ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮಾರು ದುಂಡು ಮಲ್ಲಿಗೆ, ಕನಕಾಂಬರಕ್ಕೆ ₹400

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ; ವರಮಹಾಲಕ್ಷ್ಮೀ ಹಬ್ಬ ಇಂದು
Last Updated 5 ಆಗಸ್ಟ್ 2022, 2:19 IST
ಅಕ್ಷರ ಗಾತ್ರ

ಶಿವಮೊಗ್ಗ: ಮಾರು ದುಂಡು ಮಲ್ಲಿಗೆ, ಕನಕಾಂಬರ ಹೂವಿಗೆ ₹400, ಮಾಮೂಲಿ ಮಲ್ಲಿಗೆ ಹೂ ₹200, ಸೇವಂತಿಗೆ ₹100,ಕೆ.ಜಿ ಗುಲಾಬಿ 240!

ಮಾರು ಲೆಕ್ಕದ ಹೂವಿಗೆ ಇನ್ನೂ ಎರಡಂಕಿಯಲ್ಲಿ ಹಣ ಕೊಟ್ಟು ರೂಢಿ ಇದ್ದ ಗ್ರಾಹಕರು ವರಮಹಾಲಕ್ಷ್ಮೀ ಹಬ್ಬಕ್ಕೆಂದು ಗುರುವಾರ ಹೂವು ಖರೀದಿಸಲು ಬಂದು ಬೆಲೆ ಕೇಳಿ ಬೆಚ್ಚಿಬಿದ್ದರು. ಆದರೂ ಹಬ್ಬದಲ್ಲಿ ಮಹಾಲಕ್ಷ್ಮೀಯ ಕೃಪೆ ಪಡೆಯಲು ಮುಗಿಬಿದ್ದು ಹೂವು ಖರೀದಿಸಿದರು. ಹೀಗಾಗಿ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂದಿತು.

ಬೆಳಿಗ್ಗೆಯಿಂದಲೇ ಶಿವಪ್ಪನಾಯಕ ಮಾರುಕಟ್ಟೆ, ಗೋಪಿ ವೃತ್ತ, ವಿನೋಬ ನಗರದ ಪೊಲೀಸ್‌ ಚೌಕಿ ವೃತ್ತ, ಲಕ್ಷ್ಮೀ ಟಾಕೀಸ್‌ ಸುತ್ತಮುತ್ತ ಹಾಗೂ ಗೋಪಾಳ ಸೇರಿದಂತೆ ನಗರದ ವಿವಿಧೆಡೆ ಖರೀದಿಯಲ್ಲಿ ತೊಡಗಿದ್ದರು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಬಂದಿದ್ದ ಗ್ರಾಹಕರು ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ಬಾಳೆ ಕಂದು, ತರಕಾರಿ, ಮಾವಿನ ಸೊಪ್ಪು, ಪೂಜಾ ಸಾಮಗ್ರಿ ಖರೀದಿಸಿದರು.

ಯುವತಿಯರು, ಮಹಿಳೆಯರು ಸೀರೆ ಹಾಗೂ ಗಾಜಿನ ಬಳೆ ಕೊಂಡರು. ಆಲಂಕಾರಿಕ ವಸ್ತುಗಳ ಖರೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿರುವುದು ಕಂಡುಬಂತು. ಚಿನ್ನಾಭರಣ ಮಳಿಗೆಗಳಲ್ಲೂ ಖರೀದಿ ಜೋರಾಗಿತ್ತು. ಲಕ್ಷ್ಮಿ ವಿಗ್ರಹ, ಮೂರ್ತಿ, ಮುಖವಾಡ, ಹಾರ, ಬಳೆ, ಅರಿಶಿಣ, ಮಾಂಗಲ್ಯಸರ, ಉತ್ತತ್ತಿ, ಕೊಬ್ಬರಿ ಸೇರಿದಂತೆ ಮಹಿಳೆಯರಿಗೆ ಉಡಿ ತುಂಬುವ ವಸ್ತು ಖರೀದಿಸಿದರು.

‘ಶ್ರಾವಣದ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೂವಿನ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಹೂವಿನ ಬೆಲೆ ದುಪ್ಪಟ್ಟು ಆಗಿದೆ. ಬೆಲೆ ಏರಿಕೆಯಾಗಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಖರೀದಿಸುತ್ತಿದ್ದಾರೆ’ ಎಂದು ವ್ಯಾಪಾರಿ ಹೊಸಮನೆಯ ವೆಂಕಟೇಶ್‌ ಡಿ.ಕೆ ತಿಳಿಸಿದರು.

‘ಬೆಳಗ್ಗಿನಿಂದ ವ್ಯಾಪಾರ ಚೆನ್ನಾಗಿತ್ತು. ಸಂಜೆ ವೇಳೆಗೆ ಮಳೆಯಿಂದಾಗಿ ವ್ಯಾಪಾರ ಸ್ವಲ್ಪ ಕಡಿಮೆಯಾಗಿದೆ. ಹಬ್ಬದ ಪ್ರಯುಕ್ತ ಅಷ್ಟಾಗಿ ಹಣ್ಣುಗಳ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಹಾಗೇ ನೋಡಿದರೆ ಸೇಬು ಕೆ.ಜಿಗೆ ₹ 200 ಇತ್ತು. ಆದರೆ ಇದೀಗ ₹ 140ರಿಂದ 160ಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದು ಎಸ್‌.ಎನ್‌ ಮಾರುಕಟ್ಟೆಯ ಹಣ್ಣಿನ ವ್ಯಾಪಾರಿ ಮೂರ್ತಿ ಹೇಳಿದರು.

ಹಬ್ಬದ ವಸ್ತುಗಳ ಬೆಲೆ ಜಾಸ್ತಿ ಇದೆ. ಬಾಳೆ ಎಲೆ, ಬಾಳೆ ಕಂದು ಮಾತ್ರ ಕಡಿಮೆಗೆ ಸಿಗುತ್ತೆ, ಉಳಿದಂತೆ ಹೂವು ಹಾಗೂ ಹಣ್ಣಿನ ‌ದರ ಏರಿಕೆಯಾಗಿದೆ ಎಂದು ಶರಾವತಿ ನಗರದ ಶಶಿಕುಮಾರ್‌ ಹೇಳಿದರು.

***

ಹೂವು, ಹಣ್ಣು ಖರೀದಿಸಲು ಸುಮಾರು ವರ್ಷಗಳಿಂದ ಮಾರುಕಟ್ಟೆಗೆ ಬರುತ್ತಿದ್ದೇನೆ. ಬೆಲೆ ಜಾಸ್ತಿ ಆಗಿದೆ ಅಂತ ಯಾರೂ ಹಬ್ಬ ಆಚರಣೆ ಮಾಡುವುದು ನಿಲ್ಲಿಸುವುದಿಲ್ಲ. ವಸ್ತುಗಳ ಬೆಲೆ ಎಷ್ಟೇ ಹೆಚ್ಚಾದರೂ ಹಬ್ಬ ಮಾಡಲೇಬೇಕು.

ನಂದಿನಿ, ಜೆಪಿಎನ್‌ ನಿವಾಸಿ

***

ವಸ್ತುಗಳ ದರ ಜಾಸ್ತಿಯಾದರೂ, ಖರೀದಿ ಜೋರಾಗಿದೆ. ಆದರೆ ಪೂಜೆಗೆ ಅಗತ್ಯವಾಗಿರುವ ಹೂವಿನ ಬೆಲೆ ಇಷ್ಟೊಂದು ಏರಿಕೆಯಾದರೆ ಹಬ್ಬ ಆಚರಿಸುವುದು ಕಷ್ಟವಾಗುತ್ತದೆ.

ಪಾರ್ವತಿ.ಜಿ.ಎಸ್‌, ಚಿಲೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT