ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 7 ಜಿಲ್ಲೆಗಳಲ್ಲಿ ಹೈಬ್ರೀಡ್ ಪಾರ್ಕ್ ಆರಂಭಕ್ಕೆ ಸಿದ್ಧತೆ: ಸುನಿಲ್‌ಕುಮಾರ್‌

10 ಸಾವಿರ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್
Last Updated 24 ಜೂನ್ 2022, 12:21 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸೌರ (ಸೋಲಾರ್) ಹಾಗೂ ಪವನ ವಿದ್ಯುತ್ (ವಿಂಡ್) ಉತ್ಪಾದನೆ ಒಂದೇ ಕಡೆ ಮಾಡಲು ಹೈಬ್ರೀಡ್ ಪಾರ್ಕ್ ಆರಂಭಿಸಿ ರಾಜ್ಯದಲ್ಲಿ ವರ್ಷಾಂತ್ಯಕ್ಕೆ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ’ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಬ್ರೀಡ್ ಪಾರ್ಕ್‌ಗಳನ್ನು ಪ್ರಾಯೋಗಿಕವಾಗಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಆರಂಭಿಸಲಾಗುವುದು. ಸೊಲಾರ್ ಹಾಗೂ ವಿಂಡ್ ಹೆಚ್ಚು ಸಿಗುವ ಚಿತ್ರದುರ್ಗ, ತುಮಕೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಗದಗ, ಬಳ್ಳಾರಿ ಜಿಲ್ಲೆಗಳಲ್ಲಿ ಪಾರ್ಕ್‌ ಆರಂಭಕ್ಕೆ ಈಗಾಗಲೇ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕೇಂದ್ರ ಸರ್ಕಾರದ ಕುಸುಮ್ ಬಿ ಯೋಜನೆಯಡಿ ರೈತರ ವೈಯಕ್ತಿಕ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಲು ನಿರ್ಧರಿಸಲಾಗಿದೆ. ಆರಂಭದ ಹಂತದಲ್ಲಿ 10 ಸಾವಿರ ಪಂಪ್‌ಸೆಟ್‌ಗಳಿಗೆ ಈ ವ್ಯವಸ್ಥೆ ಕಲ್ಪಿಸಲು ಮುಂದಿನ ವಾರ ಟೆಂಡರ್ ಕರೆಯಲಾಗುತ್ತಿದೆ. ಆಸಕ್ತ ರೈತರು ಅರ್ಜಿಗಳನ್ನು ಸಲ್ಲಿಸಬಹುದು. ವೈಯಕ್ತಿಕ ಫಲಾನುಭವಿಗಳಿಗೆ ಸೋಲಾರ್ ಮೂಲಕ ಐಪಿ ಸೆಟ್‌ಗೆ ಪಂಪ್‌ಸೆಟ್‌ ಕೂರಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆರಂಭವಾಗಿಲ್ಲ. ಜಲಾಶಯಗಳ ಮಟ್ಟಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ ಎಂಬುದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ಆಗಸ್ಟ್ ತಿಂಗಳ ಹೊತ್ತಿಗೆ ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿ ವಿದ್ಯುತ್ ಉತ್ಪಾದನೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಮುಂಗಾರು ಹಾಗೂ ಮುಂಗಾರು ನಂತರ ಆಗಬಹುದಾದ ಎಲ್ಲ ಪರಿಣಾಮಗಳು ಹಾಗೂ ವಿದ್ಯುತ್ ಪೂರೈಕೆಯಲ್ಲಿ ಎಲ್ಲಿಯೂ ತೊಂದರೆ ಆಗದಂತೆ, ಯಾವುದೇ ಅವಘಡ ಸಂಭವಿಸದಂತೆ ಮುಂಜಾಗರೂಕತೆ ವಹಿಸಲು ಈಗಾಗಲೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿರುವೆ ಎಂದು ಸಚಿವರು ತಿಳಿಸಿದರು.

ಇದಕ್ಕೂ ಮುನ್ನ ಸಚಿವ ವಿ.ಸುನಿಲ್‌ಕುಮಾರ್ ಜೋಗದ ಶರಾವತಿ ವಿದ್ಯುದಾಗಾರಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT