ಮಂಗಳವಾರ, ಮೇ 18, 2021
30 °C

ತೀರ್ಥಹಳ್ಳಿ: ಮಲೆನಾಡಿನಲ್ಲೀಗ ದೈಯದ ಹರಕೆ ಸಂಭ್ರಮ, ಕೊರೊನಾ ಬಾಧಿಸದಂತೆ ಪ್ರಾರ್ಥನೆ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಗ್ರಾಮದ ಜನರನ್ನು ರಕ್ಷಿಸುವಂತೆ ಗ್ರಾಮ ದೇವತೆಗಳನ್ನು ಪೂಜಿಸುವ ದೈಯದ ಹರಕೆಗಳು ಮಲೆನಾಡಿನಲ್ಲಿ ಈಗ ಜೋರಾಗಿ ನಡೆಯುತ್ತಿವೆ. ಕೊರೊನಾ ರೋಗ ಬಾಧಿಸದಂತೆ ಊರ ಜನರನ್ನು ಕಾಪಾಡುವಂತೆ ದೈಯಗಳಿಗೆ ಪ್ರಾರ್ಥನೆ ಸಲ್ಲಿಕೆಯಾಗುತ್ತಿರುವುದು ವಿಶೇಷವಾಗಿದೆ.

ಪ್ರತಿ ಗ್ರಾಮದ ಗಡಿಯಲ್ಲಿ ನೆಲೆಸಿರುವ ಭೂತ, ಚೌಡಿ, ಗಿಡನದೈಯ, ಜಟಕ, ಕೊಳ್ಳಿದೈಯ, ಭೇಟಿ ದೈಯ, ಕೀಳುಚೌಡಿ ಹೀಗೆ ನಂಬಿದ ದೈವಗಳು ಊರಿನ ಹಿತಕಾಯುವ ಜೊತೆಗೆ ಬೆಳೆಗಳ ಸಂರಕ್ಷಣೆ, ರೋಗ ರುಜಿನಗಳಿಂದ ರಕ್ಷಣೆ ನೀಡುತ್ತವೆ. ಜನ, ಜಾನುವಾರು, ಮಕ್ಕಳು ಮರಿಯನ್ನು ಕಾಪಾಡುತ್ತವೆ ಎಂಬ ನಂಬಿಕೆಯಿಂದ ಗ್ರಾಮಸ್ಥರೆಲ್ಲ ಒಗ್ಗೂಡಿ ಹರಕೆ ಒಪ್ಪಿಸುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಅನೂಚಾನವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.

ಏಪ್ರಿಲ್, ಮೇ ತಿಂಗಳಿನಿಂದ ಆರಂಭವಾಗುವ ದೈಯದ ಹರಕೆ ಕಾರ್ಯಕ್ರಮಗಳು ಜೂನ್, ಜುಲೈ ತಿಂಗಳವರೆಗೂ ನಡೆಯುತ್ತವೆ. ಮಲೆನಾಡಿನ ಕೃಷಿ ಹಿಡುವಳಿಯ ಗಡಿ ಭಾಗದಲ್ಲಿ ನೆಲೆ ನಿಂತು ಜಮೀನು, ಗ್ರಾಮವನ್ನು ಕಾಪಾಡುವ ದೈಯಗಳಿಗೆ ಅಲ್ಲಲ್ಲಿ ಕಟ್ಟೆ ಕಟ್ಟಿ ಪೂಜಿಸಲಾಗುತ್ತದೆ. ಕಾಡು ಕಲ್ಲುಗಳನ್ನೇ ದೈವವೆಂದು ನಂಬುವ ಜನರು ದೈಯದ ಬನದ ಗಿಡಗಳನ್ನು ಕಡಿಯದೇ ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರೆ. ಆಕಾರವಿಲ್ಲದ ಕಾಡು ಕಲ್ಲಿನಲ್ಲಿ ದೈವದ ಶಕ್ತಿ ಇರುವುದನ್ನು ನಂಬುತ್ತಾರೆ. ಕುರಿ, ಕೋಳಿ, ಹಣ್ಣು, ಕಾಯಿ ಪೂಜೆ ಸಮರ್ಪಿಸಿ ಮಾಂಸದಡಿಗೆಯನ್ನು ದೇವರಿಗೆ ಎಡೆ ಇಟ್ಟು ಶುದ್ಧ ಮನಸ್ಸಿನಿಂದ ತಮ್ಮನ್ನು ಕಾಪಾಡುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ.

ದೈಯದ ಹರಕೆಯನ್ನು ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ದಿನಾಂಕ ನಿಗದಿ ಮಾಡುತ್ತಾರೆ. ಕಾಡಿನಲ್ಲಿ ನೆಲೆ ನಿಂತ ದೈಯದ ಬನವನ್ನು ಶುಚಿಗೊಳಿಸುತ್ತಾರೆ. ಓರಣಗೊಳಿಸಿದ ದೈಯದ ಬನದಲ್ಲಿ ಹರಕೆ ಒಪ್ಪಿಸಿದ ಕುರಿ, ಕೋಳಿ ಮಾಂಸದ ಅಡುಗೆ ಮಾಡಿ ದೇವರಿಗೆ ಎಡೆ ಇಟ್ಟು ಪ್ರಸಾದದ ರೂಪದಲ್ಲಿ ದೈಯದ ಬನದಲ್ಲಿ ಸಾಮೂಹಿಕ ಭೋಜನ ಸವಿಯುತ್ತಾರೆ.

ಒಂದೊಂದು ದೈಯಕ್ಕೆ ಒಂದೊಂದು ಬಗೆಯಲ್ಲಿ ಹರಕೆ ಒಪ್ಪಿಸುವ ಸಂಪ್ರದಾಯ ಇದೆ. ಇಂಥಹ ಸಂಪ್ರದಾಯ, ಆಚರಣೆಗಳು ಗ್ರಾಮದಿಂದ ಗ್ರಾಮಕ್ಕೆ ಭಿನ್ನವಾಗಿರುತ್ತವೆ. ಮಾಂಸಾಹಾರ ಸ್ವೀಕರಿಸದ ದೈವಗಳು ಕೂಡಾ ಇದರಲ್ಲಿ ಸೇರಿವೆ. ಇಂಥಹ ದೈವಗಳಿಗೆ ಹಣ್ಣು, ಕಾಯಿ ನೈವೇದ್ಯದ ಪೂಜೆ ಸಲ್ಲಿಕೆಯಾಗುತ್ತದೆ. ಗ್ರಾಮದ ಹಿರಿಯರು ಶುದ್ಧ ಮನಸ್ಸಿನಿಂದ ಪೂಜೆ ಸಲ್ಲಿಸಿ ಊರಿನ ಏಳಿಗೆಗೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಯಾವ ಬಗೆಯ ತೊಂದರೆಗಳು ಬಾಧಿಸದೇ ಇರಲಿ ಎಂಬ ಪ್ರಾರ್ಥನೆಗೆ ಉಳಿದ ಗ್ರಾಮಸ್ಥರು ದನಿಗೂಡಿಸುತ್ತಾರೆ.

ಮಲೆನಾಡಿನ ಪ್ರತಿಗ್ರಾಮದಲ್ಲಿ ದೈಯದ ಹರಕೆ ನಡೆದರೂ ಗ್ರಾಮ ಗ್ರಾಮಗಳ ನಡುವೆ ಭಿನ್ನ ಆಚರಣೆಗಳಿವೆ. ದೈಯದ ಹರಕೆಯ ಆಶಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಲ್ಲ ಜಾತಿ, ಸಮುದಾಯದವರೂ ಹರಕೆ ಒಪ್ಪಿಸುತ್ತಾರೆ. ಹರಕೆ ದಿನದಂದು ಇಡೀ ಗ್ರಾಮವೇ ಹಬ್ಬದ ಸಂಭ್ರಮದಲ್ಲಿ ಮುಳುಗುತ್ತದೆ.

ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಯುವಂತೆ ಗ್ರಾಮದ ಗಡಿಯಲ್ಲಿ ನೆಲೆ ನಿಂತ ದೈಯಗಳಿಗೆ ನಿತ್ಯ ಪೂಜೆ ಸಲ್ಲಿಸುವುದಿಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ಪೂಜೆ ಸಲ್ಲಿಕೆಯಾಗುತ್ತದೆ. ಒಂದು ದಿನ ಹರಕೆ ಒಪ್ಪಿಸಿ ಎಡೆ ಇಟ್ಟು ಬೇಡಿಕೊಂಡರೆ ವರ್ಷ ಪೂರ್ತಿ ನಮ್ಮನ್ನು ದೈಯಗಳು ಕಾಯುತ್ತವೆ ಎಂಬ ಬಲವಾದ ನಂಬಿಕೆ ಬೇರೂರಿದೆ. ಹಾಗಾಗಿಯೇ ಕಾಡುಕಲ್ಲಿನಲ್ಲಿ ಶಕ್ತಿ ತುಂಬಿಕೊಂಡಿರುವ ದೈಯಗಳನ್ನು ತಲೆತಲಾಂತರದಿಂದ ಪೂಜಿಸಿಕೊಂಡು ಬರಲಾಗುತ್ತಿದೆ.

‘ದೈಯದ ಹರಕೆ ನಿಲ್ಲಿಸಿದರೆ ಊರಿಗೆ ಕೇಡಾಗುತ್ತದೆ. ಬೆಳೆ ಕೈಸೇರಲ್ಲ. ರೋಗರುಜಿನ ಹೆಚ್ಚಾಗಿ ಜನ ಕಷ್ಟಕ್ಕೆ ಸಿಲುಕುತ್ತಾರೆ. ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿರುವ ದೈಯದ ಹರಕೆ ತೀರಿಸಿ ದೈಯ, ದೇವರನ್ನು ಸಂತೃಪ್ತಿಗೊಳಿಸಿದರೆ ಗ್ರಾಮದ ಜನರು ನೆಮ್ಮದಿಯಿಂದ ಇರಲು ಸಾಧ್ಯ’ ಎಂದು ಹಿರಿಯ ಗ್ರಾಮಸ್ಥರಾದ ಸಾಲೇಜನಗಲ್ಲು ರಾಮನಾಯ್ಕ ಹೇಳುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು