ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ಮನೆ ಅವಧಿಯಲ್ಲಿ ಅರ್ಜಿಯೇ ಸಲ್ಲಿಸದ ಶಿಕ್ಷಕರ ನೇಮಕ

ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯ
Last Updated 29 ಸೆಪ್ಟೆಂಬರ್ 2022, 6:04 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ನಾನು ಯೋಗ್ಯ ಉಳಿದವರು ಅಯೋಗ್ಯ ಎಂಬ ಅತೃಪ್ತಿ ಬಿಡಬೇಕು. 2014–15ರಲ್ಲಿ ನಡೆದಿರುವ ಸಹ ಶಿಕ್ಷಕರ ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಆಗ ಶಿಕ್ಷಣ ಇಲಾಖೆಯ ಸಚಿವರು ಯಾರಾಗಿದ್ದರು? ನಮ್ಮ ಕ್ಷೇತ್ರದವರೇ ಅಲ್ವಾ? ನಾನು ಅವರ ರಾಜೀನಾಮೆ ಕೇಳೋದಿಲ್ಲ. ಏಕೆಂದರೆ ಅವರು ಅಧಿಕಾರದಲ್ಲಿ ಇಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಿಮ್ಮನೆ ರತ್ನಾಕರ್‌ ಅವರನ್ನು ತರಾಟೆ ತಗೆದುಕೊಂಡರು.

ಮಂಗಳವಾರ ಹೊದಲ–ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಾವರ–ಬದನೇಹಿತ್ಲು ಸಂಪರ್ಕಕ್ಕೆ ₹1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಎರಡೂವರೆ ವರ್ಷ ಶಿಕ್ಷಣ ಮಂತ್ರಿಯಾಗಿ ಇಲಾಖೆ ಏನು ಅಂತ ಕಿಮ್ಮನೆಗೆ ಗೊತ್ತಾಗಿಲ್ಲ. ಗೃಹ ಸಚಿವನಾದ ಎರಡು ತಿಂಗಳಲ್ಲಿ ಪಿಎಸ್‌ಐ ಹಗರಣ ಬಯಲಿಗೆಳೆದೆ. ಇಲ್ಲಿಯವರೆಗೆ 97 ಅಧಿಕಾರಿಗಳನ್ನು ಜೈಲಿಗೆ ಅಟ್ಟಿದ್ದೇನೆ. ಸಚಿವನಾಗಿ ಯಾವುದನ್ನೂ ಮುಚ್ಚಿಟ್ಟಿಲ್ಲ. ಶಿಕ್ಷಕರ ನೇಮಕಾತಿ ಮುಚ್ಚಿಟ್ಟು ಬಡವರಿಗೆ ಅನ್ಯಾಯ ಮಾಡಿದ್ದು ಯಾರು’ ಎಂದು ಪ್ರಶ್ನಿಸಿದರು.

‘‌ಪಿಎಸ್‌ಐ ನೇಮಕಾತಿ ಹಗರಣವನ್ನು ನನ್ನ ತಲೆಗೆ ಕಟ್ಟಲು ಕ್ಷೇತ್ರದಲ್ಲಿ ಸಂಚು ನಡೆದಿತ್ತು. ಆದರೆ, ಶಿಕ್ಷಕರ ನೇಮಕಾತಿ ಪ್ರಕರಣದಿಂದ ನುಣುಚಿಕೊಳ್ಳುವ ಉದ್ದೇಶದಿಂದ ‘ಅಧಿಕಾರಿಗಳ ಹಂತದಲ್ಲಿ ಹಗರಣ ನಡೆದಿದೆ’ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡುತ್ತಾರೆ. ಅಧಿಕಾರಿಗಳು ಸಚಿವರ ಹತೋಟಿಯಲ್ಲಿ ಇರುವುದಿಲ್ವಾ? ಇಲ್ಲ ಅಂತಾದ್ರೆ ನನ್ನ ತಲೆಗೆ ಕಟ್ಟಿದ್ಯಾಕೆ’ ಎಂದು ಕಿಡಿಕಾರಿದರು.

ವೇದಿಕೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಟಿಎಪಿಸಿಎಂಎಸ್‌ ಅಧ್ಯಕ್ಷ ನಾಗರಾಜ ಶೆಟ್ಟಿ, ಬಿಜೆಪಿ ಹಿರಿಯ ಮುಖಂಡ ಸಿ.ಬಿ.ಈಶ್ವರ್, ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಸಂತೋಷ್, ಉಪಾಧ್ಯಕ್ಷೆ ಮಲ್ಲಿಕಾ ರಾಘವೇಂದ್ರ, ಸದಸ್ಯರಾದ ಸತೀಶ್ ವೈ, ಹೊದಲ ವಿನಾಯಕ, ದಿನೇಶ್, ಪತ್ರ ಬರಹಗಾರ ದು. ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT