ಮೀಸಲು ವಿಧಾನಸಭಾ ಕ್ಷೇತ್ರದಲ್ಲೇ ಪರಿಶಿಷ್ಟರಿಗೆ ಅನ್ಯಾಯ: ಖಂಡನೆ
ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದರೂ ಈ ಕ್ಷೇತ್ರ ವ್ಯಾಪ್ತಿಯ ಒಂದೇ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲೂ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ನಿಗದಿ ಮಾಡಿಲ್ಲ ಎಂದು ಪರಿಶಿಷ್ಟ ಜಾತಿ, ಪಂಗಡಗಳ ಒಕ್ಕೂಟದ ಮುಖಂಡರು ಆರೋಪಿಸಿದರು.
‘ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಯ ಮೀಸಲಾತಿ ಕ್ಷೇತ್ರ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 7 ಜಿಲ್ಲಾ ಪಂಚಾಯತಿ ಕ್ಷೇತ್ರಗಳಿವೆ. ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಒಂದು ಕ್ಷೇತ್ರದಲ್ಲೂ ಮೀಸಲಾತಿ ನಿಗದಿ ಮಾಡಿಲ್ಲ. 7 ಕ್ಷೇತ್ರಗಳಲ್ಲಿ ಕನಿಷ್ಠ 2 ಕ್ಷೇತ್ರವನ್ನಾದರೂ ನೀಡಬೇಕು’ ಎಂದು ಒಕ್ಕೂಟದ ಮುಖಂಡ ವೀರಭದ್ರಪ್ಪ ಪೂಜಾರಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಚುನಾವಣಾ ಆಯೋಗ ಮೀಸಲಾತಿ ಕರಡು ಸಿದ್ಧಪಡಿಸಿದ್ದರೂ ಅದರ ಹೊಣೆ ಸ್ಥಳೀಯ ಶಾಸಕ ಕೆ.ಬಿ. ಅಶೋಕ ನಾಯ್ಕ ಅವರೇ ಹೊರಬೇಕು. ಅವರ ಗಮನಕ್ಕೆ ಬಾರದೆ ಮೀಸಲಾತಿ ನಿಗದಿ ಮಾಡಲು ಹೇಗೆ ಸಾಧ್ಯ? ಹೀಗಿದ್ದರೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ತಕ್ಷಣವೇ ಆಕ್ಷೇಪಣೆ ಸಲ್ಲಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಬೇಕೇ ಬೇಕು. ಹಲವರು ಮೀಸಲಾತಿ ವಿರೋಧಿಸುತ್ತಿದ್ದಾರೆ. ಇದು ಸರಿಯಲ್ಲ. ಕೆಲವರು ಇನ್ನೂ ಎಷ್ಟು ವರ್ಷ ಮೀಸಲಾತಿ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಪರಿಶಿಷ್ಟರು ಮೂರು ಸಾವಿರ ವರ್ಷಗಳಿಂದ ಶೋಷಣೆ ಮತ್ತು ಅವಮಾನ ಅನುಭವಿಸುತ್ತಲೇ ಬಂದಿದ್ದಾರೆ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅವರಿಗೆ ಮೀಸಲಾತಿ ಬೇಕು. ಅದರಲ್ಲೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಈ ಮೀಸಲಾತಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿರಬೇಕು ಎಂದರು.
ಮತ್ತೊಬ್ಬ ಮುಖಂಡ ಭೋಜನಾಯ್ಕ್ ಮಾತನಾಡಿ, ‘ವೈಜ್ಞಾನಿಕ ಮೀಸಲಾತಿ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಿದ್ಧ. ಅಗತ್ಯ ದಾಖಲೆ ಸಂಗ್ರಹಿಸುತ್ತಿದ್ದೇವೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಬಿ.ಜಗದೀಶ್, ಆಯನೂರು ಶಿವಾನಾಯ್ಕ, ಶಾಂತವೀರ ನಾಯ್ಕ, ನಾಗೇಶ ನಾಯ್ಕ, ಪ್ರಕಾಶ್ ಲಿಗಾಡಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.