ಬುಧವಾರ, ಜುಲೈ 28, 2021
21 °C
ಅಧಿಕಾರಿಗಳ ತಂಡ ರಚನೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ

ಸ್ವಚ್ಛಮೇವ ಜಯತೆ, ಗೋಬರ್ ಗ್ಯಾಸ್‌ ಹಗರಣ ಮತ್ತೆ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸ್ವಚ್ಛಮೇವ ಜಯತೆ, ಗೋಬರ್ ಗ್ಯಾಸ್‌ ಸ್ಥಾವರಗಳ ಅಳವಡಿಕೆ ಅವ್ಯವಹಾರದ ತನಿಖೆಗೆ ಅಧಿಕಾರಿಗಳ ತಂಡ ರಚಿಸಲು ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

2019–20ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛಮೇವ ಜಯತೆ ಕಾರ್ಯಕ್ರಮ ಅನುಷ್ಠಾನದಲ್ಲಿ ಸುಮಾರು ₨ 23 ಲಕ್ಷ, ಕೆಲವು ವರ್ಷಗಳ ಹಿಂದೆ ಅನುಷ್ಠಾನದಲ್ಲಿದ್ದ ಗೋಬರ್ ಗ್ಯಾಸ್ ಸ್ಥಾವರ ಅಳವಡಿಕೆಯ ಅವ್ಯವಹಾರದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಿಧಾನ ಪರಿಷತ್ ಸದಸ್ಯ ಆರ್‌.ಪ್ರಸನ್ನಕುಮಾರ್, ಹಲವು ಜಿಲ್ಲಾ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ಅಧಿಕಾರಿಗಳ ಸಮಿತಿ ರಚಿಸಲಾಗುವುದು. ಒಂದು ತಿಂಗಳ ಕಾಲಮಿತಿ ನೀಡಲಾಗುವುದು. ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಎಂ.ಎಲ್‌.ವೈಶಾಲಿ ಭರಸವೆ ನೀಡಿದರು.

ಜಿಲ್ಲೆಯ ಬಹುತೇಕ ಔಷಧ ಅಂಗಡಿಗಳಲ್ಲಿ ಪರವಾನಗಿ ಪಡೆದ ವ್ಯಕ್ತಿ ವ್ಯವಹಾರ ನಡೆಸುತ್ತಿಲ್ಲ. ಬೇರೆಯವರಿಗೆ ನೀಡಿದ್ದಾರೆ. ಇದು ಪರವಾನಗಿ ದುರುಪಯೋಗ. ಅಂತಹ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಸುರೇಶ್ ಒತ್ತಾಯಿಸಿದರು.

ಸದಸ್ಯೆ ಶರಧಿ ಪೂರ್ಣೇಶ್ ಮಾತನಾಡಿ, ಜಿಲ್ಲೆಯ ಹಲವು ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಕಳಪೆಯಾಗಿವೆ. ಉನ್ನತ ಮಟ್ಟದ ತನಿಖೆಗೆ ಹಿಂದೆಯೇ ಒತ್ತಾಯಿಸಲಾಗಿತ್ತು. ಈವರೆಗೂ ಕೆಲವು ಘಟಕಗಳು ಆರಂಭಗೊಂಡಿಲ್ಲ. ಕೆಲವು ದುರಸ್ತಿಯಲ್ಲಿವೆ. ಮಲೆನಾಡಿನ ಕೆಲವು ಭಾಗಗಳಿಗೆ ಶುದ್ಧ ನೀರಿನ ಘಟಕಗಳ ಅಗತ್ಯವಿಲ್ಲ. ಘಟಕ ಅಳವಡಿಸುವ ಮುನ್ನ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರ ಜತೆ ಚರ್ಚಿಸಿ, ಅಳವಡಿಸುವುದು ಉತ್ತಮ ಎಂದರು.

ಸ್ಥಗಿತಗೊಂಡಿರುವ, ಬಳಕೆಯಲ್ಲಿರದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಂತ್ರಜ್ಞರು ಪರಿಶೀಲಿಸಿ, ಪಟ್ಟಿ ಮಾಡಿದ್ದಾರೆ. ಈಗಾಗಲೇ ಭದ್ರಾವತಿ ತಾಲ್ಲೂಕಿನ ಘಟಕಗಳ ಪರಿಶೀಲನೆ ಕಾರ್ಯ ಮುಕ್ತಾಯಗೊಂಡಿದೆ. ಶೀಘ್ರ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಎಂಜಿನಿಯರ್ ಮಾಹಿತಿ ನೀಡಿದರು.

ಲವಣಾಂಶ ಪ್ರಮಾಣ, ರಾಸಾಯನಿಕ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಸರ್ಕಾರದ ಮಾರ್ಗಸೂಚಿ ಇದೆ. ಜನರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದು ಸಿಇಒ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಶಾಸಕ ಹರತಾಳು ಹಾಲಪ್ಪ, ಆರ್.ಪ್ರಸನ್ನಕುಮಾರ್‌ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.