ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಗೆ ಸೀಟು ನಷ್ಟ ಆಗಿರುವುದು ನಾಚಿಕೆಗೇಡು: ಈಶ್ವರಪ್ಪ

ರಾಜ್ಯದಲ್ಲಿ ಆದ ಹಿನ್ನಡೆಗೆ ಹಿಂದುಳಿದ ವರ್ಗಗಳ ಕಡೆಗಣನೆಯೇ ಕಾರಣ; ಈಶ್ವರಪ್ಪ
Published 6 ಜೂನ್ 2024, 16:12 IST
Last Updated 6 ಜೂನ್ 2024, 16:12 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದಲ್ಲಿ 25 ಮಂದಿ ಇದ್ದ ಬಿಜೆಪಿ ಲೋಕಸಭಾ ಸದಸ್ಯರ ಸಂಖ್ಯೆ 17ಕ್ಕೆ ಇಳಿದರೂ ಕಾಂಗ್ರೆಸ್ ಸರ್ಕಾರ ಇದ್ದರೂ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದು ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳುತ್ತಿರುವುದು ನಾಚಿಕೆಗೇಡು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶಿವಮೊಗ್ಗ ಸೇರಿದಂತೆ ಬಹುತೇಕ ಕಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಿಂದ ಗೆಲುವು ಸಾಧಿಸಿದೆ. ದಕ್ಷಿಣ ಕರ್ನಾಟಕದಲ್ಲಿ ಗೆಲುವು ಸಾಧಿಸಲು  ಜೆಡಿಎಸ್‌ನೊಂದಿಗಿನ ಮೈತ್ರಿ ಅನುಕೂಲ ಮಾಡಿಕೊಟ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ಯಡಿಯೂರಪ್ಪ ಅವರೇ ನಿಮಗೆ ನಿಮ್ಮ ಮಕ್ಕಳದ್ದೇ ಚಿಂತೆ ಅಲ್ಲವೇ? ನೀವು ಬೆಳೆದರೇ ಸಾಕು ಪಕ್ಷ ಹಾಳಾದರೂ ಪರವಾಗಿಲ್ಲ ಎಂದು ವ್ಯಂಗ್ಯವಾಡಿದರು.

ನಾನು ಸೋಲುತ್ತೇನೆ ಎಂಬುದು ಮೊದಲೇ ಗೊತ್ತಿತ್ತು. ಇದಲ್ಲದೇ ಮತದಾರರು ಕೂಡ ಈಶ್ವರಪ್ಪ ಗೆಲ್ಲುವುದಿಲ್ಲ ಅಂತಾ ತಿಳಿದು ನರೇಂದ್ರ ಮೋದಿ ಮುಖ ನೋಡಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದರು.

ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಪ್ರಭಾವದಿಂದ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವು. ಈ ಬಾರಿ ದಯನೀಯವಾಗಿ ಹಿನ್ನಡೆ ಆಗಿದೆ. ಇದಕ್ಕೆ ಹಿಂದುಳಿದವರು, ದಲಿತರು ಹಾಗೂ ಸಣ್ಣ ಸಣ್ಣ ಸಮುದಾಯಗಳನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿರುವುದೇ ಕಾರಣ ಎಂದು ಹೇಳಿದರು. 

ಹಿಂದುಳಿದ ವರ್ಗಗಳಿಗೆಅವಕಾಶ ನೀಡಿದ್ದರೇ  ಇನ್ನೂ ಹೆಚ್ಚಿಗೆ ಸ್ಥಾನ ಬರುತ್ತಿದ್ದವು. ಕೇಂದ್ರದಲ್ಲಿ ಸರಳ ಬಹುಮತ ನರೇಂದ್ರ ಮೋದಿ ಅವರಿಗೆ ಲಭಿಸುತ್ತಿತ್ತು. ಆದರೆ ಯಡಿಯೂರಪ್ಪ ಅವರು ಹಿಂದುಳಿದವರಿಗೆ ಟಿಕೆಟ್‌ ನೀಡದರೇ ಅನ್ಯಾಯ ಮಾಡಿದ ಪರಿಣಾಮವಾಗಿ ಕಡಿಮೆ ಸೀಟು ಬಂದಿವೆ ಎಂದರು. 

ಯಡಿಯೂರಪ್ಪ ಅವರೇ ಬಿಜೆಪಿಗೆ ಬರೀ ಲಿಂಗಾಯತ ಸಮುದಾಯ ಒಂದೇ ಇದ್ದರೇ ಸಾಕೇ ಎಂದ ಈಶ್ವರಪ್ಪ, ರಾಜ್ಯದ ಜನಸಂಖ್ಯೆಯಲ್ಲಿ ಕುರುಬರು 3ನೇ ಸ್ಥಾನದಲ್ಲಿ ಇದ್ದಾರೆ. ಆದರೂ ಟಿಕೆಟ್‌ ಕೊಡಲಿಲ್ಲ. ನನ್ನ ಪುತ್ರನಿಗೆ ಹಾವೇರಿಯಲ್ಲಿ ಟಿಕೆಟ್‌ ಕೊಡಿಸಿ ಗೆಲ್ಲಿಸುವುದಾಗಿ ನೀಡಿದ್ದ ಭರವಸೆ ಯಡಿಯೂರಪ್ಪ ಈಡೇರಿಸಲಿಲ್ಲ ಎಂದು ಟೀಕಿಸಿದರು.

ಲಿಂಗಾಯತರು ಮತ್ತು ಒಕ್ಕಲಿಗರ ನಡುವೆ ಸಣ್ಣ ಸಣ್ಣ ಸಮುದಾಯವನ್ನು ಬೆಳೆಸುವ ಕೆಲಸ ಬಿಜೆಪಿಯಲ್ಲಿ ಆಗಬೇಕಿದೆ. ಜನಸಂಖ್ಯೆ ಕಡಿಮೆ ಇದೆ ಅಂತಾ ಅವರನ್ನು ತುಳಿಯುವ ಕೆಲಸ ಆಗುತ್ತಿದೆ. ಇದನ್ನು ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಬೇಕು. ಪಕ್ಷದ ಶುದ್ಧೀಕರಣ ಕಾರ್ಯಕ್ಕೆ ಮುಂದಾಗಬೇಕು ಎಂದರು. 

ಪಕ್ಷ ಒಂದು ಕುಟುಂಬದ ಕೈಯಲ್ಲಿ ಇರಬಾರದು ಅದನ್ನು ಮುಕ್ತ ಮಾಡಬೇಕು ಎಂದು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನು. ಹಿಂದುತ್ವವಾದಿಗಳ ಶಕ್ತಿ ಕುಗ್ಗಿಸುವ ಕೆಲಸ ಬಿಜೆಪಿಯಲ್ಲಿ ನಡೆಯುತ್ತಿದೆ. ಸಾಮೂಹಿಕವಾಗಿ ಪಕ್ಷ ಸಂಘಟನೆ ಮಾಡಬೇಕು. ಆದರೆ ಪಕ್ಷದಲ್ಲಿ ಯಾವುದೇ ತೀರ್ಮಾನವಾದರೂ ಅಪ್ಪ ಮಕ್ಕಳು ಮಾತ್ರ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಸಿ.ಟಿ. ರವಿ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿರುವುದು ಉತ್ತಮ ನಿರ್ಧಾರ. ಅವರನ್ನು ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರೇ ನನಗೆ ಖುಷಿಯಾಗುತ್ತದೆ ಎಂದರು. 

ಸಚಿವ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ವಜಾಗೊಳಿಸಬೇಕು. ನನ್ನ ಮೇಲೆ ಆರೋಪ ಬಂದ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟದ್ದೆನು ಎಂದು ಹೇಳಿದರು.

ಮಹಾಲಿಂಗ ಶಾಸ್ತ್ರಿ, ವಾಗೀಶ್, ವಿಶ್ವಾಸ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT