ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ| ಸಮುದಾಯದ ಸ್ವಾಸ್ಥ್ಯಕ್ಕೆ ಶಿಕ್ಷಣ ಮದ್ದು: ಸಣ್ಣರಾಮ

ಬಂಜಾರ ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಡಾ.ಸಣ್ಣರಾಮ
Last Updated 27 ಮಾರ್ಚ್ 2023, 6:49 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಪ್ರಪಂಚ ಮಂಗಳ ಗ್ರಹದತ್ತ ಹೆಜ್ಜೆ ಇಡುತ್ತಿರುವಾಗ ಯುವ ಪೀಳಿಗೆ ಮೌಢ್ಯದ ಕಡೆ ವಾಲುತ್ತಿದೆ. ಸಮುದಾಯದ ಯುವಕರು ವಿದ್ಯಾವಂತರಾಗುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹಿರಿಯ ಸಾಹಿತಿ ಡಾ.ಸಣ್ಣರಾಮ ಸಲಹೆ ನೀಡಿದರು.

ಇಲ್ಲಿನ ಬಾಲರಾಜ ಅರಸ್ ರಸ್ತೆಯಲ್ಲಿರುವ ಉಪ್ಪಾರ ಭವನದಲ್ಲಿ ರಾಜ್ಯ ಬಂಜಾರ ವಿದ್ಯಾರ್ಥಿ
ಸಂಘ ಭಾನುವಾರ ಆಯೋಜಿಸಿದ್ದ ಬಂಜಾರ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣವೊಂದೇ ಸಮಾಜ, ಸಮುದಾಯದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಶಿಕ್ಷಣದಿಂದ ಬಂಜಾರ ಸಮುದಾಯದ ಯುವಕರು ಹಿಂದೆ ಉಳಿಯುತ್ತಿದ್ದಾರೆ. ಅದರ ಪರಿಣಾಮ ನಮ್ಮ ಸಮುದಾಯದ ಸಂಸ್ಕೃತಿ ವಿನಾಶದ ಅಂಚಿಗೆ ತಲುಪಿದೆ. ಅದನ್ನು ಮುಂದಿನ ಪೀಳಿಗೆಗೆ ಉಣಬಡಿಸಬೇಕು ಎಂದರೆ ಬಂಜಾರ ಸಮುದಾಯ ಜಾಗೃತರಾಗಬೇಕು ಎಂದರು.

‘ಬುದ್ಧ, ಬಸವಣ್ಣ, ಡಾ. ಬಿ.ಆರ್ ಅಂಬೇಡ್ಕರ್ ಅವರು ಸಮಾಜದ ಏಳಿಗಗೆ ಶ್ರಮಿಸಿದ್ದಾರೆ. ಯುವ ಪೀಳಿಗೆಯು ಎಚ್ಚರಗೊಳ್ಳಲು ಅನೇಕ ಸಂಗತಿಗಳನ್ನು ತಿಳಿಸಿದ್ದಾರೆ. ನಾವು ಅವರನ್ನು ಅರಿತು ಪ್ರಬುದ್ಧರಾಗಿ ಹೊರಹೊಮ್ಮಬೇಕು. ವಿವೇಕವನ್ನು ವಿಸ್ತರಿಸುವ ಜ್ಞಾನ ಯುವ ಪೀಳಿಗೆಗೆ ಬೇಕು. ಕೇವಲ ಪುರಾಣದ ಓದಿನಿಂದ ಅದು ಸಾಧ್ಯವಿಲ್ಲ. ಅದರಿಂದ ಹೊರ ಬಂದು, ಜ್ಞಾನದ ಜ್ಯೋತಿ ಬೆಳಗಿಸುವ ಅನಿವಾರ್ಯತೆ ಇದೆ. ಅದರಿಂದ ಸಮುದಾಯದ ಉಳಿವು ಸಾಧ್ಯ ಎಂದ ಅವರು, ಮುಂದಿನ ದಿನದಲ್ಲಿ ಬಂಜಾರ ಸಮುದಾಯದ ಯುವಕರಿಗೆ ರಾಜ್ಯ ಮಟ್ಟದ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸುವ ಅನಿವಾರ್ಯತೆ ಇದೆ’ ಎಂದರು.

‘ಸಾಹಿತ್ಯ ಎಂದರೆ, ಭಾಷೆ ಮತ್ತು ಭಾವಕ್ಕೆ ಅಕ್ಷರ ರೂಪ ಕೊಡುವುದು. ಒಬ್ಬ ವ್ಯಕ್ತಿಯ ಭಾಷೆ ಮನಸ್ಸಿನಲ್ಲಾಗುವ ಜಾಗೃತ ಪ್ರಕ್ರಿಯೆ ಎಂಬುದು ನನ್ನ ಗ್ರಹಿಕೆ. ಭರತ ಖಂಡದಲ್ಲಿನ ಎಲ್ಲಾ ಭಾಷೆಯ ಪದಗಳು ನಮ್ಮ ಬಂಜಾರ ಭಾಷೆಯಲ್ಲಿ ಇವೆ. ಸಂಸ್ಕೃತ ಪದ ಕೂಡ ಬಂಜಾರ ಭಾಷೆಯಲ್ಲಿ ಇದೆ. ಕುವೆಂಪು ಅವರು ಹೇಳಿದಂತೆ, ಭಾಷೆ ಸಂವಹದನ ಮಾಧ್ಯಮ ಅಲ್ಲ. ಅದು ಸಮುದಾಯದ ಸಂಸ್ಕೃತಿ. ಆಚರಣೆ, ಆಚಾರ, ವಿಚಾರದಲ್ಲಿ ತನ್ನದೇ ವೈಶಿಷ್ಯ ಕಾಪಾಡಿಕೊಂಡು ಬಂದಿರುತ್ತದೆ’ ಎಂದರು.

‘ಬುದ್ಧಿ ಭಾವಗಳ ಸಂಬಂಧ ಬದುಕಿನ ಪ್ರತೀಕವಾಗಿರುತ್ತದೆ. ಭಾಷೆ ನಾವು ಬದುಕುವ ರೀತಿ
ಮೇಲೆ ನೆಲೆಸಿರುತ್ತದೆ. ಭಾಷೆ ಸಮುದಾಯದ ಉಸಿರು. ಬಂಜಾರ ಭಾಷೆಯಲ್ಲಿ ಬರೆಯುವುದಕ್ಕೆ ಕನ್ನಡ ಸಾಹಿತ್ಯ ಬಳಸಿಕೊಂಡಿದ್ದೇವೆ. ಅದರಿಂದಲೇ ಬಂಜಾರ ಭಾಷೆಯಿಂದ ಸಾಹಿತ್ಯ ರಚಿಸಲು ಸಾಧ್ಯ ಆಗಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರದ ಸಾಹಿತಿ ಇಂದುಮತಿ ಲಮಾಣಿ, ‘ಬಂಜಾರ ಸಮುದಾಯದ ಮಹಿಳೆಯರು ಯಾವುದೇ ರೀತಿಯಿಂದಲೂ ದುರ್ಬಲರಲ್ಲ. ಅವರು ಹುಟ್ಟುತ್ತಲೇ ಸಾಹಿತ್ಯ ಮೈಗೂಡಿಸಿಕೊಂಡು ಬಂದಿರುತ್ತಾರೆ. ಅವರು ಅತ್ತರೂ ಕೂಡ ಅದರಿಂದ ಸಾಹಿತ್ಯದ ಕಿಡಿ ಹೊರ ಹೊಮ್ಮುತ್ತದೆ. ಆದರೆ, ವಿದ್ಯಾಭ್ಯಾಸವೊಂದೇ ಅವರಿಗಿರುವ ಸವಾಲು’ ಎಂದು ಅಭಿಪ್ರಾಯಪಟ್ಟರು.

ಹೆತ್ತವರು ಮಕ್ಕಳಿಗಾಗಿ ಆಸ್ತಿ ಮಾಡಿ ಇಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಸಮಾಜಕ್ಕೆ ಕೊಡುಗೆ ನೀಡಿ. ಆಗ ಸಮಾಜ, ಸಮುದಾಯದ ಏಳಿಗೆ ಖಂಡಿತ ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಸಾಧನ ಅಕಾಡೆಮಿ ನಿರ್ದೇಶಕಿ ಜ್ಯೋತಿ ಬಾಯಿ ತಿಳಿಸಿದರು.

ಬಂಜಾರ ಭಾಷಾ ಕವಿಗೋಷ್ಠಿ ಆಯೋಜಿಸಲಾಗಿತ್ತು. ವಿವಿಧ ಭಾಗಗಳಿಂದ ಬಂದಿದ್ದ ಸಾಹಿತಿಗಳು ಕವಿಗೋಷ್ಠಿ ನಡೆಸಿಕೊಟ್ಟರು.

ಸಾಲೂರು ಮರಿಯಮ್ಮ ದೇವಿ ಮಠದ ಸೈನಾ ಭಗತ್ ಸ್ವಾಮೀಜಿ, ಕುಂಚೇನಹಳ್ಳಿ, ಸೇವಾಲಾಲ್ ಮತ್ತು ಶನೇಶ್ವರ ಮಠದ ನಾಗರಾಜ್ ಸ್ವಾಮೀಜಿ, ಜಾನಪದ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಡಿ.ಬಿ. ನಾಯ್ಕ್, ಭದ್ರಾವತಿ ತಾಲ್ಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ್, ರಮೇಶ್ ಲಮಾಣಿ, ಡಾ.ಎನ್.ಎಸ್. ಜಾಧವ್, ಧನುರಾಮ್ ನಾಯ್ಕ್, ಯೋಗೇಶ್ ನಾಯ್ಕ್, ವಿಜಯಲಕ್ಷ್ಮೀ ಬಾಯಿ, ಉಷಾ ಬಾಯಿ ವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT