ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ, ಬಿಟಿಗಳಲ್ಲಿ ಶೇ 90ರಷ್ಟು ಕನ್ನಡಿಗರಿಗೆ ಉದ್ಯೋಗ ಸಿಗಲಿ: ಶಾಸಕ ಗೋಪಾಲಕೃಷ್ಣ

ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯ
Published 1 ನವೆಂಬರ್ 2023, 16:01 IST
Last Updated 1 ನವೆಂಬರ್ 2023, 16:01 IST
ಅಕ್ಷರ ಗಾತ್ರ

ಸಾಗರ: ‘ಈ ನೆಲದ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮ ನಡೆಸುವ ಐಟಿ, ಬಿಟಿ ಸೇರಿದಂತೆ ವಿವಿಧ ಖಾಸಗಿ ಕಂಪೆನಿಗಳು ಶೇ 90ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕು’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.

ರಾಜ್ಯೋತ್ಸವದ ಅಂಗವಾಗಿ ಬುಧವಾರ ತಾಲ್ಲೂಕು ಆಡಳಿತ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ ಕಂಪೆನಿಗಳು ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಹೊರ ರಾಜ್ಯದವರಿಗೆ ಹೆಚ್ಚಿನ ಪ್ರಮಾಣದ ಉದ್ಯೋಗ ನೀಡುವ ಕ್ರಮ ಸರಿಯಲ್ಲ. ಈ ವಿಷಯದಲ್ಲಿ ಕಾನೂನಿಗೆ ಅಗತ್ಯ ತಿದ್ದುಪಡಿ ತರಬೇಕಿದೆ’ ಎಂದು ಪ್ರತಿಪಾದಿಸಿದರು.

‘ಕನ್ನಡ ನೆಲ, ಜಲ, ಸಂಸ್ಕೃತಿಗೆ ಧಕ್ಕೆಯಾದಾಗ ಪ್ರಾದೇಶಿಕ ಭಿನ್ನತೆ, ಜಾತಿ, ಧರ್ಮಗಳ ಹಿನ್ನೆಲೆಯನ್ನು ಕಡೆಗಣಿಸಿ ನಾವೆಲ್ಲರೂ ಕನ್ನಡಿಗರು ಎಂಬ ಭಾವನೆಯಿಂದ ಒಟ್ಟಾಗಿ ಧ್ವನಿ ಎತ್ತುವ ಅಗತ್ಯವಿದೆ. ಆಗ ಮಾತ್ರ ಬಲಿಷ್ಠ ಕರ್ನಾಟಕ ನಿರ್ಮಾಣ ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಉಪ ವಿಭಾಗಾಧಿಕಾರಿ ಪಲ್ಲವಿ ಸಾತನೇಹಳ್ಳಿ, ‘ನಿತ್ಯದ ಬಳಕೆಯಲ್ಲಿ ವ್ಯಾಪಕವಾಗಿರುವ ಭಾಷೆ ಯಾವತ್ತೂ ಜನಮಾನಸದಲ್ಲಿ ನೆಲೆಸಿರುತ್ತದೆ ಎಂಬುದಕ್ಕೆ ಕನ್ನಡ ಭಾಷೆಯೇ ಸಾಕ್ಷಿಯಾಗಿದೆ’ ಎಂದರು.

ಇತಿಹಾಸ ಪ್ರಸಿದ್ಧ ಕೆಳದಿ ರಾಮೇಶ್ವರ ದೇವಸ್ಥಾನದಿಂದ ತರಲಾದ ವಿದ್ಯಾರಣ್ಯ ಜ್ಯೋತಿಯನ್ನು ನಗರದ ರಾಣಿಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಳ್ಳಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಸ್ತಬ್ಧ ಚಿತ್ರಗಳೊಂದಿಗೆ ವಿದ್ಯಾರಣ್ಯ ಜ್ಯೋತಿಯ ಮೆರವಣಿಗೆ ನಡೆಯಿತು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾಗೇಶ್ ಬ್ಯಾಲಾಳ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ.ಸ್ವಾಮಿ, ವಿವಿಧ ಸಂಘಟನೆಗಳ ಪ್ರಮುಖರು, ನಗರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT