ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಳಕಳಿ ಮರೆತ ಮಾಧ್ಯಮಗಳು: ಪತ್ರಕರ್ತ ಜಿ.ಎನ್.ಮೋಹನ್‍ ಬೇಸರ

Last Updated 9 ಜುಲೈ 2021, 3:56 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಜನರ ಅಗತ್ಯಗಳು, ಅನಿಸಿಕೆಗಳನ್ನು ಸರ್ಕಾರಕ್ಕೆ ತಲುಪಿಸುವ, ಕಟ್ಟಕಡೆಯ ವ್ಯಕ್ತಿಗೆ ಘನತೆಯಿಂದ ಬದುಕುವ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ’ ಎಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್‍ ಪ್ರತಿಪಾದಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಬುಧವಾರ ಆಯೋಜಿಸಿದ್ದ ಮಾಧ್ಯಮ ವಿಶೇಷ ಉಪನ್ಯಾಸ ಸರಣಿಯ ಭಾಗವಾಗಿ ‘ಅಭ್ಯುದಯ ಪತ್ರಿಕೋದ್ಯಮ’ ವಿಷಯ ಕುರಿತು ಮಾತನಾಡಿದರು.

ಜಗತ್ತಿನ ಮಾಧ್ಯಮಗಳ ಸ್ಥಿತಿಗತಿ ಅರಿಯಲು ವಿಶ್ವಸಂಸ್ಥೆಯು ರಚಿಸಿದ ಮ್ಯಾಕ್‍ಬ್ರೈಡ್‍ ಕಮಿಷನ್ ವರದಿಯ ಪ್ರಕಾರ ಈಗಾಗಲೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾಧ್ಯಮವು ಬೇರೆಲ್ಲ ದಿನಬಳಕೆ ವಸ್ತುಗಳ ರೀತಿ ಒಂದು ಉತ್ಪನ್ನವಾಗಿದೆ. ಅಲ್ಲಿ ಯಾವುದೇ ಸಾಮಾಜಿಕ ಕಳಕಳಿ, ಹಿತಗಳು ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

‘ಬರ ಬಂದರೆ ಪರಿಹಾರ ವಿಷಯದಲ್ಲಿ ನಡೆಯುವ ಭ್ರಷ್ಟಾಚಾರದ ಮೇಲಾಟಗಳು, ಕೋವಿಡ್ ಸಮಯದಲ್ಲೂ ಪುನರಾವರ್ತನೆ ಯಾಗಿವೆ. ನದಿ ತಟದ ಹೆಣಗಳ ರಾಶಿ, ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಖರೀದಿಗಳನ್ನು ಮಾಧ್ಯಮಗಳು ಪ್ರಶ್ನಿಸದೇ ಹೋಗಿದ್ದರೆ, ಸರ್ಕಾರಗಳನ್ನು ಎಚ್ಚರಿಸದಿದ್ದರೆ ಈಗಿನದ್ದಕ್ಕಿಂತ ನಾಲ್ಕು ಪಟ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದ್ದವು. ಮಾಧ್ಯಮ ಗಳು ಸಮಾಜ–ಸರ್ಕಾರಗಳ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು’ ಎಂದರು.

‘ಮಾಧ್ಯಮಗಳು ಬಡವರ ನೋವುಗಳನ್ನು ಅನುಕೂಲಸ್ಥರಿಗೆ, ಸರ್ಕಾರಕ್ಕೆ ತಲುಪಿಸಿ ಸಕಾರಾತ್ಮಕವಾದ ಸಮಾಜ ಕಟ್ಟುವ ಬದಲು, ಉಳ್ಳವರ, ಸೆಲೆಬ್ರಿಟಿಗಳ ವಿಚಾರಗಳನ್ನು ಬಿತ್ತರಿಸುತ್ತ ಆಲಂಕಾರಿಕ ವಸ್ತುಗಳನ್ನು ಮಾರಲು ಸಹಾಯಕವಾಗಿರುವಂತಹ ಸಾಧನಗಳಾಗಿ ಬದಲಾಗಿದೆ’ ಎಂದರು.

ವಿಭಾಗದ ಪ್ರಾಧ್ಯಾಪಕರಾದ ಡಾ.ಡಿ.ಎಸ್. ಪೂರ್ಣಾನಂದ, ಮುಖ್ಯಸ್ಥ ಡಾ.ಸತೀಶ್‍ಕುಮಾರ್ ಮಾತನಾಡಿದರು. ಡಾ.ವರ್ಗೀಸ್, ಡಾ.ಎಂ.ಆರ್‌.ಸತ್ಯಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT