ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ನನ್ನ ಸೋಲಿಸಲು ನಿರ್ಧರಿಸಿದಂತಿದೆ: ಮಾಧ್ಯಮದವರಿಗೆ ಈಶ್ವರಪ್ಪ ಟಾಂಗ್

Last Updated 9 ಅಕ್ಟೋಬರ್ 2022, 7:16 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಆಟೊ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿ ಎಂದು ಒತ್ತಾಯಿಸುವ ಮೂಲಕ ನೀವು (ಮಾಧ್ಯಮದವರು) ಮುಂಬರುವ ಚುನಾವಣೆಯಲ್ಲಿ ನನ್ನ ಸೋಲಿಸಲು ಯೋಜಿಸಿದಂತಿದೆ. ಚುನಾವಣೆ ಮುಗಿಯಲಿ. ನಂತರ ಬೇಕಿದ್ದರೆ ನಿಮ್ಮನ್ನು ಕೂರಿಸಿ ಆ ಬಗ್ಗೆ ಸಭೆ ಮಾಡುವೆ...’

ಶನಿವಾರ ನಡೆದ ಮಧ್ಯಮ ಸಂವಾದದಲ್ಲಿ ಶಿವಮೊಗ್ಗದಲ್ಲಿ ಆಟೊಗಳಿಗೆ ಮೀಟರ್‌ ಅಳವಡಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಾಸಕ ಕೆ.ಎಸ್‌. ಈಶ್ವರಪ್ಪ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಹಾಗಿದ್ದರೆ ಈ ಬಾರಿ ಚುನಾವಣೆಯಲ್ಲಿ ನಿಮ್ಮ ಮರು ಸ್ಪರ್ಧೆ ಖಚಿತವಾಯಿತು’ ಎಂಬ ಪ್ರಶ್ನೆಗೆ. ‘ಇಲ್ಲ, ಇಲ್ಲ. ಬಿಜೆಪಿಯ ಶಿಸ್ತಿನ ಸಿಪಾಯಿ ನಾನು. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದು ನುಣುಚಿಕೊಂಡರು.

‘ಆಟೊ ಮೀಟರ್ ಅಳವಡಿಕೆ ಆಗೋದು ಇಲ್ಲ. ಅರ್‌ಟಿಒ, ಜಿಲ್ಲಾಡಳಿತ, ಆಟೊ ಚಾಲಕರ ಸಂಘ, ಮಾಧ್ಯಮದವರು, ಸಾರ್ವಜನಿಕರನ್ನು ಒಟ್ಟಿಗೆ ಕೂರಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದು ಆಗದ ಕೆಲಸ. ಎಲ್ಲರನ್ನು ಒಂದು ಕಡೆ ಸೇರಿಸುವುದೇ ಕಷ್ಟ. ಸಾಮಾನ್ಯ ಜನರು, ಆಟೊ ಚಾಲಕರು ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳುವವರೆಗೂ ಮೀಟರ್ ಅಳವಡಿಕೆ ಸಮಸ್ಯೆ ಇದ್ದದ್ದೇ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರಿಪೇಯ್ಡ್ ವ್ಯವಸ್ಥೆ ಮಾಡಿದರೂ ಜನರು ಅಂತಹ ಆಟೊಗಳಲ್ಲಿ ಹೋಗಲ್ಲ. ಬೇರೆ ಆಟೊ ಹತ್ತುತ್ತಾರೆ. ಜನ ಸಹಕಾರ ಕೊಡದೇ ಏನೂ ಮಾಡಲು ಆಗಲ್ಲ. ಇದೆಲ್ಲವೂ ಕ್ರಮೇಣ ಆಗಬೇಕು ಹೊರತು ಕಾನೂನು ಮಾಡಲು ಆಗಲ್ಲ’ ಎಂದು ಹೇಳಿದರು.

‘ನೀವು ಹಿಂದೂ ಯುವಕರನ್ನು ಗೂಂಡಾಗಳು ಎಂದು ಏಕೆ ಕರೆಯುತ್ತಿಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಧರ್ಮದ ಕಾರಣಕ್ಕಾಗಿ ಹಿಂದೂ ಯುವಕರು ಕೊಲೆ ಮಾಡಿದ ಉದಾಹರಣೆ ಇಲ್ಲ’ ಎಂದರು.

‘ಎಸ್‌ಟಿ, 2ಎ ಮೀಸಲಾತಿ ಕೇಳಿರುವ ಸಮುದಾಯಗಳ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ವರದಿ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಗೌರವಾಧ್ಯಕ್ಷ ಚಂದ್ರಕಾಂತ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಗೋ.ವ. ಮೋಹನಕೃಷ್ಣ ಇದ್ದರು.

‘ಕೆಲಸ ಸ್ಮಾರ್ಟ್‌ ಆಗಿಯೇ ಇದೆ’
ಸ್ಮಾರ್ಟ್‌ ಸಿಟಿಗೆ ಸಂಬಂಧಿಸಿ ದೂರುಗಳು ಕೇಳಿ ಬರುತ್ತಿರುವುದು ನಿಜ. ಆದರೆ, ಇಲ್ಲಿಯ ಕೆಲಸ ನೋಡಿ, ಕಸ ನೋಡಬೇಡಿ ಎಂದ ಈಶ್ವರಪ್ಪ, ‘ಸ್ಮಾರ್ಟ್ ಸಿಟಿ ಕಾಮಗಾರಿ ಮುಗಿದ ನಂತರವೇ ಅದರ ನಿಜವಾದ ಮಹತ್ವ ಗೊತ್ತಾಗುತ್ತದೆ. ಕೆಲವು ಕಡೆ ಲೋಪವಿರಬಹುದು. ಆದರೆ, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಒಟ್ಟಾರೆ ಕೆಲಸ ಸ್ಮಾರ್ಟ್ ಆಗಿಯೇ ಇದೆ’ ಎಂದರು.

ಮೇಯರ್‌, ಉಪಮೇಯರ್‌ ಮೀಸಲಾತಿ ನಿಗದಿ ಸಮಸ್ಯೆ ಯಾವಾಗ ಪರಿಹಾರವಾಗುತ್ತದೆ? ಎಂಬ ಪ್ರಶ್ನೆಗೆ, ‘ಸಂಬಂಧಿಸಿದ ನ್ಯಾಯಾಧೀಶರ ನಂಬರ್ ಕೊಡುವೆ. ನೀವೇ ಕರೆ ಮಾಡಿ ತಿಳಿದುಕೊಳ್ಳಿ’ ಎಂದು ಚಟಾಕಿ ಹಾರಿಸಿದರು.

ಸಚಿವ ಸ್ಥಾನ: ವರಿಷ್ಠರ ತೀರ್ಮಾನಕ್ಕೆ ಬದ್ಧ..
‘ಮತ್ತೆ ಸಚಿವರಾಗುವಿರಾ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ‘ನನ್ನ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿದ್ದೆ. ಹಿಂದಿನ ಸರ್ಕಾರದಲ್ಲಿ ಗೃಹ ಸಚಿವ ಜಾರ್ಜ್ ಅವರನ್ನು ಕೂಡ ರಾಜೀನಾಮೆಗೆ ಒತ್ತಾಯಿಸಿದ್ದೆ. ಅವರು ರಾಜೀನಾಮೆ ನೀಡಿದ್ದರು. ನಿರ್ದೋಷಿ ಆದ ಬಳಿಕ ಮತ್ತೆ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹಾಗೆಯೇ ನಾನು ಕೂಡ ನಿರ್ದೋಷಿಯಾಗಿರುವೆ. ಸಚಿವ ಸ್ಥಾನ ಬಯಸಿರುವುದು ನಿಜ. ಆದರೆ, ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ’ ಎಂದರು.

*
ರಸ್ತೆ, ವಿದ್ಯುತ್, ನೀರಿನ ವಿಚಾರದಲ್ಲಿ ಇಲಾಖೆಗಳ ನಿಧಾನಗತಿ ಧೋರಣೆ, ಸಮನ್ವಯದ ಕೊರತೆಯಿಂದ ನಗರದ ಜನತೆಗೆ ಅಲ್ಲಲ್ಲಿ ತೊಂದರೆ ಆಗುತ್ತಿದೆ. ಅದನ್ನು ಒಪ್ಪಿಕೊಳ್ಳುವೆ. ಶೀಘ್ರ ಸರಿಪಡಿಸಲಾಗುವುದು
– ಕೆ.ಎಸ್‌. ಈಶ್ವರಪ್ಪ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT