ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಂಡೆಯಲ್ಲಿ ಒಡಮೂಡಿದೆ ದೇವಿಯ ಆಲಯ

ಭಕ್ತರ ಅಭಿಲಾಷೆ ಈಡೇರಿಸುವ ಜೇನುಕಲ್ಲಮ್ಮ; ಇಂದಿನಿಂದ ಜಾತ್ರೆ ಆರಂಭ
Last Updated 13 ಸೆಪ್ಟೆಂಬರ್ 2022, 6:36 IST
ಅಕ್ಷರ ಗಾತ್ರ

ಹೊಸನಗರ: ಹರಕೆ ಹೊತ್ತು ಘಟ್ಟಕ್ಕೆ ಬರುವ ಭಕ್ತಸಮೂಹದ ಅಭಿಲಾಷೆಯನ್ನು ಈಡೇರಿಸುವ ಜೇನುಕಲ್ಲಮ್ಮ ದೇವಿಯ ನೆಲೆವೀಡಾದ ಅಮ್ಮನಘಟ್ಟದ ಜಾತ್ರೆಯು ನಾಡಿನ ಪ್ರಮುಖ ಜಾತ್ರೆಗಳಲ್ಲಿ ಪ್ರಮುಖವಾದುದಾಗಿದೆ.

ವಿಶಿಷ್ಟ ಪ್ರಾಕೃತಿಕ ಸೌಂದರ್ಯ ಹೊಂದಿದ ಧಾರ್ಮಿಕ ಶ್ರದ್ಧಾಕೇಂದ್ರವಾದ ಜೇನಮ್ಮನಘಟ್ಟ ಹಲವು ಜನಾಂಗಗಳ ಕುಲದೇವರು ನೆಲೆನಿಂತ ತಾಣ.

ರಮಣೀಯ ವನಸಿರಿಯ ಮಧ್ಯೆ ಬೃಹದಾಕಾರದ ಕಲ್ಲು ಬಂಡೆಗಳು, ಮನಸೂರೆಗೊಳ್ಳುವ ಹಸಿರು ಸಂಪತ್ತಿನ ಸಸ್ಯಗಳು, ದಟ್ಟ ಕಾನನದಲ್ಲಿ ತೂರಿ ಬರುವ ಜೇನಿನ ಝೇಂಕಾರ, ನಿಸರ್ಗ ನಿರ್ಮಿತ ಹೆಬ್ಬಂಡೆಯನ್ನೇ ಆಲಯ ಮಾಡಿಕೊಂಡ ದೇವಿ... ಇದು ಅಮ್ಮನಘಟ್ಟದ ಚಿತ್ರಣ.

ಜೇನುಕಲ್ಲಮ್ಮ ದೇವಿ ತನ್ನಲ್ಲಿಗೆ ಬರುವ ಭಕ್ತರನ್ನು ಎಂದಿಗೂ ಕೈ ಬಿಡಲಾರಳು. ಸಂಕಷ್ಟದಲ್ಲಿ ಹೊತ್ತ ಎಲ್ಲ ಹರಕೆ ಇಲ್ಲಿ ಸಿದ್ಧಿಸುತ್ತದೆ ಎಂಬುದು ಪ್ರತೀತಿ. ಹೀಗಾಗಿ ನಾಡಿನಾದ್ಯಂತ ದೇವಿಯ ಭಕ್ತರಿದ್ದಾರೆ.

ಸ್ಥಳ ಪುರಾಣ: ಅಮ್ಮನ ಘಟ್ಟದ ತುಂಬೆಲ್ಲ ಬೃಹದಾಕಾರದ ಕಲ್ಲುಬಂಡೆಗಳೇ ಕಾಣಸಿಗುತ್ತವೆ. ಬಂಡೆಗಳು ಜೇನುಗಳ ಆವಾಸ ಸ್ಥಾನವಾಗಿವೆ. ಜೇನುಗೂಡುಗಳ ಮತ್ತು ಕಲ್ಲು ಬಂಡೆಗಳ ಪೊಟರೆಯಲ್ಲಿ ನೆಲೆ ನಿಂತ ಕಾರಣ ಶ್ರೀದೇವಿಗೆ ಜೇನುಕಲ್ಲಮ್ಮ ಎಂದು ಹೆಸರು ಬಂದಿದೆ.

ಈ ಹಿಂದೆ ಜಮದಗ್ನಿ ಮಹರ್ಷಿಯು ತನ್ನ ಮಡದಿ ರೇಣುಕಾದೇವಿಯಲ್ಲಿ ವಿರಸಗೊಂಡು ಮಗ ಪರಶುರಾಮನನ್ನು ಕರೆಯಿಸಿ ತಾಯಿಯ ಶಿರಚ್ಛೇಧನಕ್ಕೆ ಆಜ್ಞಾಪಿಸುತ್ತಾರೆ. ಅಂತೆಯೇ ಮಗ ಪರಶುರಾಮ ಶಿರವನ್ನು ಕತ್ತರಿಸಿದಾಗ ದೇವಿಯ ಅಗೋಚರ ಶಕ್ತಿಯೊಂದು ಈ ಘಟ್ಟದ ಕಲ್ಲು ಬಂಡೆಗಳ ಮಧ್ಯೆ ನೆಲೆಸಿತು. ಅಲ್ಲಿಂದ ಭಕ್ತರು ಈಕೆಯನ್ನು ಜೇನುಕಲ್ಲಮ್ಮ ಎಂದೇ ಪೂಜಿಸಿದರು ಎನ್ನುತ್ತದೆ ಸ್ಥಳ ಪುರಾಣ.

ಹಳೆ ಅಮ್ಮನಘಟ್ಟ: ಈಗಿರುವ ಅಮ್ಮನಘಟ್ಟದ ಎದುರು ಮತ್ತೊಂದು ಅಮ್ಮನಘಟ್ಟ ಇದ್ದು, ಅಲ್ಲಿ ಮೂಲ ಮೂರ್ತಿ ಇತ್ತು. ಆ ಘಟ್ಟವು ದುರ್ಗಮವಾಗಿದ್ದು, ಭಕ್ತರು ಹೋಗಿಬರಲು ಕಷ್ಟಸಾಧ್ಯವಾಗಿತ್ತು. ನಂತರದ ದಿನಗಳಲ್ಲಿ ಅಮ್ಮ ಎದುರಿದ್ದ ಘಟ್ಟಕ್ಕೆ ಬಂದು ನೆಲೆಸಿದಳು ಎಂಬ ಪ್ರತೀತಿಯೂ ಇದೆ.

ಬುತ್ತಿ ಸೇವೆ: ಅಮ್ಮನಿಗೆ ಭಕ್ತಿ ಸೇವೆಗೆ ನಡೆದುಕೊಳ್ಳುವವರು ಬುತ್ತಿ ಸೇವೆ ಒಪ್ಪಿಸದೇ ಜಾತ್ರೆಗೆ ಬರುವಂತಿಲ್ಲ. ಜಾತ್ರೆಯನಿರ್ದಿಷ್ಟ ದಿನದಂದು ಬುತ್ತಿ ಕಟ್ಟಿಕೊಂಡು ಬರುವ ಕುಟುಂಬಸ್ಥರು ಪೂಜೆ, ಸೇವೆ ಸಲ್ಲಿಸಿ ಅಲ್ಲಿಯೇ ಬುತ್ತಿ ಉಂಡು ಮರಳುವುದು ಪದ್ಧತಿ. ಈ ಸೇವೆ ಸಲ್ಲಿಸದೇ ಜಾತ್ರೆಗೆ ಹೋಗುವಂತಿಲ್ಲ ಎಂಬ ಕರಾರು ಎಷ್ಟೋ ಕುಟುಂಬಗಳಲ್ಲಿದೆ. ನವ ದಂಪತಿ, ಚೊಚ್ಚಲ ಮಕ್ಕಳ ತಾಯಂದಿರು ಜಾತ್ರೆಗೆ ಬರಲೇಬೇಕೆಂಬುದು ಇಲ್ಲಿನ ನಂಬಿಕೆ.

ಹರಕೆ ನಾಗ: ತೋಟಗದ್ದೆ, ಕೊಟ್ಟಿಗೆ, ದನಕರುಗಳ ಬಗ್ಗೆ ಹರಕೆ ಹೊತ್ತ ಗ್ರಾಮೀಣರು ಹರಕೆ ನಾಗ ಒಪ್ಪಿಸುತ್ತಾರೆ. ಆಯಾಯ ಹರಕೆಗೆಂದೇ ಬಗೆಬಗೆಯ ತಾಮ್ರದ ತಗಡಿನ ನಾಗಗಳು ಇಲ್ಲಿ ಸಿಗುತ್ತವೆ.

ಸಂರಕ್ಷಿತ ತಾಣ: ಕಲ್ಲುಬಂಡೆಗಳ ರಾಶಿಯನ್ನು ಹುದುಗಿಸಿಕೊಂಡ ಅಮ್ಮನಘಟ್ಟ ಅಮೂಲ್ಯ ಗಿಡ ಮೂಲಿಕೆಗಳ ಕಾಡಾಗಿದೆ. ಸುತ್ತಲಿನ ಹತ್ತಾರು ಹಳ್ಳಿಗಳಿಗೆ ನೀರುಣಿಸುವ ನೀರಸೆಲೆ ಆಗಿರುವ ಘಟ್ಟ ಪ್ರದೇಶವನ್ನು ಸರ್ಕಾರ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT