ಶನಿವಾರ, ನವೆಂಬರ್ 28, 2020
17 °C
ಪತ್ರಿಕಾ ದಿನಾಚರಣೆಯಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು

ಮಹತ್ವ ಕಾಪಾಡಿಕೊಂಡ ಮುದ್ರಣ ಮಾಧ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿಲ್ಲ ಎಂಬ ಮಾತು ಸುಳ್ಳಾಗಿದೆ. ಸುದ್ದಿಯಲ್ಲಿ ನಿಖರತೆ, ಸ್ಪಷ್ಟತೆ, ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ಕಾರಣಕ್ಕೆ ಮುದ್ರಣ ಮಾಧ್ಯಮ ತನ್ನ ಅಸ್ತಿತ್ವ ಹಾಗೂ ಮಹತ್ವವನ್ನು ಕಾಪಾಡಿಕೊಂಡಿದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಟ್ರಸ್ಟ್ ಆಫ್ ಸಾಗರ ಬುಧವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜವನ್ನು ತಿದ್ದುವ ಜವಾಬ್ದಾರಿ ಸದಾ ಪತ್ರಕರ್ತರ ಮೇಲೆ ಇದೆ ಎಂಬುದನ್ನು ಮರೆಯುವಂತಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ಒಂದು ಸುದ್ದಿಯನ್ನು ತಕ್ಷಣ ಬಿತ್ತರಿಸಿದರೂ ಅದರ ಕುರಿತು ಆಳವಾದ ಅಧ್ಯಯನ ನಡೆಸಿ ವಿಸ್ತೃತ ವರದಿ ನೀಡುವಷ್ಟು ವ್ಯವಧಾನ ಇರುವುದಿಲ್ಲ. ಒಂದು ಘಟನೆಯ ಪ್ರಥಮ ವರ್ತಮಾನದ ಮಾಹಿತಿಯನ್ನು ಮಾತ್ರ ಅಲ್ಲಿ ಪಡೆಯಬಹುದು. ಆದರೆ ಮುದ್ರಣ ಮಾಧ್ಯಮದಲ್ಲಿ ಘಟನೆಯ ಹಲವು ಆಯಾಮಗಳನ್ನು, ವಿಶ್ಲೇಷಣೆಯನ್ನು ನೋಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟ ವಿದ್ಯಾರ್ಹತೆ ಮೂಲಕ ಆ ರಂಗದಲ್ಲಿ ಹೆಸರು ಮಾಡಿರುವ ಒಂದು ವರ್ಗವಿದ್ದರೆ ಜೀವನಾನುಭವ, ಬರವಣಿಗೆಯಲ್ಲಿನ ಅದಮ್ಯ ಆಸಕ್ತಿಯಿಂದಲೇ ಹೆಸರು ಮಾಡಿರುವ ಮತ್ತೊಂದು ವರ್ಗವಿದೆ. ಇದು ಕನ್ನಡ ಪತ್ರಿಕೋದ್ಯಮದ ವಿಶಿಷ್ಟತೆ ಎಂ‌ದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ‘ಪತ್ರಕರ್ತರಿಗೆ ಅಧ್ಯಯನದ ಗುಣ ಇಲ್ಲದಿದ್ದರೆ ಅವರಿಂದ ಉತ್ತಮ ಬರಹ ಹೊರಬರಲು ಸಾಧ್ಯವಿಲ್ಲ. ಪತ್ರಕರ್ತರಲ್ಲಿ ಸಾಮಾಜಿಕ ಕಳಕಳಿ ಎಂಬುದು ಬರಹದ ಭಾಗವಾಗಬೇಕು. ಇಲ್ಲಿನ ಪತ್ರಕರ್ತರು ಹಲವು ಸಂದರ್ಭಗಳಲ್ಲಿ ಜನಪರ ಧೋರಣೆ ತಾಳಿರುವ ಹಲವು ಉದಾಹರಣೆಗಳಿವೆ’ ಎಂದರು.

ಪತ್ರಕರ್ತ ರಾಜೇಶ್ ಭಡ್ತಿ, ಪತ್ರಿಕಾ ವಿತರಕ ದೇವೇಶ್ ಎಸ್. ಅವರನ್ನು ಸನ್ಮಾನಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಸಾಕ್ಷಿ, ಸಂಜನಾ ಅವರನ್ನು ಪುರಸ್ಕರಿಸಲಾಯಿತು. ಗಣಪತಿ ಶಿರಳಗಿ, ಲೋಕೇಶ್ ಕುಮಾರ್ ಅಭಿನಂದನಾ ಪತ್ರ ವಾಚಿಸಿದರು. ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಜಿ. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಪ್ರಮುಖರಾದ ಎಚ್.ವಿ.ರಾಮಚಂದ್ರ, ಎಸ್.ವಿ. ಹಿತಕರ ಜೈನ್, ರವಿ ನಾಯ್ಡು ಇದ್ದರು.

ವಿ.ಶಂಕರ್ ಪ್ರಾರ್ಥಿಸಿದರು. ಎಂ. ರಾಘವೇಂದ್ರ ಸ್ವಾಗತಿಸಿದರು. ಎಚ್.ಬಿ. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಜಿ. ರಾಘವನ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.