ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಅರಿವಿನಲ್ಲಿ ರಂಗಭೂಮಿ ಪಾತ್ರ ಅನನ್ಯ

ಕೃತಿ ಬಿಡುಗಡೆ ಸಮಾರಂಭದಲ್ಲಿ ಕವಯಿತ್ರಿ ಡಿ.ಬಿ. ರಜಿಯಾ
Last Updated 23 ಫೆಬ್ರುವರಿ 2021, 4:20 IST
ಅಕ್ಷರ ಗಾತ್ರ

ಶಿವಮೊಗ್ಗ: ಜನರಿಗೆ ಸಾಮಾಜಿಕ ಕಾಳಜಿಯ ಅರಿವು ಮೂಡಿಸುವಲ್ಲಿ ರಂಗಭೂಮಿಯ ಪಾತ್ರ ಅನನ್ಯ ಎಂದು ಕವಯಿತ್ರಿ ಡಿ.ಬಿ. ರಜಿಯಾ ಶ್ಲಾಘಿಸಿದರು.

ಶಿವಮೊಗ್ಗ ಹೊಂಗಿರಣ ತಂಡ ಭಾನುವಾರ ಹಮ್ಮಿಕೊಂಡಿದ್ದ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಡಾ. ಸಾಸ್ವೆಹಳ್ಳಿ ಸತೀಶ್ ಅವರ ‘ಕೆಂಡದ ಮಳೆ ಕರೆವಲ್ಲಿ’ ನಾಟಕ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲೂ ರಂಗಭೂಮಿ ಹೊಸ ಸ್ವರೂಪಗಳೊಂದಿಗೆ ಜೀವಂತವಾಗಿದೆ. ಯುವ ಪೀಳಿಗೆಗೂ ಸಹಬಾಳ್ವೆಯ ಪಾಠ ಹೇಳಿಕೊಡುವ ಪ್ರಯೋಗ ಶಾಲೆಯ ರೀತಿ ಕೆಲಸ ಮಾಡುತ್ತಿದೆ. ರಂಗಭೂಮಿಯ ಸಾಕಷ್ಟು ಕಲಾವಿದರು ಇತರೆ ಕ್ಷೇತ್ರಗಳಲ್ಲೂ ಪ್ರಸಿದ್ಧರಾಗುತ್ತಿದ್ದಾರೆ ಎಂದರು.

‘ಕೆಂಡದ ಮಳೆ ಕರೆವಲ್ಲಿ’ ನಾಟಕ ಕೃತಿ ಗ್ರಾಮೀಣ ಜನರ ಬದುಕಿನ ಚಿತ್ರಣ ತೆರೆದಿಡುತ್ತದೆ. ಅಲ್ಪಸಂಖ್ಯಾತ ಕುಟುಂಬ ಅನುಭವಿಸುವ ನೋವು, ಅವರ ಮೇಲಾಗುವ ದೌರ್ಜನ್ಯ, ಅಲ್ಲಿನ ಪರಿಸರದ ಜತೆ ಹೊಂದಾಣಿಕೆ ಮಾಡಿಕೊಂಡು ಬದುಕು ನಡೆಸುವ ಅನಿವಾರ್ಯ, ಅಸಹಾಯಕತೆ, ಶ್ರೀಮಂತರ ದಬ್ಬಾಳಿಕೆ, ಪೊಲೀಸರ ಭ್ರಷ್ಟಾಚಾರದ ಕಥನವನ್ನು ಸಾಸ್ವೆಹಳ್ಳಿ ಸತೀಶ್ ಅವರು ಚುರುಕು ಸಂಭಾಷಣೆಗಳ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಎಂದು ವಿಶ್ಲೇಷಿಸಿದರು.

‘ತಂದೆ ಎಚ್‌. ಇಬ್ರಾಹಿಂ ಅವರು ರಂಗಭೂಮಿಗೆ ಸಾಕಷ್ಟು ನೆರವು ನೀಡುತ್ತಿದ್ದರು. ಹಲವು ನಾಟಕಗಳನ್ನು ರಂಗಕ್ಕೆ ತರಲು ಪ್ರೋತ್ಸಾಹಿಸಿದ್ದರು. ಅವರ ಜತೆ ನಾಟಕಗಳ ತಾಲೀಮು ನೋಡಲು ಹೋಗುತ್ತಿದ್ದೆ’ ಎಂದು ಬಾಲ್ಯವನ್ನು ಮೆಲುಕು ಹಾಕಿದರು.

‘ಭಳಾರೆ ವಿಚಿತ್ರಂ’ ಕೃತಿ ಕುರಿತು ಮಾತನಾಡಿದ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್, ‘ಒಂದೂವರೆ ದಶಕಗಳ ಹಿಂದೆ ರಂಗಕ್ಕೆ ತಂದ ಕುಂ. ವೀರಭದ್ರಪ್ಪ ಅವರ ಕಥೆಗಳನ್ನು ಆಧರಿಸಿದ ‘ಭಳಾರೆ ವಿಚಿತ್ರಂ’ ರಂಗಾಸ್ತಕರಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ನಾಟಕದ ವಿಷಯ ವಸ್ತುಗಳು ಹಲವರ ಕೆಂಗಣ್ಣಿಗೂ ಗುರಿಯಾಗಿದ್ದವು. ಸಾಕಷ್ಟು ಪ್ರದರ್ಶನ ಕಂಡ ಬಳಿಕವೂ ಕಲಾವಿದರಿಗೆ ಯಾವುದೇ ತೊಂದರೆಯಾಗಲಿಲ್ಲ ಎನ್ನುವುದೇ ಸಮಾಧಾನದ ವಿಷಯ’ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

17 ವರ್ಷಗಳ ಹಿಂದೆ ದೇಸಿ ಉತ್ಸವಕ್ಕಾಗಿ ‘ಭಳಾರೆ ವಿಚಿತ್ರಂ’ ನಾಟಕ ಮೂಡಿಬಂತು. ವಿಮರ್ಶಕ ಕೀ.ರಂ. ನಾಗರಾಜ್ ಮೆಚ್ಚುಗೆಯ ಮಾತು ಹೇಳಿದ್ದರು. ಕಥೆಯೊಳಗಿನ ಸತ್ವವನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ತರುವುದು ಅಷ್ಟು ಸುಲಭದ ಕೆಲಸವಲ್ಲ. ಇಂದಿನ ಯುವಪೀಳಿಗೆಗೆ ಮಾತುಗಳೇ ಪಥ್ಯವಾಗುತ್ತಿಲ್ಲ ಎನ್ನುವುದು ಕಳವಳದ ವಿಷಯ ಎಂದು
ಹೇಳಿದರು.

‘ಭಳಾರೆ ವಿಚಿತ್ರಂ’ ನಾಟಕ ಕೃತಿಯನ್ನು ರಂಗ ಕಲಾವಿದ ವಿಕ್ರಂ ವಾಸು ಬಿಡುಗಡೆ ಮಾಡಿದರು. ಹೊಂಗಿರಣ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT