ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರನಿಗೆ ಸಿಗದ ಟಿಕೆಟ್; ಕೆ.ಎಸ್.ಈಶ್ವರಪ್ಪ ಬೇಸರ

Published 13 ಮಾರ್ಚ್ 2024, 15:35 IST
Last Updated 13 ಮಾರ್ಚ್ 2024, 15:35 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪುತ್ರ ಕಾಂತೇಶನಿಗೆ ಬಿಜೆ‍ಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಶುಕ್ರವಾರ ಬೆಂಬಲಿಗರು ಸಭೆ ಕರೆದಿದ್ದಾರೆ. ಅಲ್ಲಿ ಮುಂದಿನ ನಡೆ ತೀರ್ಮಾನಿಸುವೆ’ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

‘ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಆ ಬಗ್ಗೆ ಹಿತೈಷಿಗಳ ಸಲಹೆ ಪಡೆದು ನಿರ್ಧಾರ ಕೈಗೊಳ್ಳುವೆ’ ಎಂದು ಬುಧವಾರ ಇಲ್ಲಿ ತಿಳಿಸಿದರು.

‘ಹಾವೇರಿಯಲ್ಲಿ ಪುತ್ರ ಕಾಂತೇಶನಿಗೆ ಟಿಕೆಟ್ ಕೊಡಿಸುವೆ. ಓಡಾಡಿ ಗೆಲ್ಲಿಸಿಕೊಂಡು ಬರುವೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು. ಹೀಗಾಗಿ ಪುತ್ರನನ್ನು ಅಲ್ಲಿಗೆ ಕಳುಹಿಸಿದ್ದೆ’ ಎಂದರು.

‘ಪುತ್ರನಿಗೆ ಟಿಕೆಟ್ ಪಡೆಯುವುದರ ಹಿಂದೆ ಕೇವಲ ನನ್ನ ಕುಟುಂಬದ ರಾಜಕೀಯ ಭವಿಷ್ಯ ಅಡಗಿರಲಿಲ್ಲ. ಬದಲಿಗೆ ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಭವಿಷ್ಯ ಅಡಗಿತ್ತು. ಪಕ್ಷ ಉಳಿಯಬೇಕು ಎಂಬ ಉದ್ದೇಶ ನನ್ನದು. ನಾನು ಸಂಸದನಾಗುವ ಆಸೆ ಹೊಂದಿಲ್ಲ. ಪಕ್ಷದಲ್ಲಿನ ದೋಷ ಸರಿಯಾಗಬೇಕಾದರೆ ಚರ್ಚೆ ಅಗತ್ಯವಿದೆ. ಪಕ್ಷ ಉಳಿಸಲು ಈ ನಡೆ ಅಗತ್ಯವಿದೆ’ ಎಂದು ಹೇಳಿದರು.

‘ಮುಂದಿನ ತೀರ್ಮಾನದ ಬಗ್ಗೆ ಪಕ್ಷದ ಹಿರಿಯರೊಂದಿಗೂ ಚರ್ಚಿಸುವೆ. ನಾಲ್ಕು ಗೋಡೆಗಳ ಮಧ್ಯೆಯೇ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಂಸ್ಕಾರವನ್ನು ಪಕ್ಷ ನಮಗೆ ಕಲಿಸಿದೆ. ಅಂತೆಯೇ ಸಭೆ ಕರೆಯಲಾಗಿದೆ’ ಎಂದರು.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನನ್ನ ಆತ್ಮೀಯ ಸ್ನೇಹಿತರು. ಮೂರು ದಿನಗಳ ಹಿಂದೆ ಅವರು ಶಿವಮೊಗ್ಗಕ್ಕೆ  ಬಂದಾಗ ಟಿಕೆಟ್ ವಿಚಾರವಾಗಿ ಚರ್ಚೆ ಮಾಡಿದ್ದೆನು. ಬಿಜೆಪಿಯಲ್ಲಿ ನಾನು ಹಿರಿಯ ಅಲ್ಲ ಎಂದರೆ ತಪ್ಪಾಗುತ್ತದೆ. ಪಕ್ಷ ನನಗೆ ಶಾಸಕ, ಉಪಮುಖ್ಯಮಂತ್ರಿ ಸ್ಥಾನದವರೆಗೂ ಅವಕಾಶ ನೀಡಿದೆ. ನಾನು ಬಲಿಪಶು ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT