ಶನಿವಾರ, ಮಾರ್ಚ್ 6, 2021
32 °C
ಮತ್ತೆ ಮೂವರ ವಶ, ಹೊರ ರಾಜ್ಯಗಳಿಗೆ ನುರಿತ ಪೊಲೀಸರ ತಂಡ, ವಿದ್ಯುತ್ ಸ್ಪರ್ಶದ ಶಂಕೆ

ಹುಣಸೋಡು ದುರ್ಘಟನೆ| ಮೊದಲ ದಿನದ ತನಿಖೆಯಲ್ಲೇ ಸ್ಫೋಟಕಗಳ ಮಾರಾಟ ಜಾಲದ ಸುಳಿವು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಪೂರ್ವವಲಯ ಐಜಿಪಿ ಎಸ್‌.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ನೇತೃತ್ವದಲ್ಲಿ ಸ್ಥಳೀಯ ಪೊಲೀಸರು ಅಬ್ಬಲಗೆರೆ–ಹುಣಸೋಡು ಸ್ಫೋಟ ಪ್ರಕರಣದ ತನಿಖೆ ಆರಂಭಿಸಿದ್ದು, ಮೊದಲ ದಿನವೇ ಸ್ಫೋಟಕ ಸಾಮಗ್ರಿಗಳ ಮಾರಾಟದ ಕರಾಳ ದಂಧೆಯ ಮಹತ್ವದ ಸುಳಿವು ಲಭ್ಯವಾಗಿದೆ.

ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಿಂದ ಅಧಿಕ ಪ್ರಮಾಣದಲ್ಲಿ ಜಿಲೆಟಿನ್‌, ಅಮೊನಿಯಂ ನೈಟ್ರೇಟ್, ಡಿಟೊನೇಟರ್ ಸೇರಿದಂತೆ ಸ್ಫೋಟಕ ಸಾಮಗ್ರಿಗಳನ್ನು ಲಾರಿಗಳಲ್ಲಿ ತಂದು ಜಿಲ್ಲೆಯ ಇತರೆ ಕ್ವಾರಿಗಳ ಮಾಲೀಕರಿಗೆ ಅಧಿಕ ದರಕ್ಕೆ ಮರುಮಾರಾಟ ಮಾಡುವ ದೊಡ್ಡ ಜಾಲವೇ ಜಿಲ್ಲೆಯಲ್ಲಿ ಹಬ್ಬಿರುವುದು ವಶಕ್ಕೆ ಪಡೆದ ಆರೋಪಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಒಮ್ಮೆಗೆ 5ರಿಂದ 10 ಟನ್‌ ಸ್ಫೋಟಕ ಸಾಮಗ್ರಿಗಳನ್ನು ತರಿಸುತ್ತಿದ್ದ ತಂಡಗಳು ಇಲ್ಲಿನ ಕ್ವಾರಿಗಳಲ್ಲಿ ಲಾರಿ ನಿಲ್ಲಿಸಿಕೊಂಡು ಮರು ವಿಂಗಡಣೆ ಮಾಡುತ್ತಿದ್ದರು. ನಂತರ ಜೀಪ್‌ಗಳಲ್ಲಿ ಬೇಡಿಕೆ ಇರುವ ಕ್ವಾರಿಗಳಿಗೆ ತಲುಪಿಸುತ್ತಿದ್ದರು. ಅದಕ್ಕಾಗಿ ಸ್ಫೋಟಗಳ ಬಳಕೆಯಲ್ಲಿ ಅನುಭವ ಇದ್ದ ಸ್ಥಳೀಯ ಯುವಕರನ್ನು ಬಳಸಿಕೊಳ್ಳಲಾಗುತ್ತಿತ್ತು. ಗುರುವಾರ ರಾತ್ರಿ ಹುಣಸೋಡು ಕ್ವಾರಿ ಪ್ರದೇಶಕ್ಕೆ ಬಂದಿದ್ದ ಲಾರಿಯಲ್ಲಿ ಮೂರು ಟನ್‌ ಸ್ಫೊಟಕಗಳು, 18 ಜನರು ಇದ್ದರು. ಎರಡು ಜೀಪುಗಳಿಗೆ ಸಾಮಗ್ರಿಗಳನ್ನು ತುಂಬಿ ಕಳುಹಿಸಿದ ನಂತರ ಕೆಲವರು ಸ್ಥಳದಿಂದ ಮರಳಿದ್ದಾರೆ. ಕೆಲವರು ಊಟ ಮಾಡಲು ತೆರಳಿದ್ದಾರೆ. ಸ್ಥಳದಲ್ಲಿದ್ದ 6 ಮಂದಿ ಮತ್ತೊಂದು ಜೀಪ್‌ಗೆ ಸಾಮಗ್ರಿ ಬದಲಿಸುವಾಗ ಸ್ಫೋಟ ಸಂಭವಿಸಿದೆ. ಅಲ್ಲಿದ್ದ 6 ಜನರೂ ಮೃತಪಟ್ಟಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಲಾರಿಯಲ್ಲಿ ಎಷ್ಟು ದಾಸ್ತಾನು ಇತ್ತು. ಜೀಪ್‌ಗಳಲ್ಲಿ ಎಷ್ಟು ಸಾಗಿಸಲಾಗಿದೆ. ಸ್ಫೋಟಗೊಂಡ ಸಮಯದಲ್ಲಿ ಎಷ್ಟಿತ್ತು ಎನ್ನುವ ಕುರಿತು ತನಿಖೆ ಮುಂದುವರಿದಿದೆ. ಸ್ಫೋಟದಲ್ಲಿ ಮೃತಪಟ್ಟ ಭದ್ರಾವತಿಯ ಇಬ್ಬರು ಯುವಕರ ಜತೆಗಿದ್ದ ಇನ್ನೂ ಮೂವರು ನಾಪತ್ತೆಯಾಗಿದ್ದು, ಅವರ ಪತ್ತೆ ಕಾರ್ಯವೂ ನಡೆದಿದೆ.

ಮತ್ತೆ ಮೂವರ ವಶ, ಹೊರ ರಾಜ್ಯಕ್ಕೆ ತಂಡ

ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕ, ಕ್ರಷರ್ ನಡೆಸುತ್ತಿದ್ದ ಇಬ್ಬರು ಸೇರದಿಂತೆ ಶುಕ್ರವಾರ ಮೂವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಜಿಲ್ಲೆಯ ಕ್ವಾರಿಗಳಿಗೆ ಸ್ಫೊಟಕ ಸಾಮಗ್ರಿ ಪೂರೈಸುತ್ತಿದ್ದ ಮೂವರ ವಿಚಾರಣೆ ನಡೆಸಿದ್ದಾರೆ. ಅವರು ನೀಡಿದ ಸುಳಿವಿನ ಮೇಲೆ ಜಿಲ್ಲೆಗೆ ಸಾಮಗ್ರಿ ಪೂರೈಸುತ್ತಿದ್ದ ಆರೋಪಿಗಳ ಬಂಧಿಸಲು ಹೊರ ರಾಜ್ಯಗಳಿಗೆ ಕಳುಹಿಸಲು ನುರಿತ ಪೊಲೀಸ್‌ ಅಧಿಕಾರಿಗಳ ತಂಡ ರಚಿಸಲಾಗಿದೆ. 

ವಿದ್ಯುತ್ ಸ್ಪರ್ಶದಿಂದ ಸ್ಪೋಟ?

ಸ್ಫೋಟದ ಸ್ಥಳದಲ್ಲಿ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು, ಚಾಲಕ ಲಾರಿಯನ್ನು ತಿರುಗಿಸಿಕೊಳ್ಳುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರಬಹುದು. ಈ ಸಮಯದಲ್ಲಿ ಅಲ್ಲಿದ್ದ ವಿದ್ಯುತ್ ಪರಿವರ್ತಕ ಸಿಡಿದಿದೆ. ನಂತರ ವಿದ್ಯುತ್ ತಂತಿ ಹರಿದು ಲಾರಿಯ ಮಲೆ ಬಿದ್ದು ಸ್ಫೋಟ ಸಂಭವಿಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಎರಡು ಬಾರಿ ಶಬ್ದ ಕೇಳಿಸಿತು, ಮೊದಲು ಸಣ್ಣ ಶಬ್ದ ನಂತರ ದೊಡ್ಡ ಸ್ಫೋಟ ಎನ್ನುವ ಸ್ಥಳೀಯರ ಹೇಳಿಕೆಗಳು ಈ ವಾದಕ್ಕೆ ಮತ್ತಷ್ಟು ಪುಷ್ಟಿನೀಡಿವೆ.

ಹೈದರಾಬಾದ್‌, ಮಂಗಳೂರು, ಬೆಂಗಳೂರು ವಿಜ್ಞಾನಿಗಳು ಸ್ಥಳದಲ್ಲಿ ಲಭ್ಯವಾದ ಸ್ಫೋಟಕಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹಟ್ಟಿ ಚಿನ್ನದ ಗಣಿ ತಜ್ಞರು, ಬಾಂಬ್ ನಿಷ್ಕ್ರಿಯ ದರಳದ ಪರಿಣತರು ಶನಿವಾರವೂ ಸ್ಥಳಾವಲೋಕನ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು