ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಐಎಸ್‌ಎಲ್‌ಗೆ ಒಳ್ಳೆಯದು ಮಾಡಲು ಬಂದಿದ್ದೇನೆ, ಆತಂಕ ಬೇಡ: ಎಚ್‌ಡಿಕೆ

ವಿಐಎಸ್‌ಎಲ್ ಅಧಿಕಾರಿಗಳು, ಕಾರ್ಮಿಕರೊಂದಿಗೆ ಕೇಂದ್ರ ಸಚಿವ ಎಚ್‌ಡಿಕೆ ಸಭೆ
Published 30 ಜೂನ್ 2024, 13:46 IST
Last Updated 30 ಜೂನ್ 2024, 13:46 IST
ಅಕ್ಷರ ಗಾತ್ರ


ಶಿವಮೊಗ್ಗ:
ವಿಐಎಸ್‌ಎಲ್‌ಗೆ ಒಳ್ಳೆಯದು ಮಾಡಲು ಬಂದಿದ್ದೇನೆ. ಆತಂಕ ಪಡುವುದು ಬೇಡ ಎಂದು ಕಾರ್ಖಾನೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆ ಪದಾಧಿಕಾರಿಗಳಿಗೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭಾನುವಾರ ಭೇಟಿ ನೀಡಿದ್ದ ಅವರು, ನಂತರ ಅಧಿಕಾರಿಗಳು, ಕಾರ್ಮಿಕ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಚರ್ಚಿಸಿದರು. ಈ ಸಭೆಗೆ ಮಾಧ್ಯಮದವರ ಪ್ರವೇಶ ನಿರ್ಬಂಧಿಸಲಾಗಿತ್ತು.

ಕಾರ್ಖಾನೆಯ ಬೇರೆ ಬೇರೆ ಪ್ಲಾಂಟ್‌ಗಳ ಸದ್ಯದ ಉತ್ಪಾದನಾ ಸಾಮರ್ಥ್ಯ, ಉತ್ಪಾದನಾ ವೆಚ್ಚ, ಮಾರುಕಟ್ಟೆ ಮೌಲ್ಯ, ಕಚ್ಚಾವಸ್ತುಗಳ ಲಭ್ಯತೆ, ಗಣಿಗಳ ಸ್ಥಿತಿಗತಿ, ಸದ್ಯ ಹಾಗೂ ಭವಿಷ್ಯದ ದಿನಗಳಲ್ಲಿ ಕಾರ್ಖಾನೆಯ ಬೆಳವಣಿಗೆ ಅವಕಾಶಗಳ ಬಗ್ಗೆ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಿಐಎಸ್‌ಎಲ್‌ನಲ್ಲಿ ಹೈಡ್ರೋಜನ್ ಇಲ್ಲವೇ ನೈಸರ್ಗಿಕ ಅನಿಲ ಬಳಸಿ 2.5 ಮಿಲಿಯನ್ ಟನ್ ಸಾಮರ್ಥ್ಯದ ಗ್ರೀನ್‌ ಸ್ಟೀಲ್‌ ಪ್ಲಾಂಟ್‌ ಆರಂಭಿಸಲು ಅವಕಾಶವಿದೆ. ಗ್ರೀನ್‌ ಪ್ಲಾಂಟ್‌ನಲ್ಲಿ ಅಲಾಯ್ ಹಾಗೂ ಸ್ಟ್ರಕ್ಚರಲ್ ಕಮರ್ಷಿಯಲ್ ಸ್ಟೀಲ್ ಮಿಕ್ಸ್ ಮಾಡುವ ತಾಂತ್ರಿಕತೆ ಅಳವಡಿಸಬೇಕು. ಇಡೀ ಪ್ರಕ್ರಿಯೆಗೆ ₹15ರಿಂದ 20 ಸಾವಿರ ಕೋಟಿ ಬಂಡವಾಳವನ್ನು ಭಾರತೀಯ ಉಕ್ಕು ಪ್ರಾಧಿಕಾರದಿಂದ (ಎಸ್‌ಎಐಎಲ್‌) ಹೂಡಿಕೆ ಮಾಡಬೇಕಾಗುತ್ತದೆ ಎಂಬುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ವಿಐಎಸ್‌ಎಲ್‌ ಪುನಶ್ಚೇತನದ ವಿಚಾರದಲ್ಲಿ ಏನೇ ಬೆಳವಣಿಗೆ ನಡೆಯಬೇಕಿದ್ದರೂ ಅದಕ್ಕೂ ಮುನ್ನ ಕಾರ್ಖಾನೆಯನ್ನು ಕೇಂದ್ರದ ಬಂಡವಾಳ ಹಿಂತೆಗೆತ ಪಟ್ಟಿ ಹಾಗೂ ಮುಚ್ಚುವ ನಿರ್ಧಾರದಿಂದ ಹೊರಗೆ ತರಬೇಕು ಎಂಬುದನ್ನು ಸಭೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿತು.

ಲೋಕಸಭಾ ಅಧಿವೇಶನ ನಡೆಯುತ್ತಿದೆ. ಸಚಿವನಾಗಿ ಕಾರ್ಖಾನೆಯ ವಿಚಾರದಲ್ಲಿ ಏನೂ ಹೇಳಿಕೆ ನೀಡಲು ಆಗುವುದಿಲ್ಲ. ಕಾರ್ಖಾನೆಯ ಸ್ಥಿತಿಗತಿ ನೋಡಿಕೊಂಡು ಹೋಗಲು ಬಂದಿರುವೆ. ಕಾರ್ಮಿಕರಿಗೆ ಈಗ ತಿಂಗಳಿಗೆ 13 ದಿನ ಕೆಲಸವಿದೆ ಅದನ್ನು 26 ದಿನಗಳಿಗೆ ಏರಿಸಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು. ನಿಮ್ಮ (ಕಾರ್ಮಿಕರ) ಬೇಡಿಕೆ ಕಾನೂನು‌ ವ್ಯಾಪ್ತಿಯೊಳಗೆ ಈಡೇರಿಸಲು ಸಾಧ್ಯವಾದರೆ ಬಗೆಹರಿಸುವುದಾಗಿ ಭರವಸೆ ನೀಡಿದರು ಎಂದು ಗೊತ್ತಾಗಿದೆ.

ಸಭೆಗೂ ಮುನ್ನ ಕಾರ್ಖಾನೆಯ ವಿವಿಧ ಉತ್ಪಾದನಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಎಚ್‌.ಡಿ.ಕುಮಾರಸ್ವಾಮಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೇಂದ್ರ ಸಚಿವರ ಭೇಟಿ ಕಾರ್ಖಾನೆಯ ಪುನಶ್ಚೇತನದ ವಿಚಾರದಲ್ಲಿ ಉಕ್ಕಿನ ನಗರಿ ಭದ್ರಾವತಿ ಜನರ ನಿರೀಕ್ಷೆಯ ಗರಿಗೆದರಿಸಿತ್ತು. ಕಾರ್ಖಾನೆಯ ಕಾರ್ಮಿಕರು ಹಾಗೂ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ವಿಐಎಸ್‌ಎಲ್‌ ಮುಖ್ಯಗೇಟ್ ಹೊರಭಾಗದಲ್ಲಿ ನೆರೆದಿದ್ದರು

ಕಾರ್ಖಾನೆಯ ಪರಿವೀಕ್ಷಣೆ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸಾಥ್ ನೀಡಿದರು.

ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತ ಪಟ್ಟಿಗೆ ಸೇರಿಸಿದರೂ ವಿಐಎಸ್‌ಎಲ್‌ ಮುಚ್ಚಲು ಬಿಡದೇ ಮುನ್ನಡೆಸಿಕೊಂಡು ಬಂದೆವು. ಆಗಲೇ ಬೀಗ ಹಾಕಿದ್ದರೆ ಈಗ ಏನೂ ಮಾಡಲು ಆಗುತ್ತಿರಲಿಲ್ಲ. ಚಾಲನಾ ಸ್ಥಿತಿಯಲ್ಲಿಯೇ ಮತ್ತೆ ಟೇಕಾಫ್ ಒಳ್ಳೆಯ ಸಂಗತಿ.. ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ

‘ಕಾರ್ಖಾನೆ ಉಳಿವು ಶಾಶ್ವತ ವ್ಯವಸ್ಥೆ ಮಾಡಿ’

ವಿಐಎಸ್‌ಎಲ್‌ ಕಾರ್ಖಾನೆ ಪುನಶ್ಚೇತನಕ್ಕೆ ₹500ರಿಂದ 600 ಕೋಟಿ ಖರ್ಚು ಮಾಡಿ ತಾತ್ಕಾಲಿಕ ವ್ಯವಸ್ಥೆ ಮಾಡಿದರೆ ಏನೂ ಉಪಯೋಗವಿಲ್ಲ. ಶಾಶ್ವತ ವ್ಯವಸ್ಥೆ ಮಾಡಿ ಎಂದು ಸಭೆಯಲ್ಲಿ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು ಎಂದು ತಿಳಿದುಬಂದಿದೆ. ‘ನೀತಿ ಆಯೋಗದ ಬಂಡವಾಳ ಹಿಂತೆಗೆತ ಪಟ್ಟಿಯಿಂದ ಕಾರ್ಖಾನೆಯನ್ನು ಮೊದಲು ಹೊರಗೆ ತರಬೇಕು. ನಂತರ ತಾವು (ಎಚ್‌.ಡಿ.ಕುಮಾರಸ್ವಾಮಿ) ಹಾಗೂ ಸಚಿವ ಪ್ರಹ್ಲಾದ ಜೋಶಿ ಅವರ ಮೂಲಕ ಕೇಂದ್ರದ ಮೇಲೆ ಒತ್ತಡ ತಂದು ಹೂಡಿಕೆ ಮಾಡಿಸಬಹುದು. ವಿಐಎಸ್‌ಎಲ್‌ ‍ಪುನಶ್ಚೇತನ ವಿಚಾರವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಎಂದು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಲೋಕಸಭಾ ಚುನಾವಣೆಗೆ ಮುನ್ನ ಅಂದಿನ ಉಕ್ಕು ಸಚಿವ ಜ್ಯೋತಿರಾರಾಧ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದರು’ ಎಂಬುದನ್ನು ಬಿ.ವೈ.ರಾಘವೇಂದ್ರ ಸಚಿವರ ಗಮನಕ್ಕೆ ತಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT