ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರಗ ₹ 21,800 ಸಂಬಳದಲ್ಲಿ ಬದುಕಿದ್ರಾ: ಕಿಮ್ಮನೆ

Published : 19 ಆಗಸ್ಟ್ 2024, 16:31 IST
Last Updated : 19 ಆಗಸ್ಟ್ 2024, 16:31 IST
ಫಾಲೋ ಮಾಡಿ
Comments

ತೀರ್ಥಹಳ್ಳಿ: ‘ಶಾಸಕ ಆರಗ ಜ್ಞಾನೇಂದ್ರ 1983ರಲ್ಲಿ ಸರ್ಕಾರ ಕೊಡುತ್ತಿದ್ದ ₹ 21,800 ಸಂಬಳದಲ್ಲಿ ಜೀವನ ನಡೆಸಿದ್ರಾ. 15 ವರ್ಷ ಶಾಸಕರಾಗಿದ್ದ ಅವರು ಅದೇ ಸಂಬಳದಲ್ಲಿ ಕಾರು, ಚಾಲಕರನ್ನು ಇಟ್ಟುಕೊಂಡು ಹೇಗೆ ಬದುಕಿದ್ರು ಎಂದು ಜನರಿಗೆ ತಿಳಿಸಲಿ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದರು.

ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೇಳುವ ಆರಗ ಜ್ಞಾನೇಂದ್ರ ಸರಿಯಾದ ತನಿಖೆಯಾದ್ರೆ 10 ಬಾರಿ ಜೈಲು ಸೇರುತ್ತಿದ್ದರು’ ಎಂದು ಲೇವಡಿ ಮಾಡಿದರು.

‘ಶಾಸಕರ ಸ್ನೇಹಿತರು, ಪುತ್ರ ಇಬ್ಬರೂ ಸೇರಿ ಯಾರದ್ದೋ ಹೆಸರಿನಲ್ಲಿ ಇರುವ ಸರ್ಕಾರಿ ಜಾಗವನ್ನು ಕೊಂಡುಕೊಂಡಿದ್ದಾರೆ. 1935ರಿಂದ ಆ ಜಾಗ ಬಹಳಷ್ಟು ಮಂದಿಯ ಕೈಗೆ ವರ್ಗಾವಣೆಯಾಗಿದೆ. ಅದನ್ನು ಶೀಘ್ರ ಬಹಿರಂಗಪಡಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಮೂಡಾ ವಿಚಾರದಲ್ಲಿ ಸಿದ್ದರಾಮಯ್ಯ ಎಳ್ಳಷ್ಟೂ ತಪ್ಪು ಮಾಡಿಲ್ಲ. ವಿಶ್ವದ ಯಾವುದೇ ಕಾನೂನಿನಡಿಯಲ್ಲಿ ತನಿಖೆಯಾದರೂ ಅಪರಾಧ ಸಾಬೀತು ಪಡಿಸಲು ಸಾಧ್ಯವಿಲ್ಲ. ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ,‌ ಆರ್‌.ಅಶೋಕ್‌, ಜನಾರ್ದನ ರೆಡ್ಡಿ ಪ್ರಾಸಿಕ್ಯೂಷನ್‌ಗೆ ಪೊಲೀಸರೇ ಅನುಮತಿ ಕೋರಿದ್ದರು. ಅವುಗಳನ್ನು ರಾಜ್ಯಪಾಲರು ಎಲ್ಲಿ ಎಸೆದಿದ್ದಾರೆ’ ಎಂದು ಪ್ರಶ್ನಿಸಿದರು.

‘ಬಿಜೆಪಿ ರಾಜ್ಯ ಘಟಕದ ಗೌರವಾಧ್ಯಕ್ಷರ ರೀತಿಯಲ್ಲಿ ರಾಜ್ಯಪಾಲರ ವರ್ತನೆ ಇದೆ. ಮೂವರು ಖಾಸಗಿ ವಕ್ತಿಗಳ ದೂರಿನ ಆಧಾರದ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವುದು ಸರಿಯಲ್ಲ. ಮನಸ್ಸಿಗೆ ಬಂದಹಾಗೆ ಅರ್ಜಿ ಕೊಟ್ಟರೆ ರಾಜ್ಯ, ಕೇಂದ್ರದ ಸಚಿವರ ಅಸ್ಥಿತ್ವವೇ ಕಳೆದು ಹೋಗುತ್ತದೆ. ಇದನ್ನು ಖಂಡಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸುತ್ತೇನೆ’ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಕೆಸ್ತೂರು ಮಂಜುನಾಥ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಎಸ್.‌ವಿಶ್ವನಾಥ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ಸ್ಥಾನ ಸಮಿತಿ ಅಧ್ಯಕ್ಷ ಬಿ.ಗಣಪತಿ, ಮುಖಂಡರಾದ ರೆಹಮತ್‌ ಉಲ್ಲಾ ಅಸಾದಿ, ಬಿ.ಕೆ.ಉದಯ ಕುಮಾರ್‌, ಟಿ.ಎಲ್.ಸುಂದರೇಶ್, ರತ್ನಾಕರ ಶೆಟ್ಟಿ, ಗೀತಾ, ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT