ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಸಮಾಜದ ಗೌರವಕ್ಕೆ ಅಭಾರಿ: ಗೊ.ರು.ಚ

ಗೊ.ರು. ಚನ್ನಬಸಪ್ಪಗೆ ‘ಕೆಳದಿ ಶಿವಪ್ಪ ನಾಯಕ’ ಪ್ರಶಸ್ತಿ ಪ್ರದಾನ
Last Updated 6 ಫೆಬ್ರುವರಿ 2023, 6:25 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಪುಟ್ಟ ಹಳ್ಳಿಯಲ್ಲಿ ಹುಟ್ಟಿ. ಹರಿದ ಚಾಪೆಯಲ್ಲಿ ಮಲಗಿ, ಹರಿದ ಕಂಬಳಿ ಹೊದ್ದು, ಅರೆಹೊಟ್ಟೆಯಲ್ಲಿ ದಿನ ಕಳೆದು, ಶಿಕ್ಷಣದಿಂದ ವಂಚಿತನಾದ ನಾನು, ನಾಡಿನ ಪ್ರೀತಿ ಇಷ್ಟು ಪ್ರಮಾಣದಲ್ಲಿ ಗಳಿಸುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ’ ಎಂದು ಹೇಳಿದ ಸಾಹಿತಿ ಗೊ.ರು.ಚನ್ನಬಸಪ್ಪ ಭಾವುಕರಾದರು.

ನಗರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ‘ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ‘ಚಿಂತಕರೊಬ್ಬರು ‘ಜಗತ್ತಿನಲ್ಲಿ ಹಾದು ಹೋಗುವುದು ಒಂದೇ ಸಲ. ಒಮ್ಮೆ ಅತ್ತ ಹೋದ ಮೇಲೆ, ಇತ್ತ ಬರುವುದಿಲ್ಲ. ಆದ್ದರಿಂದ ಮಾಡುವ ಕೆಲಸ ಉಳಿದಿದ್ದರೆ ಈಗಲೇ ಮಾಡೋಣ’ ಎಂದು ಹೇಳಿದ್ದರು. ಅದು ನನಗೆ ಮೇಲ್ಪಂಕ್ತಿಯಾಯಿತು’ ಎಂದರು.

‘ನೋಡುವುದ ನೋಡಿ ಕಣ್ಣಿನ ದೃಷ್ಟಿ ಹೋದ ಮೇಲೆ ಕನ್ನಡಕ ಕೊಂಡಿದ್ದೇನೆ. ಕೇಳುವುದ ಕೇಳಿ ಶ್ರವಣ ದೃಷ್ಟಿ ಹೋದ ಮೇಲೆ ಶ್ರವಣ ಸಾಧನ ಕೊಂಡಿದ್ದೇನೆ. ಬಾಯಲ್ಲಿ ಅಗೆಯ ಬೇಕಾದ್ದನ್ನು ಅಗೆದು, ಹಲ್ಲು ಉದುರಿದ ಮೇಲೆ ದಂತದ ಸೆಟ್ ಕೊಂಡಿದ್ದೇನೆ. ಮನದಲ್ಲಿ ನೆನೆಯಬೇಕಾದ್ದನ್ನು ನೆನೆದು, ನೆನಪಿನ ಶಕ್ತಿ ಹೋಗಿ ಮರೆವು ತಂದು ಕೊಂಡಿದ್ದೇನೆ. ಇಂತಹ ಅವಸ್ಥೆಯಲ್ಲಿ ನನ್ನನ್ನು ಲಿಂಗಾಯತ ಸಮಾಜ ಗುರುತಿಸಿ, ಗೌರವಿಸಿದ್ದು ಸಂತಸ ತಂದಿದೆ’ ಎಂದರು.

‘ಇದು ಸಮಾಜದ ಕಾರ್ಯಕ್ರಮ. ಒಳ್ಳೆಯ ವ್ಯಕ್ತಿಗಳನ್ನು ಗುರುತಿಸುವುದು ಕಡಿಮೆ ಆಗುತ್ತಿದೆ. ಆದರೆ, ಗೊ.ರು.ಚ ಅವರನ್ನು ಗೌರವಿಸುವ ಕಾರ್ಯಕ್ರಮಕ್ಕೆ ಇಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ ಅಂದರೆ ಆರೋಗ್ಯಕರ ಮನಸ್ಸುಗಳು ಉಳಿದಿವೆ ಎಂಬುದು ತಿಳಿಯುತ್ತದೆ’ ಎಂದು ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

‘ಗೊ.ರು.ಚ ಅವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕೆಳದಿ ಶಿವಪ್ಪ ನಾಯಕ ಸಮಾಜ ಸೇವೆಗೆ ಹೆಸರಾದವರು. ವಿಜಯ ನಗರ ಸಾಮ್ರಾಜ್ಯವೇ ಅವರ ಮೇಲೆ ಅವಲಂಬಿತವಾಗಿತ್ತು. ಅದೇ ರೀತಿ ಸಮಾಜ ಸೇವೆಗೆ ಶ್ರಮಿಸಿದ ಅನೇಕ ನಾಯಕರನ್ನು ನಾವು ಮರೆತಿದ್ದೇವೆ. ಅವರನ್ನೂ ಸ್ಮರಿಸೋಣ’ ಎಂದು ವಿಧಾನ ಪರಿಷತ್ ಸದಸ್ಯ
ಎಸ್. ರುದ್ರೇಗೌಡ ಹೇಳಿದರು.

ಇದೇ ವೇಳೆ ಸಮಾಜದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸ ಲಾಯಿತು. ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎನ್. ಸಜ್ಜನ್, ಚಂದ್ರಶೇಖರ ತಳಗಿಹಾಳ, ಜಿ.ವಿಜಯ್ ಕುಮಾರ್, ಬಸವರಾಜಪ್ಪ ಭಾರಂಗಿ ಇದ್ದರು.

***

‘ಪ್ರಶಸ್ತಿಯ ಗೌರವ ಹೆಚ್ಚಿಸಿದೆ’

‘ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ಗೊ.ರು.ಚ ಅವರಿಗೆ ನೀಡುತ್ತಿರುವುದರಿಂದ ಪ್ರಶಸ್ತಿಯ ಗೌರವ ಇನ್ನೂ ಹೆಚ್ಚಿದೆ’ ಎಂದು ಚಿಂತಕಿ ಎಂ.ಎಸ್.ಆಶಾದೇವಿ ಹೇಳಿದರು.

‘ಬಸವಾದಿ ಸಮುದಾಯಕ್ಕೆ ಎಂತಹ ಸಮಾಜ ಕಟ್ಟಬೇಕು ಎನ್ನುವ ಆಶಯ ಇತ್ತು. ಯಾವ ಆಲಯದಿಂದ ಬಯಲಿನ ಕಡೆಗೆ ಚಲಿಸಲು ಇಡೀ ಶರಣ ಚಳವಳಿ ಪ್ರಯತ್ನ ಪಡುತ್ತಿತ್ತೊ, ಅದನ್ನು ನಮಗೆ ತಿಳಿದೊ, ತಿಳಿಯದೆಯೋ ಬಯಲಾಗಿಯೇ ಇರಿಸಲು ಗೊ.ರು.ಚ ಅವರು ಪ್ರಯತ್ನ ಪಟ್ಟರು. ಈಗಲೂ ಪ್ರಯತ್ನ ಪಡುತ್ತಿರುವರು’ ಎಂದರು.

***

‘ಕೋಟೆ ಅಭಿವೃದ್ಧಿಗೆ ₹3 ಕೋಟಿ’

‘ಕೆಳದಿ ಅರಸರ ಕ್ಷೇತ್ರಗಳು, ಬಿದರೂರಿನ ಕೋಟೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗಮನ ಸೆಳೆದು ಕೋಟೆ ಅಭಿವೃದ್ಧಿಗೆ ಮುಂದಿನ ದಿನದಲ್ಲಿ ಶ್ರಮಿಸಲಾಗುವುದು ಎಂದರು. ಈಗಾಗಲೇ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ
₹ 1 ಕೋಟಿ ಅನುದಾನ ನೀಡಿದ್ದಾರೆ. ಮುಂದಿನ ದಿನದಲ್ಲಿ ಕೇಂದ್ರ ಸರ್ಕಾರದಿಂದಲೂ ₹2 ಕೋಟಿ ಅನುದಾನ ಬರಲಿದೆ’ ಎಂದು ಸಂಸದ _ಬಿ.ವೈ. ರಾಘವೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT