ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಇತರೆ ದೇಶಗಳಿಗಿಂತ ಭಾರತ ಸುರಕ್ಷಿತ: ಸಚಿವ ಕೆ.ಎಸ್‌. ಈಶ್ವರಪ್ಪ

ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ
Last Updated 21 ಆಗಸ್ಟ್ 2021, 13:53 IST
ಅಕ್ಷರ ಗಾತ್ರ

ಶಿವಮೊಗ್ಗ: ತಾಲಿಬಾನ್‌ ಉಗ್ರರು ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಅಫ್ಗಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ಆದರೂ, ಸ್ವಯಂ ಘೋಷಿತ ಬುದ್ಧಿಜೀವಿಗಳು, ವಿಚಾರವಾದಿಗಳು ಇದರ ಬಗ್ಗೆ ಈಗ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ದೂರಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸದ ಅಂಗವಾಗಿ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಶನಿವಾರ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‌

ಮಕ್ಕಳು, ಮಹಿಳೆಯರು ಹಾಗೂ ಅಲ್ಲಿನ ದೇಶ ಭಕ್ತರ ಮೇಲೆ ನಿರಂತರವಾಗಿ ತಾಲಿಬಾನಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಈಗಾಗಲೇ ಹಲವರು ಪ್ರಾಣ ಬಿಟ್ಟಿದ್ದಾರೆ. ಅಫ್ಗಾನಿಸ್ತಾನದ ಜನರು ಅನುಭವಿಸುತ್ತಿರುವ ನೋವು ನೋಡಿದರೇ ವಿಶ್ವದ ಇತರೆ ದೇಶಗಳಿಗಿಂತ ಭಾರತ ಸುರಕ್ಷಿತ ರಾಷ್ಟ್ರ ಎನಿಸುತ್ತದೆ ಎಂದು ತಿಳಿಸಿದರು.

‘ವಿಶ್ವದಲ್ಲಿಯೇ ಭಾರತ ಶಾಂತಿಪ್ರಿಯ ರಾಷ್ಟ್ರವಾಗಿದೆ. ನಾವಾಗಿ ಯಾರ ತಂಟೆಗೂ ಹೋಗುವುದಿಲ್ಲ. ಆದರೆ, ನಮ್ಮ ಸುದ್ದಿಗೆ ಬಂದರೆ ಬಿಡುವುದಿಲ್ಲ ಎಂಬ ಸಂದೇಶವನ್ನು ಈಗಾಗಲೇ ನೀಡಲಾಗಿದೆ. ಮುಂದೆಯೂ ನಮ್ಮ ತಂಟೆಗೆ ಬರುವವರಿಗೆ ತಕ್ಕ ಉತ್ತರ ನೀಡಲಾಗುತ್ತದೆ’ ಎಂದರು.

‘ಭಾರತದಲ್ಲಿ ಧರ್ಮಗಳ ಮಧ್ಯೆ ಪ್ರೀತಿ, ಮಾನವೀಯತೆ ಇದೆ. ಇಲ್ಲಿ ಜೀವಿಸುವುದೇ ನಮ್ಮ ಪುಣ್ಯ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಚಟುವಟಿಕೆಯನ್ನು ಕಂಡರೆ ಇದು ಅರ್ಥವಾಗುತ್ತದೆ. ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಹೆಚ್ಚಾಗುತ್ತಿದೆ. ಇಡೀ ಜಗತ್ತು ತಲೆ ತಗ್ಗಿಸುವಂತಹ ಕೆಲಸ ನಡೆಯುತ್ತಿದೆ. ಕ್ರೂರತೆ ವಿಜೃಂಭಿಸುತ್ತಿದ್ದು, ಮಾನವೀಯತೆ ಮರೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶ ಸ್ವಾತಂತ್ರ್ಯ ಪಡೆದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿಯೂ ದೇಶದಲ್ಲಿ ಉಗ್ರಗಾಮಿಗಳು, ದೇಶ ದ್ರೋಹಿಗಳು ಅಲ್ಲಲ್ಲಿ ಅಡಗಿ ಕುಳಿತಿದ್ದಾರೆ. ಅವರನ್ನು ಸದೆ ಬಡಿಯುವ ಕೆಲಸವೂ ಆಗಬೇಕಿದೆ. ಯುವ ಸಮುದಾಯದಲ್ಲಿ ರಾಷ್ಟ್ರ ಭಕ್ತಿ ಬೆಳೆಸಲು ಹಾಗೂ ಸ್ವಾತಂತ್ರ್ಯ ಹೋರಾಟದ ಮಹತ್ವ ತಿಳಿಸುವ ಸಲುವಾಗಿ ರಾಷ್ಟ್ರ ಭಕ್ತಿಯೊಂದಿಗೆ ಸೈಕಲ್ ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಶಿವಮೂರ್ತಿ ವೃತ್ತದಿಂದ ಹೊರಟ ಸೈಕಲ್‌ ಜಾಥಾ ಉಷಾ ನರ್ಸಿಂಗ್ ಹೋಮ, ಲಕ್ಷ್ಮೀ ಟಾಕೀಸ್, ಜೈಲ್ ವೃತ್ತ ರಸ್ತೆ, ಪ್ರವಾಸಿ ಮಂದಿರ ವೃತ್ತ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ವೃತ್ತ, ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ನೆಹರೂ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.

ಶಿವಮೊಗ್ಗ ನಗರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಆರ್.ವಿ. ದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಗನ್ನಿ ಶಂಕರ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಜ್ಯೋತಿ ಪ್ರಕಾಶ್, ಎಸ್. ದತ್ತಾತ್ರಿ, ಬಳ್ಳೆಕೆರೆ ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT