ಶುಕ್ರವಾರ, ಜುಲೈ 30, 2021
20 °C
ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಸಂಸದ ಬಿ.ವೈ. ರಾಘವೇಂದ್ರ

ನೀರಾವರಿ ಯೋಜನೆ: ಮುಳುಗಡೆ ಆತಂಕ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಹೊಸಕೆರೆ (ಕಸಬಾ) ನೀರಾವರಿ ಯೋಜನೆ ಅನುಷ್ಠಾನದಿಂದ ರೈತರ ಕೃಷಿ ಭೂಮಿ ಮುಳುಗಡೆಯಾಗುವುದಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದರು.

ತಾಲ್ಲೂಕಿನ ಮುಡುಬ ಸಿದ್ದಾಪುರ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಹೊಸಕೆರೆ ನೀರಾವರಿ ಯೋಜನೆ ಪ್ರದೇಶ ವೀಕ್ಷಣೆ ನಂತರ ಗ್ರಾಮಸ್ಥರು ಹಾಗೂ ರೈತರೊಂದಿಗೆ ನಡೆಸಿದ ಚರ್ಚೆ ನಡೆಸಿ ಮಾತನಾಡಿದರು.

ಹೊಸಕೇರಿ ನೀರಾವರಿ ಯೋಜನೆ ಅನುಷ್ಠಾನದಿಂದ ಮುಡುಬಸಿದ್ದಾಪುರ, ಮಲ್ಲಾಪುರ, ಹುಣಸೆಕಟ್ಟೆ ಸೇರಿ 17 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಈ ಯೋಜನೆ ಅನುಷ್ಠಾನದಿಂದ ಕೃಷಿ ಭೂಮಿ ಹಾಗೂ ಮನೆಗಳು ಮುಳುಗಡೆಯಾಗುತ್ತವೆ ಎಂಬ ಆತಂಕ ಬೇಡ. ಹೊಸಕೆರೆ ಸಮೀಪ ಯಾವುದೇ ಆಣೆಕಟ್ಟೆ ನಿರ್ಮಿಸುವುದಿಲ್ಲ. ಕೆರೆ ಸಮೀಪ ಚೆಕ್‌ ಡ್ಯಾಂ‌ ಮಾತ್ರ ನಿರ್ಮಿಸಿ ನೀರನ್ನು ಎತ್ತಲಾಗುತ್ತದೆ ಎಂದು ವಿವರಿಸಿದರು.

‘ಈ ಭಾಗದಲ್ಲಿ ಅನುಷ್ಠಾನಗೊಳಿಸಬೇಕಾಗಿದ್ದ ಕಲ್ಲೊಡ್ಡು ನೀರಾವರಿ ಯೋಜನೆ ಕೈಬಿಡಲಾಗಿದೆ. ಆದ್ದರಿಂದ ಹೊಸಕೆರೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಈ ಯೋಜನೆಯಿಂದ ರೈತರ ಭೂಮಿ ಹಾಗೂ ಗ್ರಾಮಗಳು ಮುಳುಗಡೆಯಾಗುತ್ತದೆ ಎಂಬ ಊಹಾಪೋಹ ಸುದ್ದಿಗೆ ಗ್ರಾಮಸ್ಥರು ಕಿವಿಗೊಡಬಾರದು. ತಾಲ್ಲೂಕಿನ ಈ ಭಾಗದ ರೈತರ ಬಗ್ಗೆ ಹೊಂದಿರುವ ಕಾಳಜಿಯಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೀರಾವರಿ ಯೋಜನೆಗೆ ಅನುದಾನ ನೀಡಿದ್ದಾರೆ’ ಎಂದು ಹೇಳಿದರು.

ಕೆಲವು ರೈತರು ಹೊಸಕೆರೆ ನೀರಾವರಿ ಯೋಜನೆ ಅನುಷ್ಠಾನದ ಬಗ್ಗೆ ವಿರೋಧ ವ್ಯಕ್ತಪಡಿಸಿದರು. 

ರೈತರಿಗೆ ಯೋಜನೆ ಬಗ್ಗೆ ವಿವರಿಸಿದ ಸಂಸದರು, ‘ಉತ್ತಮ ನೀರಾವರಿ ಯೋಜನೆ ಅನುಷ್ಠಾನಕ್ಕೆ ವಿರೋಧ ಮಾಡಬೇಡಿ’ ಎಂದು ಮನವಿ ಮಾಡಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್‌. ಗುರುಮೂರ್ತಿ, ತಹಶೀಲ್ದಾರ್‌ ಎಂ.ಪಿ. ಕವಿರಾಜ್‌, ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಪ್ರಶಾಂತ್‌, ಮುಖಂಡರಾದ ಟಿ.ಎಸ್‌. ಮೋಹನ್‌, ಜೆ. ಸುಕೇಂದ್ರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.