ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನ ಸ್ವಾರ್ಥಕ್ಕೆ ಪರಿಸರ ಬಲಿ ಸಲ್ಲ

ಕೆರೆ ಹಬ್ಬ, ಉದ್ಯಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ‘ವೃಕ್ಷ ಮಾತೆ’ ತುಳಸಿಗೌಡ
Last Updated 18 ಜನವರಿ 2022, 5:37 IST
ಅಕ್ಷರ ಗಾತ್ರ

ಶಿವಮೊಗ್ಗ: ಸಕಲ ಜೀವ-ಜಂತುಗಳಿಗಾಗಿ ಭಗವಂತ ಸೃಷ್ಟಿಸಿದ ಪರಿಸರವನ್ನು ಮನುಷ್ಯ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಸಲ್ಲದು ಎಂದು ವೃಕ್ಷ ಮಾತೆ ತುಳಸಿಗೌಡ ಹೇಳಿದರು.

ಶಿವಮೊಗ್ಗ ಪರಿಸರಾಸಕ್ತರ ತಂಡದಿಂದ ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ಕ್ಯಾದಿಗೆಕಟ್ಟೆ ಕೆರೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ಕೆರೆ ಹಬ್ಬ’ ಹಾಗೂ ‘ಪದ್ಮಶ್ರೀ ತುಳಸಿಗೌಡ ಉದ್ಯಾನ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯನ ಆಸೆಗೆ ಮಿತಿ ಇಲ್ಲ. ತನ್ನ ಸುಖ, ಸಂತೋಷಕ್ಕಾಗಿ ಅರಣ್ಯವನ್ನೇ ಬಲಿ ಕೊಡುತ್ತಿದ್ದಾನೆ. ಇದರಿಂದ ಪ್ರಾಣಿ, ಪಕ್ಷಗಳ ಸಂಕುಲವೇ ನಶಿಸುತ್ತಿದೆ. ಮನುಷ್ಯ ಮಾಡುವ ಪರಿಸರ ಮಾಲಿನ್ಯದಿಂದಾಗಿ ಬೇರೆ ಜೀವಿಗಳಿಗೆ ತೊಂದರೆಯಾಗಬಾರದು. ಜಲಮೂಲ ಸಂರಕ್ಷಣೆಯಿಂದ ಪ್ರತಿ ಜೀವಿಗೂ ಅನುಕೂಲವಾಗಲಿದೆ. ಮನಷ್ಯ ತಾನೂ ಬದುಕಿ ಇತರೆ ಜೀವಿಗಳಿಗೂ ಬದುಕಲು ಬಿಡಬೇಕು’ ಎಂದರು.

ಗಿಡ ನೆಟ್ಟು, ಪೋಷಿಸುವ ಮನೋಭಾವ ಮಕ್ಕಳಲ್ಲಿ ಬರಬೇಕು. ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಬೇಕು. ಪ್ರತಿ ಬಾರಿ ಹಣ್ಣು ತಿಂದಾಗ ಬೀಜಗಳನ್ನು ಬಿಸಾಡದೇ ಗಿಡವಾಗಿ ಬೆಳೆಸಲು ಪ್ರಯತ್ನಿಸಬೇಕು. ಇದರಿಂದ ಪರಿಸರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ಭಾವನೆಯನ್ನು ಭಾಷೆಯ ಮೂಲಕ
ಸಡಿಲಗೊಳಿಸಬಾರದು. ಮಾತು ಕಡಿಮೆಯಾದಾಗ ಸಾಧನೆ ದೊಡ್ಡದಾಗುತ್ತದೆ. ತುಳಸಿಗೌಡರಿಗೆ ಮಾತಿನ ಚಾತುರ್ಯ ಇಲ್ಲದಿದ್ದರೂ ಅವರ ಭಾವನೆ ಮುಖದ ಮೇಲೆ ಬಿಂಬಿತವಾಗುತ್ತದೆ. ಅವರು ಸಾವಿರಾರು ಗಿಡಗಳನ್ನು ಬೆಳೆಸುವ ಮೂಲಕ ಪರಿಸರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ’ ಎಂದರು.

‘ಕೆರೆ ಜಾಗದಲ್ಲೂ ನಿವೇಶನ ಮಾಡಿ ಮಾರಾಟ ಮಾಡುವ ಮೂಲಕ ಹಣ ಮಾಡಿಕೊಳ್ಳುವ ಈಗಿನ ಕಾಲದಲ್ಲಿ ಶಿವಮೊಗ್ಗ ಪರಿಸರಾಸಕ್ತರ ತಂಡದವರು ಕರ್ತವ್ಯ ಪ್ರಜ್ಞೆಯಿಂದ ಕ್ಯಾದಿಗೆಕಟ್ಟೆ ಕೆರೆಯನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಈ ತಂಡದಲ್ಲಿ ಯಾವುದೇ ಪದಾಧಿಕಾರಿಗಳಿಲ್ಲ. ಅವರ ಕರ್ತವ್ಯ ಪ್ರಜ್ಞೆ ಕಾರಣ ಕೆರೆ ಪುನರುತ್ಥಾನಗೊಂಡಿದೆ. ಇವರ ಶ್ರಮ ಸಾರ್ಥಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸನಗರದ ಮೂಲೆಗದ್ದೆ ಅಭಿನವ ಚೆನ್ನಬಸವ ಸ್ವಾಮೀಜಿ ಮಾತನಾಡಿ, ‘ದೇವರನ್ನು ಹುಡುಕಿಕೊಂಡು ಎಲ್ಲಿಯೋ ಹೋಗಬೇಕಿಲ್ಲ. ಪರಿಸರ ಆರಾಧನೆಯೇ ಭಗವಂತನ ಆರಾಧನೆ. ಪುಟ್ಟ ಹಳ್ಳಿಯಲ್ಲಿ ಇಂತಹ ಆರಾಧನೆಯ ನಡೆಸಿದ ತುಳಸಿಗೌಡ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗುವ ಮೂಲಕ ದೇಶವೇ ಗುರುತಿಸುವಂತಾಗಿದ್ದಾರೆ’ ಎಂದರು.

ಪರಿಸರ ಚಿಂತಕ ಪ್ರೊ.ಬಿ.ಎಂ. ಕುಮಾರಸ್ವಾಮಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಎಸ್. ಚಂದ್ರಶೇಖರ್ ಮಾತನಾಡಿದರು. ಭಾರತಿ ಚಂದ್ರಶೇಖರ್ ಪ್ರಾರ್ಥಿಸಿದರು. ತ್ಯಾಗರಾಜ್ ಮಿತ್ಯಂತ ಸ್ವಾಗತಿಸಿದರು. ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ
ದರು. ಅನಿಲ್ ಶೆಟ್ಟರ್ ವಂದಿಸಿದರು. ಗಾಯಕಿ ಸುರೇಖಾ ಹೆಗಡೆ ಪರಿಸರ ಗೀತೆಗಳ ಗಾಯನ ನಡೆಸಿಕೊಟ್ಟರು.

‘ವೃಕ್ಷ ಮಾತೆ’ ತುಳಸಿಗೌಡ ಪರಿಚಯ

ಶಿಕ್ಷಣ ಪಡೆಯದೆ ಸಣ್ಣ ವಯಸ್ಸಿನಲ್ಲೇ ಸ್ಥಳೀಯ ನರ್ಸರಿಯಲ್ಲಿ ದಿನಗೂಲಿಯಾಗಿ ತಮ್ಮ ತಾಯಿ ಜತೆ ಕೆಲಸ ಮಾಡಲು ಪ್ರಾರಂಭಿಸಿದ ತುಳಸಿಗೌಡ ಅವರು ಸಾವಿರಾರು ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆಯ ನರ್ಸರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇವರ ಕೆಲಸವನ್ನು ಕೇಂದ್ರ ಸರ್ಕಾರ, ವಿವಿಧ ಸಂಸ್ಥೆಗಳು ಗೌರವಿಸಿವೆ. ಯಾವುದೇ ಜಾತಿಯ ಮರಗಳ ತಾಯಿ ಮರವನ್ನು ಗುರುತಿಸುವ ಅವರ ಸಾಮರ್ಥ್ಯಕ್ಕಾಗಿ ಅವರನ್ನು ‘ಎನ್‌ಸೈಕ್ಲೋಪೀಡಿಯಾ ಆಫ್ ಫಾರೆಸ್ಟ್‌’ ಎಂದೂ ಕರೆಯಲಾಗುತ್ತದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಸೇರಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕೆರೆ ನಿರ್ವಹಣೆಗೆ ₹ 2 ಲಕ್ಷ:

ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ಕ್ಯಾದಿಗೆಕಟ್ಟೆ ಕೆರೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕೆರೆ ಹಬ್ಬ ಹಾಗೂ ಪದ್ಮಶ್ರೀ ತುಳಸಿಗೌಡ ಉದ್ಯಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಕೆರೆಗೆ ಗಂಗಾ ಪೂಜೆ, ಬಾಗಿನ ರೂಪದಲ್ಲಿ ಮೀನಿನ ಮರಿಗಳ ಸಮರ್ಪಣೆ, ಉದ್ಯಾನ ಲೋಕಾರ್ಪಣೆ ನೆರವೇರಿಸಿದರು.

ತುಳಸಿಗೌಡ‌ ಅವರಿಗೆ ₹ 2 ಲಕ್ಷ ಹಾಗೂ ಕ್ಯಾದಿಗೆಕೆರೆ ನಿರ್ವಹಣೆಗೆ ₹ 2 ಲಕ್ಷವನ್ನು ಸಂಸದರು ನೀಡಿದರು.

ಮಕ್ಕಳಿಗೆ ಪರಿಸರದ ಪಾಠ

ಶಿವಮೊಗ್ಗ: ಜಾವಳ್ಳಿ ಓಪನ್‌ ಮೈಂಡ್ಸ್‌ ವರ್ಲ್ಡ್‌ ಸ್ಕೂಲ್‌ಗೆ ಸೋಮವಾರ ಭೇಟಿ ನೀಡಿದ ತುಳಸಿಗೌಡ ಅವರು ಮಕ್ಕಳಿಗೆ ಪರಿಸರ ಸಂರಕ್ಷಣೆಯಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು.

ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ, ಪರಿಸರ ನಾಶದಿಂದಾಗುವ ಪರಿಣಾಮಗಳ ಬಗ್ಗೆ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ತಮ್ಮ ಅನುಭವವನ್ನು ಹಂಚಿಕೊಂಡರು. ಮಕ್ಕಳು ಕೇಳುವ ಪ್ರತಿ ಪ್ರಶ್ನೆಗೂ ಉತ್ತರಿಸುವ ರೀತಿ ಕಂಡು ಮಕ್ಕಳು ಖುಷಿ ಪಟ್ಟರು. ಕೊನೆಗೆ ಮಕ್ಕಳೊಂದಿಗೆ ಸೇರಿ ಗಿಡ ನೆಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT