ಗುರುವಾರ , ಅಕ್ಟೋಬರ್ 29, 2020
26 °C

ಸರ್ಕಾರಿ ನೆರವಿನ ನೆರಳಲ್ಲೂ ನಿಂತಿಲ್ಲ ರೈತನ ಬೆವರು!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೃಷಿಯನ್ನೇ ನಂಬಿಕೊಂಡ ರೈತರ ಬದುಕು ಹಸನಾಗಿಲ್ಲ. ಜಿಲ್ಲೆಯಲ್ಲೂ ಸಾಕಷ್ಟು ರೈತರು ಇಂದಿಗೂ ಸಂಕಷ್ಟದಲ್ಲೇ ಬದುಕು ನಡೆಸುತ್ತಿದ್ದಾರೆ.

ರೈತರ ಸಾಲ ಮನ್ನಾ, ಉದ್ಯೋಗ ಖಾತ್ರಿ ಅಡಿ ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ, ಕೆರೆ, ಕಟ್ಟೆಗಳ ಜೀರ್ಣೋದ್ಧಾರದ ಮೂಲಕ ನೀರಿನ ಸೆಲೆ ಒದಗಿಸಿರುವುದು, ಕೃಷಿ ಹೊಂಡಗಳ ನಿರ್ಮಾಣ, ಬಡ್ಡಿ ರಹಿತ ಸಾಲದ ನೆರವು, ಕೃಷಿ ಇಲಾಖೆ ಮೂಲಕ ಸಬ್ಸಿಡಿ ದರದಲ್ಲಿ ಯಂತ್ರೋಪಕರಣ ಸೌಲಭ್ಯಗಳು ಸೇರಿ ಹತ್ತು ಹಲವು ಯೋಜನೆಗಳನ್ನು ಸರ್ಕಾರ ರೈತರಿಗಾಗಿಯೇ ರೂ‍ಪಿಸಿದೆ. ಜಿಲ್ಲೆಯಲ್ಲೂ ಅಧಿಕ ಸಂಖ್ಯೆಯ ರೈತರು ಉಪಯೋಗ ಪಡೆದುಕೊಂಡಿದ್ದಾರೆ. ಆದರೂ, ರೈತರ ಬದುಕು ಹಸನಾಗಿಲ್ಲ. ಇಂತಹ ಸವಾಲುಗಳ ಮಧ್ಯೆ ಕೆಲವು ರೈತರು ಯಶ ಕಂಡಿದ್ದಾರೆ. ಶೇ 90ರಷ್ಟು ರೈತರು ಇಂದಿಗೂ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.

1.50 ಹೆಕ್ಟೇರ್‌ ಕೃಷಿ ಬೆಳೆ, 80 ಸಾವಿರ ಹೆಕ್ಟೇರ್ ಅಡಿಕೆ: ಜಿಲ್ಲೆಯ 1.50 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ವಿವಿಧ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಪ್ರಸಕ್ತ ವರ್ಷ 1,48,333 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿತ್ತು. ಅದರಲ್ಲಿ 1.43,934 ಹೆಕ್ಟೇರ್‌ ಬಿತ್ತನೆಯಾಗಿದೆ. 89,706 ಹೆಕ್ಟೇರ್ ಭತ್ತ, 52,097 ಹೆಕ್ಟೇರ್ ಮೆಕ್ಕೆಜೋಳ ಬೆಳೆಯಲಾಗಿದೆ. ಈಚೆಗೆ ಭತ್ತದ ಜಾಗವನ್ನು ಅಡಿಕೆ ವೇಗವಾಗಿ ಆಕ್ರಮಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 5 ವರ್ಷಗಳ ಹಿಂದೆ 26 ಸಾವಿರ ಹೆಕ್ಟೇರ್ ಇದ್ದ ಅಡಿಕೆ ಬೆಳೆ ಕ್ಷೇತ್ರ ಇಂದು 80 ಸಾವಿರ ಹೆಕ್ಟೇರ್ ದಾಟಿದೆ. 

ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದೆ. ವಾಡಿಕೆಯಂತೆ ಇಲ್ಲಿಯವರೆಗೆ 2,029 ಮಿ.ಮೀ ಮಳೆಯಾಗಬೇಕಿತ್ತು. 1,757 ಮಿ.ಮೀ. ಮಳೆಯಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಶೇ 48ರಷ್ಟು, ಭದ್ರಾವತಿ ತಾಲ್ಲೂಕಿನಲ್ಲಿ ಶೇ 25ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅತಿ ಹೆಚ್ಚು ಮಳೆ ಸರಿಯುವ ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಲ್ಲೇ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯ ಎಲ್ಲೆಡೆ ಈ ಬಾರಿ ಉತ್ತಮ ಫಸಲು ನಿರೀಕ್ಷಿಸಲಾಗಿದೆ.

‘ಈ ವರ್ಷ ಉತ್ತಮ ಮಳೆಯಾಗಿದೆ. ಬೆಳೆಯೂ ಚೆನ್ನಾಗಿದೆ. ಆದರೆ, ಮಾರಾಟ ಮಾಡುವ ಸಮಯದಲ್ಲಿ ಬೆಲೆ ಯಾವ ರೀತಿ ಇರುತ್ತದೆ ಎನ್ನುವುದರ ಮೇಲೆ ಲಾಭ ನಿರ್ಧರಿತವಾಗುತ್ತದೆ. ಹಿಂದಿನ ವರ್ಷ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬೆಳೆಯಲಾಗಿತ್ತು. ಮಾರಾಟ ಮಾಡುವ ಸಮಯಕ್ಕೆ ಕ್ವಿಂಟಲ್‌ ಧಾರಣೆ ₹ 1,200ಕ್ಕೆ ಕುಸಿದಿತ್ತು. ರಾಜ್ಯ ಸರ್ಕಾರ ಕೆಎಂಎಫ್‌ ಮೂಲಕ ಒಂದಷ್ಟು ಮೆಕ್ಕೆಜೋಳ ಖರೀದಿಸಿತ್ತು. ನಂತರ ಕೋವಿಡ್‌ ಕಾರಣ ಮಾರಾಟ ಸಾಧ್ಯವಾಗಲಿಲ್ಲ. ಸಾವಿರಾರು ರೈತರು ನಷ್ಟ ಅನುಭವಿಸಿದರು’ ಎಂದು ಕೋಡಿಹಳ್ಳಿಯ ರೈತ ರುದ್ರಯ್ಯ ಬವಣೆ ಬಿಚ್ಚಿಟ್ಟರು.

ಮೆಕ್ಕೆಜೋಳ ಬೆಳೆಗಾರರ ಸಂಕಷ್ಟಕ್ಕೆ ಕೊನೆಗೂ ಸ್ಪಂದಿಸಿದ ಸರ್ಕಾರ ಜಿಲ್ಲೆಯ 30,658 ರೈತರಿಗೆ ತಲಾ ₹ 5 ಸಾವಿರದಂತೆ
₹ 15.33 ಕೋಟಿ ನೀಡಿದೆ. ಆದರೆ, ಇಂತಹ ಪರಿಹಾರಗಳು ತಾತ್ಕಾಲಿಕ ಮುಲಾಮು ಅಷ್ಟೆ ಎನ್ನುವುದು ರೈತರ ಅಳಲು.

ಹತ್ತು ಹಲವು ಯೋಜನೆಗಳಿಂದಲೂ ಬದಲಾಗದ ಸ್ಥಿತಿ:

ರೈತರಲ್ಲಿ ನೀರಿನ ಮಿತ ಬಳಕೆ ಪ್ರೋತ್ಸಾಹಿಸಲು ತುಂತುರು, ಹನಿ ನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 90ರಷ್ಟು ಸಹಾಯಧನ ನೀಡುತ್ತಿವೆ. ಜಿಲ್ಲೆಯ 20,934 ರೈತರು ಸೌಲಭ್ಯ ಪಡೆದುಕೊಂಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ನೀಗಿಸಲು ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಬಿತ್ತನೆ, ನಾಟಿ ಉಪಕರಣಗಳನ್ನು ಶೇ 50ರಿಂದ ಶೇ 90ರ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಪ್ರಸಕ್ತ ವರ್ಷ ಜಿಲ್ಲೆಯ ರೈತರಿಗೆ 359 ಪವರ್ ಟಿಲ್ಲರ್‌, 4 ಸಾವಿರಕ್ಕೂ ಹೆಚ್ಚು ವಿವಿಧ ಯಂತ್ರಗಳನ್ನು ಕೃಷಿ ಇಲಾಖೆ ಮೂಲಕ ನೀಡಲಾಗಿದೆ. 

‘ಯಂತ್ರೋಪಕರಣಗಳು, ಸಹಾಯಧನ, ಸಾಲ ಮನ್ನಾ ಎಂದು ಸರ್ಕಾರಗಳು ಕೋಟ್ಯಂತರ ಖರ್ಚು ಮಾಡುತ್ತಿವೆ. ಇಷ್ಟೆಲ್ಲ ಮಾಡಿದರೂ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ಕೃಷಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಖರ್ಚು ಮಾಡುವ ಬದಲು ರೈತರು ಬೆಳೆದ ಬೆಳೆಗಳಿಗೆ ವೆಚ್ಚ ಆಧಾರಿತ ವೈಜ್ಞಾನಿಕ ಬೆಲೆ ನೀಡಿದರೆ ಸಾಕು. ಮುಂದಿನ 10 ವರ್ಷಗಳಲ್ಲಿ ದೇಶದ ಎಲ್ಲ ರೈತರ ಸ್ಥಿತಿ ಬದಲಾಗುತ್ತದೆ. ವೈಜ್ಞಾನಿಕ ಬೆಲೆಯೇ ಎಲ್ಲ ಸಮಸ್ಯೆಗಳಿಗೂ ಪರಿಹಾರ’ ಎಂದು ಪ್ರತಿ ಪಾದಿಸುತ್ತಾರೆ ರೈತ ಮುಖಂಡ ಎಚ್‌.ಆರ್.ಬಸವರಾಜಪ್ಪ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು