ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: 28 ರಂದು ಕರ್ನಾಟಕ ಬಂದ್‍‌ಗೆ ವಿವಿಧ ಸಂಘಟನೆಗಳ ಬೆಂಬಲ

Last Updated 26 ಸೆಪ್ಟೆಂಬರ್ 2020, 12:22 IST
ಅಕ್ಷರ ಗಾತ್ರ

ಶಿವಮೊಗ್ಗ: ಭೂ ಸುಧಾರಣೆ, ಕಾರ್ಮಿಕ, ವಿದ್ಯುತ್ ಮುಂತಾದ ಜನವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೆ.28 ರಂದು ಕರೆ ನೀಡಿರುವಕರ್ನಾಟಕ ಬಂದ್‍ಗೆ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿವೆ.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ.ಗಂಗಾಧರ್, ವಕೀಲ ಕೆ.ಪಿ.ಶ್ರೀಪಾಲ್, ಹೋರಾಟಗಾರ ಕೆ.ಎಲ್.ಅಶೋಕ್, ದಸಂಸನ ಹಾಲೇಶಪ್ಪ, ಎಸ್‍ಡಿಪಿಐನ ಸಲೀಂ ಸೇರಿ ವಿವಿಧ ಸಂಘಟನೆಗಳ ಮುಖಂಡರು ಶನಿವಾರ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಬಂದ್‍ ಜಿಲ್ಲೆಯಲ್ಲೂ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

‘ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರುತ್ತಿರುವ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ರೈತ ಚಳವಳಿ ಭುಗಿಲೆದ್ದಿದೆ.ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಮಸೂದೆಗಳ ಸಮರ್ಥನೆಗೆ ಇಳಿದಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಮಸೂದೆಗಳನ್ನು ಸಮರ್ಥನೆ ಮಾಡಲು ಕರೆ ಕೊಟ್ಟಿದ್ದಾರೆ. ಆದರೆ, ಅವರ ಸರ್ಕಾರದ ಸಚಿವರೇ ಮಸೂದೆಗಳನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಈ ಕಾಯ್ದೆಗಳು ರೈತಪರ ಎನ್ನುವುದಾದರೆ ರೈತರು, ಕಾರ್ಮಿಕರು, ದಲಿತರ ಜೊತೆ ಮಾತುಕತೆ ನಡೆಸುವುದನ್ನು ಬಿಟ್ಟು ಏಕಾಏಕಿ ಕಾಯ್ದೆಗಳನ್ನು ಹೊರತಂದಿರುವುದನ್ನು ಖಂಡಿಸುತ್ತೇವೆ’ ಎಂದು ಎಚ್.ಆರ್. ಬಸವರಾಜಪ್ಪ ಹೇಳಿದರು.

ಕರ್ನಾಟಕದಲ್ಲಿ ರೈತ, ದಲಿತ, ಕಾರ್ಮಿಕ ವಿರೋಧಿ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್‌ ಕಾಯ್ದೆ ಜಾರಿಗೆ ತರಬಾರದು ಎಂದು ವಿಧಾನಸಭಾ ಅಧಿವೇಶನದ ಆರಂಭದ ದಿನದಂದು ಆಹೋರಾತ್ರಿ ಧರಣಿ ನಡೆಸಿದ್ದರೂ ರಾಜ್ಯ ಸರ್ಕಾರ ಎಪಿಎಂಸಿ ಮಸೂದೆ ಪಾಸ್ ಮಾಡಿದೆ ಎಂದು ಆರೋಪಿಸಿದರು.

ಭೂಸುಧಾರಣಾ ಮಸೂದೆಯನ್ನು ಸದನದಲ್ಲಿ ಮಂಡಿಸಿದೆ. ಸರ್ಕಾರಗಳು ಈ ಮಸೂದೆಯನ್ನು ಹಿಂಪಡೆಯುವ ಲಕ್ಷಣ ಕಾಣಿಸುತ್ತಿಲ್ಲ. ಆದ್ದರಿಂದ ಸೆ.28 ರಂದು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದು, ಎಲ್ಲ ಶ್ರಮಿಕ ವರ್ಗದವರು, ರೈತರು, ಕಾರ್ಮಿಕರು, ವರ್ತಕರು, ಆಟೊಚಾಲಕರು, ಬೀದಿ ಬದಿ ವ್ಯಾಪಾರಿಗಳು, ಸಾರ್ವಜನಿಕರು ಈ ಬಂದ್‍ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಸೆ.28ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ಪ್ರಯುಕ್ತ ಶಿವಮೊಗ್ಗ ನಗರ ಸೇರಿ ಜಿಲ್ಲೆಯಾದ್ಯಂತ ಬಂದ್‍ಗೆ ಕರೆ ನೀಡಲಾಗಿದೆ. ಬೆಳಿಗ್ಗೆ 10ಕ್ಕೆ ಸರ್ಕಾರಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.

ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್, ‘ಪ್ರಜಾಪ್ರಭುತ್ವದ ಉಳಿವಿಗಾಗಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‍ಗೆ ಸಂಪೂರ್ಣ ಬೆಂಬಲವಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿಜೆಡಿಎಸ್ ನಗರ ಘಟಕದ ಅಧ್ಯಕ್ಷ ಸಿದ್ದಪ್ಪ, ಕರ್ನಾಟಕ ಜನಶಕ್ತಿ ಜಿಲ್ಲಾ ಸಂಚಾಲಕ ಡಿ.ಎಸ್. ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT