ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರಂಟಿ’ | ನುಡಿದಂತೆ ನಡೆದಿದ್ದೇವೆ, ಆಶೀರ್ವದಿಸಿ: ಸಚಿವ ಮಧು ಬಂಗಾರಪ್ಪ

Published 24 ಮಾರ್ಚ್ 2024, 15:27 IST
Last Updated 24 ಮಾರ್ಚ್ 2024, 15:27 IST
ಅಕ್ಷರ ಗಾತ್ರ

ಶಿವಮೊಗ್ಗ: ‘ವರ್ಷದ ಹಿಂದೆ ಗ್ಯಾರಂಟಿ ಕಾರ್ಡ್ ಮೂಲಕ ಕೊಟ್ಟಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಈಗ ಮನೆ ಮಗಳು ಗೀತಾ ಶಿವರಾಜಕುಮಾರ್ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ ಆಶೀರ್ವದಿಸಿ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.

ತಾಲ್ಲೂಕಿನ ಸಂತೆಕಡೂರಿನಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಧ್ವನಿ ಇಲ್ಲದ ಎಲ್ಲ ಜಾತಿಯ ಬಡವರಿಗೂ ಶಕ್ತಿ ತುಂಬುವ ಕೆಲಸವನ್ನು ಎಸ್.ಬಂಗಾರಪ್ಪ ಮಾಡಿದ್ದರು. ಆಶ್ರಯ ಯೋಜನೆಯಡಿ ಸೂರು ಕಲ್ಪಿಸಿದು. ರೈತರಿಗೆ ಬೆಳೆ ಬೆಳೆಯಲು ಉಚಿತವಾಗಿ ವಿದ್ಯುತ್ ಕೊಟ್ಟ ಶ್ರೇಯ ಅವರದು. ಜನಪರ ರಾಜಕಾರಣದ ಅವರ ಪರಂಪರೆಯನ್ನು ಮತ್ತೆ ಮುಂದುವರಿಸಲು ಅವರ ಮಕ್ಕಳು ಬಂದಿದ್ದೇವೆ. ಗೀತಕ್ಕ ಅವರನ್ನು ಗೆಲ್ಲಿಸಿದರೆ ನಿಮಗೆ ಧ್ವನಿಯಾಗುತ್ತಾರೆ’ ಎಂದರು.

ರಾಮ ಹನುಮ ಎಂದು ಜನರ ನಡುವೆ ದ್ವೇಷ ಹರಡಲು ಬಿಜೆಪಿ ಬರುತ್ತದೆ. ಆದರೆ, ಹಸಿದವರ ಪರವಾಗಿ ಕಾಂಗ್ರೆಸ್ ನಿಲ್ಲುತ್ತದೆ ಎಂದರು.

‘ನಾನು ಈ ಜಿಲ್ಲೆಯ ಮಗಳು. ನನಗೆ ಮತ ಹಾಕಲೇಬೇಕು. ತವರಿಗೆ ಬಂದ ಮಗಳನ್ನು ಖಾಲಿ ಕೈಯಲ್ಲಿ ಕಳುಹಿಸುವಂತಿಲ್ಲ. ಕಳೆದ ಬಾರಿ ಸೋತಿದ್ದೇವೆ. ಈ ಬಾರಿ ನೀವು ಬರಿಗೈಯಲ್ಲಿ ಕಳುಹಿಸಲ್ಲ ಎಂದು ಭಾವಿಸಿರುವೆ’ ಎಂದು ಶಿವರಾಜ್ ಕುಮಾರ್ ತಿಳಿಸಿದರು.

ಸಮಾರಂಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್‌, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಹಾಪ್‌ಕಾಮ್ಸ್ ನಿರ್ದೇಶಕ ವಿಜಯಕುಮಾರ್ (ದನಿ), ವೇದಾ ವಿಜಯಕುಮಾರ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣವ, ಗೀತಾ ಶಿವರಾಜಕುಮಾರ್ ಪರ ಮತಯಾಚಿಸಿದರು. ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

ಸಂತೆಕಡೂರು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸಮೂಹ
ಸಂತೆಕಡೂರು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸಮೂಹ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಂತೆಕಡೂರಿಗೆ ಬೈಕ್ ರ‍್ಯಾಲಿ ಮೂಲಕ  ಕಾಂಗ್ರೆಸ್‌ ಕಾರ್ಯಕರ್ತರು ಗೀತಾ ಶಿವರಾಜಕುಮಾರ್‌ ಅವರನ್ನು ಕರೆತಂದರು.

ಯೋ ಬರ್ಕೊಯ್ಯ.. ಶಿವಮೊಗ್ಗ ನಂದು..
ಕಾರ್ಯಕ್ರಮದಲ್ಲಿ ನೆರೆದ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ‘ಯೋ ಬರ್ಕೊಯ್ಯ ಮುಂದುಗಡೆ ಪತ್ರಿಕೇಲಿ ಬರ್ಕೊ ಶಿವಮೊಗ್ಗ ನಂದು. ಇಲ್ಲಿರೋರೆಲ್ಲ ಶಿವಮೊಗ್ಗ ಹುಲಿಗಳು. ಜ್ಞಾಪಕ ಇರಲಿ’ ಎಂಬ ಡೈಲಾಗ್ ಹೇಳಿ ರಂಜಿಸಿದರು. ಹಾಡಬೇಕು ಎಂದು ಜನರು ಒತ್ತಾಯಿಸಿದಾಗ ‘ಗೀತಾಳನ್ನು ಗೆಲ್ಲಿಸಿ 24 ಗಂಟೆ ಕಾಲ ಕುಣಿದು–ಹಾಡಿ ರಂಜಿಸುವೆ’ ಎಂದು ಚಟಾಕಿ ಹಾರಿಸಿದರು. ‘ರಾಜಕಾರಣ ನನ್ನ ರಕ್ತದಲ್ಲಿ ಇಲ್ಲ. ಗೀತಾ ಬಂಗಾರಪ್ಪ ಅವರ ಮಗಳು. ಆಕೆಗೆ ರಾಜಕಾರಣ ರಕ್ತಗತವಾಗಿದೆ. ಹೆಣ್ಣು ತವರಿಗೆ ಬಂದಾಗ ಕಾಣಿಕೆ ಉಡುಗೊರೆ ಕೊಡ್ತಾರೆ. ಗೀತಾ ತವರಿಗೆ ಬಂದಿದ್ದಾರೆ. ಸಂಸದೆಯಾಗಿ ಗೆಲ್ಲಿಸಿ ಉಡುಗೊರೆ ಕೊಡಿ’ ಎಂದು ಮನವಿ ಮಾಡಿದರು. ಈ ಬಾರಿ ಚುನಾವಣೆಯಲ್ಲಿ ಯಾವುದೇ ರಾಜಕೀಯ ತಂತ್ರಗಾರಿಕೆ ಇಲ್ಲ. ಬದಲಿಗೆ ಹೃದಯದ ತಂತ್ರಗಾರಿಕೆ (ಹಾರ್ಟ್ ಸ್ಟ್ರ್ಯಾಟರ್ಜಿ) ಅಡಗಿದೆ ಎಂದರು. ಬಿಜೆಪಿಯ ಶೋಭಾ ಕರದ್ಲಾಂಜೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನ ಭೇಟಿ ಆಗಿದ್ದಾರೆ ಎಂಬ ಪ್ರಶ್ನೆಗೂ ಪ್ರತಿಕ್ರಿಯಿಸಿದ ಶಿವರಾಜಕುಮಾರ್‘ ಅವರು ಭೇಟಿಯಾಗಲಿ ಅದರಲ್ಲಿ ತಪ್ಪೇನಿಲ್ಲ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT