾವಣೆಗಳು ಅಪಾಯದಿಂದ ಪಾರಾಗುತ್ತವೆ. ಆದರೆ, ದಕ್ಷಿಣ ತೀರದಲ್ಲಿ ತಡೆಗೋಡೆ ನಿರ್ಮಿಸದ ಪರಿಣಾಮ ಅಲ್ಲಿ ಅನಾಹುತ ಹೆಚ್ಚಿರುತ್ತದೆ.

ಈಚೆಗೆ ಸುರಿದ ಅಕಾಲಿಕ ಮಳೆಗೆ ರಾಜಕಾಲುವೆಗಳು ತುಂಬಿ ಹರಿದು ಹೊಸಮನೆ, ಗಾಂಧಿನಗರ, ಅಣ್ಣಾ ನಗರ, ನೆಹರೂ ರಸ್ತೆ, ಬಸವನಗುಡಿ ಸೇರಿ 10 ಬಡಾವಣೆಗಳ ಮನೆ, ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿತ್ತು. ರಾಜಕಾಲುವೆಗಳ ಒತ್ತುವರಿ, ಕಾಲುವೆಗಳ ಮೇಲೆಯೇ ಮನೆಗಳನ್ನು ಕಟ್ಟಿಕೊಂಡಿರುವುದು, ಸಮಯಕ್ಕೆ ಸರಿಯಾಗಿ ಹೂಳು ತೆಗೆಸದ ಕಾರಣ ನೀರು ಸರಾಗವಾಗಿ ಹರಿಯದೇ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಕಾಲುವೆಗಳ ಆಧುನೀಕರಣ, ಒತ್ತುವರಿ ತೆರವಿಗೆ ಪಾಲಿಕೆ ಸೂಕ್ತ ಕ್ರಮ ತೆಗೆದುಕೊಳ್ಳದ ಪರಿಣಾಮ ಸಮಸ್ಯೆಗಳು ಪುನರಾವರ್ತನೆಯಾಗುತ್ತಲೇ ಇವೆ.

ನಾಲಾ ಪ್ರದೇಶಗಳ ಜನರಿಗೂ ಸಂಕಷ್ಟ: ತುಂಗಾ ನಾಲೆ ನಗರದ ಒಳಗೆ ಹಾದು ಹೋಗುತ್ತದೆ. ಮಳೆಗಾಲದಲ್ಲಿ ನೀರು ತುಂಬಿ ಹರಿದಾಗ, ದಂಡೆಗಳು ಒಡೆದಾಗ ನಾಲೆಯ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸಂಕಷ್ಟು ಅನುಭವಿಸುತ್ತಿದ್ದಾರೆ. ತುಂಗಾನಗರ, ಹೊಸಮನೆ, ಮಲ್ಲಿಕಾರ್ಜುನ ನಗರ, ಹಳೆ ಮಂಡ್ಲಿ, ಟಿಪ್ಪುನಗರ ಮತ್ತಿತರ ಬಡಾವಣೆಗಳ ನಿವಾಸಿಗಳು ಸಾಕಷ್ಟು ತೊಂದರೆಗೆ ಸಿಲುಕುತ್ತಾರೆ. ಮನೆಗಳಿಗೆ ನೀರು ನುಗ್ಗಿ ಹಲವು ಬಾರಿ ದವಸ–ಧಾನ್ಯ, ಬಟ್ಟೆಗಳು ನೀರು ಪಾಲಾಗಿವೆ.

ಮನೆಹಾನಿಗೆ ದೊರಕದ ಪರಿಹಾರ: ಪ್ರತಿ ವರ್ಷ ಮಳೆಗಾಲದಲ್ಲೂ ಕನಿಷ್ಠ ಸಾವಿರ ಮನೆಗಳು ಹಾನಿಗೊಳಗಾಗುತ್ತವೆ. 2019ರ ಮಳೆಗಾಲದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಶೇ 75ಕ್ಕಿಂತ ಹೆಚ್ಚು ಹಾನಿಗೆ ₹ 5 ಲಕ್ಷ, ಭಾಗಶಃ ಮನೆಗಳಿಗೆ ₹ 3 ಲಕ್ಷ, ಶೇ 25ಕ್ಕಿಂತ ಕಡಿಮೆ ಹಾನಿಗೆ ₹ 50 ಸಾವಿರ ಪರಿಹಾರ ಘೋಷಿಸಲಾಗಿತ್ತು. ಆದರೆ, ಶೇ 50ರಷ್ಟು ಮನೆಗಳಿಗೆ ಇಂದಿಗೂ ಪೂರ್ಣ ಪ್ರಮಾಣದ ಪರಿಹಾರ ದೊರಕಿಲ್ಲ. ಖಾತೆ ಇಲ್ಲದ ಕುಟುಂಬಗಳಿಗೆ ಬಿಡಿಗಾಸೂ ನೆರವು ನೀಡಿಲ್ಲ.

***

ಹೊಸ ಲೇಔಟ್ ಪ್ರದೇಶದಲ್ಲಿನ ಅಸಮರ್ಪಕ ಕಾಮಗಾರಿ ಕೆಲಸ, ಕಾಂಕ್ರೀಟ್ ರಸ್ತೆ ಮತ್ತಿತರ ಕಾರಣಗಳಿಂದ ನೀರು ರಸ್ತೆಯ ಮೇಲೆ ನಿಲ್ಲುತ್ತಿದೆ.

- ಕುಮಾರ್, ಜನ್ನಾಪುರ, ಭದ್ರಾವತಿ

***

ರಾಜಕಾಲುವೆ ಒತ್ತುವರಿ, ಅವೈಜ್ಞಾನಿಕ ಚರಂಡಿಗಳ ನಿರ್ಮಾಣ ಈ ಸಮಸ್ಯೆಗೆ ಮೂಲಕಾರಣ. ಚಿಕ್ಕ ಚರಂಡಿಗಳು ಸಾಕಷ್ಟಿವೆ. ಸದಾ ಕಾಲುವೆ, ಚರಂಡಿಗಳಲ್ಲಿ ನೀರು ಹರಿಯುವಂತೆ ಮಾಡಿದರೆ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ದೊರಕುತ್ತದೆ.

- ಎಂ. ಮೋಹನ್, ಸಾಮಾಜಿಕ ಕಾರ್ಯಕರ್ತ

****

ಸಾಗರ ನಗರ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಮನೆ, ಲೇಔಟ್‌ಗಳಲ್ಲಿ ನೀರು ನುಗ್ಗುವುದನ್ನು ನಿಯಂತ್ರಿಸಲು ನಗರಭೆ ರಾಜಾಕಾಲುವೆ ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ನಿಯಮ ಉಲ್ಲಂಘನೆ ಮಾಡಿ ಲೇಔಟ್ ನಿರ್ಮಿಸಿದರೆ ಮಾಲೀಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಖಬೇಕು.

- ರಾಮಸ್ವಾಮಿ ಕಳಸವಳ್ಲಿ, ಬ್ಯಾಂಕ್ ಅಧಿಕಾರಿ

***

ಸರಾಗ ಹರಿವಿಗೆ ನಿಯಮಬಾಹಿರ ಬಡಾವಣೆಗಳೇ ಅಡ್ಡಿ

ಎಂ. ರಾಘವೇಂದ್ರ

ಸಾಗರ: ನಗರ ವ್ಯಾಪ್ತಿಯಲ್ಲಿ ಪ್ರತಿವರ್ಷದ ಮಳೆಗಾಲದಲ್ಲಿ ಸತತವಾಗಿ ನಾಲ್ಕರಿಂದ ಐದು ದಿನ ಮಳೆ ಸುರಿದರೆ ಕೆಲವು ಬಡಾವಣೆಗಳು ಜಲಾವೃತಗೊಳ್ಳುತ್ತವೆ. ನೀರಿನ ಹರಿವು ಹೆಚ್ಚಾಗಿ ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲದ ಕಾರಣ ಮನೆಯೊಳಗೆ ನೀರು ನುಗ್ಗಿ ಅವ್ಯವಸ್ಥೆಗೆ ದಾರಿ ಮಾಡಿಕೊಡುವ ಸನ್ನಿವೇಶ ಸೃಷ್ಟಿಯಾಗುತ್ತಿದೆ.

ನಗರದ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆ, ವಿನೋಬನಗರದ ಹಿಂಭಾಗದಲ್ಲಿರುವ ನೀರ್ಕೋಡು ಬಡಾವಣೆ, ಸುಭಾಷ್ ನಗರ ಆಚಾರ್ ಕೇರಿ ಹಿಂಭಾಗ, ಹಾನಂಬಿ ಬಡಾವಣೆ ಹೀಗೆ ಹಲವು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ನಗರವ್ಯಾಪ್ತಿಯಲ್ಲಿ ಲೇ ಔಟ್ ನಿರ್ಮಿಸುತ್ತಿರುವವರು ನೀರು ಹರಿಯುವ ಮಟ್ಟವನ್ನು ಸರಿಯಾಗಿ ಗುರುತಿಸದೆ, ನೀರು ಸರಾಗವಾಗಿ ಹರಿಯಲು ಅಗತ್ಯ ವ್ಯವಸ್ಥೆ ಮಾಡದೆ ಇರುವುದು ಸಮಸ್ಯೆಗಳಿಗೆ ದಾರಿಮಾಡಿಕೊಟ್ಟಿದೆ. ಕೆಲವು ಬಡಾವಣೆಗಳನ್ನು ನಿರ್ಮಿಸಿದಾಗ ಅವುಗಳ ಸುತ್ತಮುತ್ತ ಮನೆಗಳು ನಿರ್ಮಾಣವಾಗಿರಲಿಲ್ಲ. ಕ್ರಮೇಣ ಖಾಲಿ ನಿವೇಶನಗಳಲ್ಲೂ ಮನೆ ನಿರ್ಮಾಣವಾದಾಗ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ನಿಂತು ಮನೆಗಳಿಗೆ ನುಗ್ಗುತ್ತದೆ.

ಲೇ ಔಟ್ ನಿರ್ಮಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದರೆ ಮಳೆಗಾಲದಲ್ಲಿ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ನಿಗದಿತ ಕಾಲದಲ್ಲಿ ಮುಗಿಯದೆ ಇರುವುದು ಹಾಗೂ ಅಸಮರ್ಪಕ ಕಾಮಗಾರಿ ಕೂಡ ಮಳೆಯ ನೀರಿನ ಹರಿವಿಗೆ ಅಡ್ಡಿಯಾಗಿದೆ.

ವಿನೋಬನಗರ ಬಡಾವಣೆಯ ಹಾನಂಬಿ ಹಳ್ಳವನ್ನು ಮುಚ್ಚಿರುವ ಪರಿಣಾಮ ಜನ್ನತ್ ನಗರ ಬಡಾವಣೆಯಿಂದ ಹರಿದು ಬರುವ ಮಳೆಯ ನೀರು ನೀರ್ಕೋಡು ಬಡಾವಣೆಗೆ ನುಗ್ಗಿ ಅವಾಂತರ ಸೃಷ್ಟಿಸುವುದು ಮಳೆಗಾಲದಲ್ಲಿ ಸಾಮಾನ್ಯ ಎನ್ನುವಂತಾಗಿದೆ.

ಕೆಲವು ಬಡಾವಣೆಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ಸಮರ್ಪಕವಾಗಿ ನಡೆಯದೆ ಕೆರೆಕಟ್ಟೆ, ಕಾಲುವೆಗಳಲ್ಲಿ ಕಸ ಸಂಗ್ರಹವಾಗಿರುವುದು ಕೂಡ ನೀರಿನ ಸರಾಗ ಹರಿವಿಗೆ ತೊಂದರೆ ಮಾಡಿದೆ. ಘನತಾಜ್ಯ ವಿಲೇವಾರಿ ಕಾರ್ಯ ಮತ್ತಷ್ಟು ಪರಿಣಾಮಕಾರಿಯಾಗಿ ನಡೆದರೆ ಮಳೆಗಾಲದಲ್ಲಿ ನೀರು ನಿಲ್ಲದಂತೆ ತಡೆಯಬಹುದು ಎನ್ನುತ್ತಾರೆ ನಗರದ ನಾಗರಿಕರು.

***

ತಗ್ಗಿನತ್ತ ಹರಿಯುವ ನೀರಿಗೆ ಹಲವು ಮುಖ

ಕೆ.ಎನ್‌. ಶ್ರೀಹರ್ಷ

ಭದ್ರಾವತಿ: ಈ ಬಾರಿಯ ಅಕಾಲಿಕ ಮಳೆಗೆ ವಸತಿಪ್ರದೇಶಗಳು ಜಲಾವೃತವಾಗಿ ನಿವಾಸಿಗಳ ನೆಮ್ಮದಿಗೆ ಭಂಗ ತಂದಿದೆ.

ಮಳೆಯ ಆರ್ಭಟಕ್ಕೆ ಜನ್ನಾಪುರ, ಕಿತ್ತೂರು ಚನ್ನಮ್ಮ ಲೇಔಟ್, ಕೋಡಿಹಳ್ಳಿ ರಸ್ತೆಯ ಸುತ್ತಲಿನ ಜಾಗ, ದೊಣಬಘಟ್ಟ ರಸ್ತೆಯಲ್ಲಿನ ಕಿರು ಸೇತುವೆ ಜಾಗ, ಸಿದ್ಧಾರೂಢನಗರ ಭಾಗದ ಹಲವು ರಸ್ತೆಗಳು, ಹಳೇನಗರ ಭಾಗದ ಬಸವೇಶ್ವರ ವೃತ್ತ, ಹಳೇನಗರ ಪೊಲೀಸ್ ಠಾಣೆ ರಸ್ತೆಗಳು ಜಲಾವೃತವಾಗಿ ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ.

ನಗರದಲ್ಲಿನ ಯುಜಿಡಿ ಕೆಲಸ ಪೂರ್ಣವಾಗದೆ ಉಳಿದಿರುವುದು, ಚರಂಡಿ ಅವ್ಯವಸ್ಥೆ, ಮಳೆ ನೀರು ಹರಿಯಲು ಮಾಡಿರುವ ಕಾಲುವೆಗಳಲ್ಲಿನ ದೋಷಗಳು ನೀರು ನಿಲ್ಲುವ ಸ್ಥಿತಿ ತಂದೊಡ್ಡಿದ್ದರೆ, ಮತ್ತೊಂದೆಡೆ ಕಲುಷಿತ ನೀರು ಸಾಗುವ ಚರಂಡಿಯಲ್ಲಿನ ದೋಷದ ಪರಿಣಾಮ ಕೆಟ್ಟ ವಾಸನೆಯ ನೀರು ರಸ್ತೆಯಲ್ಲಿ ನಿಂತು ಒಂದಿಷ್ಟು ನೆಮ್ಮದಿ ಕೆಡಿಸಿದೆ.

ಹುತ್ತಾ ಕಾಲೊನಿ ಅಂಡರ್ ಪಾಸ್ ರಸ್ತೆಯಲ್ಲಿನ ಅವ್ಯವಸ್ಥೆ ನೀರು ನಿಲ್ಲುವಂತೆ ಮಾಡಿದೆ. ಒಂದಿಷ್ಟು ಸಂಚಾರಕ್ಕೆ ತಡೆ ಮಾಡಿದೆ. ಮಳೆ ನಿಂತ ನಂತರ ಜರುಗಿದ ಒಂದಿಷ್ಟು ಕಾಮಗಾರಿ ಕೆಲಸ ನೀರಿನ ಸುಗಮ ಹರಿಯುವಿಕೆಗೆ ದಾರಿ ಮಾಡಿಕೊಟ್ಟಿದೆ.

ಹೊಸ ಲೇಔಟ್ ಪ್ರದೇಶದಲ್ಲಿನ ಅಸಮರ್ಪಕ ಕಾಮಗಾರಿ ಕೆಲಸ, ಮನೆಗಳ ಮುಂದೆ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆ ಹಾಗೂ ಕಾರು ನಿಲುಗಡೆಗೆ ರಸ್ತೆ ಅತಿಕ್ರಮಣದಿಂದ ನೀರು ರಸ್ತೆಯ ಮೇಲೆ ನಿಲ್ಲುವ ಸ್ಥಿತಿ ಸೃಷ್ಟಿಯಾಗಿದೆ ಎನ್ನುತ್ತಾರೆ ಜನ್ನಾಪುರದ ಭದ್ರಾವತಿ ಕುಮಾರ್.

ಇದೇ ರೀತಿಯ ಅವ್ಯವಸ್ಥೆ ಕಾರಣ ಚಾನಲ್ ನೀರು ಸಾಗುವ ಹಾದಿಯಲ್ಲಿ ಸಾಗಿದ ಬಿರುಸಿನ ನೀರು ಹಲವು ಭತ್ತದ ಗದ್ದೆ, ತೋಟಕ್ಕೆ ಹಾನಿ ಮಾಡಿರುವುದು ಸಹ ರಸ್ತೆ ವಿಸ್ತರಣೆ ನೆಪದಲ್ಲಿ ಆಗಿರುವ ಗುಂಡಿ ಅಗೆತ, ಕಾಮಗಾರಿ ಪೂರ್ಣವಾಗದೆ ಇರುವುದು ಕಾರಣ ಎನ್ನುತ್ತಾರೆ ಅರಳಿಹಳ್ಳಿ ಜಗದೀಶ್.

ಕವಲಗುಂದಿ, ದೊಣಬಘಟ್ಟ ರಸ್ತೆಯಲ್ಲಿನ ಸಣ್ಣ ಬ್ರಿಡ್ಜ್‌ ಮಳೆಗಾಲದಲ್ಲಿ ನೀರು ನಿಲ್ಲುವ ಜಾಗವಾಗಿದೆ. ಈ ಬ್ರಿಡ್ಜ್ ಎತ್ತರದ ಕಾಮಗಾರಿ ನನೆಗುದಿಯಲ್ಲಿ ಇರುವುದು ಒಂದು ಕಾರಣವಾದರೆ, ಗಾಂಧಿನಗರ ಭಾಗದಲ್ಲಿ ಅವ್ಯವಸ್ಥೆಯ ಚರಂಡಿ ಹಲವು ರಸ್ತೆಯಲ್ಲಿ ನೀರು ನಿಲ್ಲುವಿಕೆಗೆ ಕಾರಣವಾಗಿದೆ ಎನ್ನುತ್ತಾರೆ ನಿವಾಸಿಗಳು.

ಮಳೆ ಹೆಚ್ಚಿದಾಗ ತಗ್ಗು ಪ್ರದೇಶದಲ್ಲಿನ ನೀರು ಏರಿಕೆಯ ಹಿಂದೆ ಇನ್ನೂ ಹಲವು ರೀತಿಯ ಸಮಸ್ಯೆಗಳಿವೆ. ಇದಕ್ಕೆ ಅಂತ್ಯ ಹಾಡಲು ಸ್ಥಳೀಯ ಸಂಸ್ಥೆಗಳು ಎಚ್ಚರಿಕೆಯ ಕ್ರಮಗಳನ್ನು ಜರುಗಿಸಬೇಕು ಎಂಬುದು ನಾಗರಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT