ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾಕರ ಅಲ್ಲ: ರಮೇಶ ಹೆಗಡೆ

Last Updated 3 ಫೆಬ್ರುವರಿ 2023, 6:46 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಅಡಿಕೆ ತಿನ್ನುವುದು ಆರೋಗ್ಯಕ್ಕೆ ಹಾನಿಕರ ಅಲ್ಲ ಎಂಬುದನ್ನು ಜಗತ್ತಿಗೆ ಸಾಧಿಸಿ ತೋರಿಸುವ ದೊಡ್ಡ ಹೊಣೆಗಾರಿಕೆ ಬೆಳೆಗಾರರ ಮೇಲಿದೆ. ಅದರಲ್ಲಿಯೇ ಮಲೆನಾಡಿನ ಸಾಂಪ್ರದಾಯಿಕ ಬೆಳೆಗಾರರ ಭವಿಷ್ಯ ಅಡಗಿದೆ’ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಅಭಿಪ್ರಾಯಪಟ್ಟರು.

ಇಲ್ಲಿನ ಸಾಹಿತ್ಯ ಗ್ರಾಮದಲ್ಲಿ ಗುರುವಾರ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಡಿಕೆ ಬಳಕೆಯಿಂದ ಮನುಷ್ಯರ ಆರೋಗ್ಯಕ್ಕೆ ಹಾನಿ ಇಲ್ಲ ಎಂಬುದನ್ನು ಲಭ್ಯವಿರುವ ವೈಜ್ಞಾನಿಕ ದಾಖಲೆಗಳ ಆಧರಿಸಿ ಕೇಂದ್ರ ಸರ್ಕಾರ ಘಂಟಾಘೋಷವಾಗಿ ಹೇಳಬೇಕಿದೆ. ಆದರೆ ಅದು ಆಗುತ್ತಿಲ್ಲ. ಆಳುವವರ ಮೀನಾಮೇಷದಿಂದ ಆಗಾಗ ಕೇಳಿ ಬರುವ ಅಡಿಕೆಯ ನಿಷೇಧದ ಮಾತು ಬೆಳೆಗಾರರನ್ನು ಅನಿಶ್ಚಿತತೆಗೆ ದೂಡುತ್ತಿದೆ. ಈ ಬಗ್ಗೆ ಭಾರತ ಆಹಾರ ಸುರಕ್ಷತಾ ಮಾನದಂಡ ಸಂಸ್ಥೆಯೂ ತುಟಿ ಬಿಚ್ಚುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಿಷೇಧದ ತೂಗುಗತ್ತಿಯ ಜೊತೆಗೆ ದೇಶದ ಒಳಗೆ ಉತ್ತರ ಭಾರತದ ಕೆಲವು ವ್ಯಾಪಾರಿ ಹಿತಾಸಕ್ತಿಗಳು ಇಂಡೊನೇಶಿಯಾ, ಶ್ರೀಲಂಕಾದಿಂದ ಕಳಪೆ ಅಡಿಕೆಯ ಕಳ್ಳಸಾಗಣೆ ಮಾಡಿಕೊಳ್ಳುವುದು, ಅವೈಜ್ಞಾನಿಕವಾಗಿ ಬೆಳೆ ಪ್ರದೇಶದ ವಿಸ್ತರಣೆ ಹಾಗೂ ಅಸಂಪ್ರದಾಯಿಕ ರೀತಿಯಲ್ಲಿ ಅಡಿಕೆಯ ಸಂಸ್ಕರಣೆ ಬೆಳೆಗಾರರಿಗೆ ಮಾರಕವಾದ ಸಂಗತಿಗಳಾಗಿವೆ. ಇದಕ್ಕೆ ಉತ್ತರ ಕಂಡುಕೊಂಡು ಬೆಳೆಗಾರರ ರಕ್ಷಣೆಗೆ ಸರ್ಕಾರ ಧಾವಿಸಬೇಕಿತ್ತು. ಅದು ಆಗದ ಕಾರಣ ಅಡಿಕೆ ಬೆಳೆಗಾರರು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.

ಚುನಾವಣೆ ಬಂದಾಗ ಮಾತ್ರ ಅಡಿಕೆ ಬಗ್ಗೆ ಮಾತನಾಡುವುದು ಸಲ್ಲ. ತಂಬಾಕು ಕ್ಯಾನ್ಸರ್‌ಕಾರಕ ಎಂಬುದು ಸಾಬೀತಾದರೂ ಅದನ್ನು ನಿಷೇಧ ಮಾಡುವುದಿಲ್ಲ. ಬದಲಿಗೆ ನಿಯಂತ್ರಣ ಮಾಡುತ್ತಾರೆ. ಆದರೆ ಅಡಿಕೆಯ ಜೊತೆ ಸ್ವಲ್ಪ ತಂಬಾಕು ಬೆರೆಸಿ ತಿಂದರೆ ನಿಷೇಧದ ಮಾತು ಆಡುತ್ತಾರೆ. ಇದ್ಯಾವ ನೀತಿ ಎಂದು ಪ್ರಶ್ನಿಸಿದರು.

ಅಡಿಕೆಯಲ್ಲಿ ಔಷಧಿಗುಣ ಇದೆ ಎಂಬುದನ್ನು ಪ್ರತಿಪಾದಿಸಿ, ಅದು ಕ್ಯಾನ್ಸರ್‌ಕಾರಕವಲ್ಲ ಎಂಬುದನ್ನು ಸಾಬೀತುಪಡಿಸಿ ಅಡಿಕೆಯ ಮಾನ ಉಳಿಸಬೇಕಿದೆ ಎಂದರು.

ಅಡಿಕೆಯ ಎಲೆಚುಕ್ಕಿ ರೋಗ ಸದ್ಯ ಸೂರ್ಯನ ಬಿಸಿಲಿನ ಕಾರಣಕ್ಕೆ ನೈಸರ್ಗಿಕವಾಗಿ ನಿಂತಿದೆ. ಆದರೆ ರೋಗದ ತಡೆಗೆ ವಿಶ್ವಾಸನೀಯ ಕಾರ್ಯಕ್ರಮಗಳ ಕೈಗೊಳ್ಳಲು ಹಾಗೂ ಮಂಗಗಳಿಂದ ಅಡಿಕೆ ಬೆಳೆ ಹಾನಿಯಾದರೆ ಅದಕ್ಕೆ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಲಿ ಎಂದು ರಮೇಶ ಹೆಗಡೆ ಒತ್ತಾಯಿಸಿದರು.

ಹಿರಿಯ ಪತ್ರಕರ್ತ ನಾಗರಾಜ ನೇರಿಗೆ ಮುಳುಗಡೆ ಸಂತ್ರಸ್ತರ ಸಮಸ್ಯೆ ಕುರಿತು ಮಾತನಾಡಿ, ಆರೇಳು ದಶಕಗಳಿಂದ ಮಲೆನಾಡನ್ನು ಮುಳುಗಡೆ ಸಮಸ್ಯೆ ಬಾಧಿಸುತ್ತಿದೆ ಎಂದರು.

ಸಾಮಾಜಿಕ ಅಡ್ಡದಾರಿಯ ಆರ್ಥಿಕ ಚೇತರಿಕೆ, ಅಭಿವೃದ್ಧಿಯ ಮಾಯಾ ಜಿಂಕೆ ಬೆನ್ನತ್ತಿದ ಪರಿಣಾಮ ಈ ವಿಪ್ಲವಗಳನ್ನು ಎದುರಿಸುತ್ತಿದ್ದೇವೆ. ಮುಳುಗಡೆ ಇಂದು ವ್ಯಕ್ತಿ, ಕುಟುಂಬ, ಊರಿನ, ಸಮುದಾಯದ ಸಮಸ್ಯೆಯಲ್ಲ. ಬದಲಿಗೆ ಒಂದು ಆಧೀಮ ಜನಸಂಸ್ಕೃತಿಯ ಸಮಸ್ಯೆ ಎಂದರು. ಪರಂಪರೆಯೊಂದು ತನ್ನ ಅಸ್ಮಿತೆ ಕಳೆದುಕೊಂಡ ಭಾವ ಎಂದು ಹೇಳಿದರು.

ಮಲೆನಾಡಿನ ತಲ್ಲಣಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಯಾವುದೋ ದೇಶದ ನಿಯಮಗಳಂತೆ, ಸರ್ಕಾರೇತರ ಸಂಸ್ಥೆಗಳ ಅಣತಿಯಂತೆ ಆಗುತ್ತಿದೆ. ಅದು ತಪ್ಪಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಸ್ನೇಹಿ ತೀರ್ಮಾನ ಆಗಬೇಕಿದೆ ಎಂದರು.

ಗೋಷ್ಠಿಯ ಅಧ್ಯಕ್ಷತೆ ಲಕ್ಷ್ಮಣ ಕೊಡಸೆ ವಹಿಸಿದ್ದರು.

***

ತೋಟಗಳೆಲ್ಲ ಹಳದಿ, ಪೇಟೆಗಳೆಲ್ಲ ಕೇಸರಿ

ಕಲ್ಕುಳಿ ವಿಠಲ ಹೆಗಡೆ ಮಾತನಾಡಿ, ಸಹಬಾಳ್ವೆ ನಡೆಸುತ್ತಿದ್ದ ಪ್ರಾಣಿಗಳ ಜೊತೆಗೆ ಕೃಷಿ ಮಾಡಿಕೊಂಡು ಈ ಮೊದಲು ಮಲೆನಾಡಿನಲ್ಲಿ ಬದುಕುತ್ತಿದ್ದೆವು. ಆದರೆ ಇಂದು ಪ್ರಾಣಿಗಳೊಂದಿಗೆ ಅಸಹನೀಯವಾದ ಸಂಘರ್ಷ ಎದುರಾಗಿದೆ ಎಂದರು.

ಸಕಲೇಶಪುರ ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು ಜನರು ಆನೆಗಳ ದಾಳಿಗೆ ಸಿಲುಕಿದ್ದಾರೆ. ಮನುಷ್ಯರಿಗೆ ಊರು, ಮನೆ ಇರುವಂತೆ ಕಾಡಿನಲ್ಲಿ ಪ್ರಾಣಿಗಳಿಗೂ ವ್ಯಾಪ್ತಿ ಇರುತ್ತದೆ. ಅವುಗಳ ನೆಲೆ ನಾವು ಕಸಿದುಕೊಂಡಿರುವುದೇ ಈ ಸಂಘರ್ಷಕ್ಕೆ ಕಾರಣ. ಮಲೆನಾಡಿನ ಸಂಕಷ್ಟ ಇನ್ನೂ ಮುಂದುವರಿದು ಮಂಗಗಳಿಗೆ ಹೆದರಿ ಊರು ಬಿಡುವ ಪರಿಸ್ಥಿತಿ ಎದುರಾಗಿದೆ ಎಂದರು.

ಅಡಿಕೆಗೆ ಹೊರತಾದ ಆರ್ಥಿಕತೆ ಮಲೆನಾಡಿನಲ್ಲಿ ಊಹಿಸಲು ಸಾಧ್ಯವಿಲ್ಲ. ಹಳದಿ ರೋಗ ಬಂದು ಬಹಳ ದೊಡ್ಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೋಟಗಳೆಲ್ಲಾ ಹಳದಿ, ಪೇಟೆಗಳೆಲ್ಲ ಕೇಸರಿ ಎಂದು ಮಾರ್ಮಿಕವಾಗಿ ಹೇಳಿದರು.

ಹವಾಮಾನ ಬದಲಾವಣೆ ಹೆಸರಿನಲ್ಲಿ ಇಂದು ಮನುಷ್ಯ ಕುಲ ಮತ್ತೊಂದು ಪ್ರಳಯ ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ವಿಠಲ ಹೆಗಡೆ, ಅವೈಜ್ಞಾನಿಕ ಅಭಿವೃದ್ಧಿಯ ಓಘಕ್ಕೆ ಮಿತಿ ಹಾಕಿಕೊಳ್ಳದೇ ನಮ್ಮ ಭೂಮಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT