ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಪ್ಪಳಿ ಪರಿಸರಕ್ಕೆ ‘ಅಭಿವೃದ್ಧಿ’ಯ ಬರೆ

ವಿಲಾಸಿ ಕೇಂದ್ರವಾಗಿ ಬದಲಾಗುತ್ತಿರುವ ಊರು: ಪರಿಸರ ಪ್ರೇಮಿಗಳ ಆಕ್ಷೇಪ
Last Updated 7 ಫೆಬ್ರುವರಿ 2023, 4:59 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪರಿಸರವನ್ನು ಸಾಹಿತ್ಯದ ಮೂಲಕ ಆರಾಧಿಸಿದ ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗೆ ವ್ಯತಿರಿಕ್ತವಾಗಿ ಕುಪ್ಪಳಿ ಪರಿಸರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಸಹ್ಯಾದ್ರಿಯ ಕಾನನ ಅಭಿವೃದ್ಧಿಯ ಕೆನ್ನಾಲಿಗೆಗೆ ಸಿಲುಕಿ ಅರಣ್ಯ ಸಂಪತ್ತು ನಾಶವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.

ಅರಣ್ಯ ಕಾಯ್ದೆ 1963ರ ಅಡಿ 2002ರಲ್ಲಿ ಕುಪ್ಪಳಿಯ ಸುತ್ತಲಿನ ಪರಿಸರವನ್ನು ‘ಕುವೆಂಪು ಜೈವಿಕ ಅರಣ್ಯ’ ಎಂದು ಘೋಷಿಸಲಾಗಿತ್ತು. ಆದರೆ, ಇದೀಗ ಸದ್ದಿಲ್ಲದೆ 1933 ಎಕರೆ ವಿಸ್ತೀರ್ಣದ ಈ ಪ್ರದೇಶದಲ್ಲಿ ಕುವೆಂಪು ವಿಚಾರಧಾರೆ ವಿರೋಧಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಪರಿಸರವನ್ನು ಆಸ್ವಾದಿಸಿದ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿಯ ಸುತ್ತಲಿನ ನೈಸರ್ಗಿಕ ಕಾಡು ಅಪಾಯಕ್ಕೆ ಸಿಲುಕಿದೆ. ಸಾಹಿತ್ಯ ಪರಿಚರ್ಯೆ ಮಾಡುವ ಬದಲು ಕುಪ್ಪಳಿ ವಿಲಾಸಿ ಕೇಂದ್ರವಾಗಿ ಬದಲಾಗುತ್ತಿದೆ.

‘ಕವಿಮನೆ, ಹೇಮಾಂಗಣ, ಸುತ್ತಲಿನ ಪ್ರದೇಶದ ದುರಸ್ತಿ ಕಾಮಗಾರಿಗೆ ರಾಜ್ಯ ಸರ್ಕಾರ ನೀಡಿರುವ ಅನುದಾನ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಕಾಡು ಕಡಿದು ಕಾಂಕ್ರೀಟ್‌ ಕಾಡು ನಿರ್ಮಾಣಕ್ಕೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಮುಂದಾಗಿದೆ. ಇಲ್ಲಿಗೆ ಬರುವವರು ಕ್ಷಣಿಕ ವೈಭೋಗದಲ್ಲಿ ತಲ್ಲೀನರಾಗುವ ಆತಂಕ ಎದುರಾಗಿದೆ’ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಕುಪ್ಪಳಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಬಾರದು. ಅವಶ್ಯವಿದ್ದರೆ ಆಡಂಬರವಿಲ್ಲದ ಕಟ್ಟಡದ ಮೂಲಕ ಸಂಸ್ಕೃತಿ
ಕೇಂದ್ರ ನಿರ್ಮಿಸಲಿ ಎಂದು ಕುವೆಂಪು ಅವರೇ ಆಶಯ ಹೊಂದಿದ್ದರು’ ಎಂದು ಸಾಹಿತ್ಯ ಆಸಕ್ತರು, ಪರಿಸರ ಪ್ರೇಮಿಗಳು
ಪ್ರತಿಷ್ಠಾನಕ್ಕೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

***

ಕುವೆಂಪು ಆಶಯಕ್ಕೆ ವಿರುದ್ಧವಾಗಿ ಅರಣ್ಯ ನಾಶಪಡಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಾಡು ಕಡಿದು ಅಭಿವೃದ್ಧಿಯ ಮನಸ್ಥಿತಿ ಬೆಳೆದಿರುವುದು ದುರಂತ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಇಲ್ಲದ ಊರಾಗಿ ಮಾರ್ಪಾಡಾಗಲಿದೆ.

ವಿನುಕುಮಾರ್‌ ಎಚ್.ಕೆ, ಪರಿಸರ ಪ್ರೇಮಿ

***

‘ತೇಜಸ್ವಿ ಸಮಾಧಿಯಿಂದ ದೂರದಲ್ಲಿ ಕಾಮಗಾರಿ’

‘ಪ್ರವಾಸಿಗಳು ಹೆಚ್ಚಿರುವ ಸಂದರ್ಭ ಕವಿ ಮನೆಯ ಸುತ್ತಲೂ ಇಕ್ಕಟ್ಟಿನ ವಾತಾವರಣ ಸೃಷ್ಟಿಯಾಗುತ್ತಿದೆ. ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳ ಅಗತ್ಯ ಇದೆ. ವಿವಿಧ ಪರಿಕಲ್ಪನೆಯೊಂದಿಗೆ ತೇಜಸ್ವಿ ಸಮಾಧಿಯಿಂದ 250 ಅಡಿ ಅಂತರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದೇವೆ. ಸರ್ಕಾರ ₹ 1 ಕೋಟಿ ಅನುದಾನ ನೀಡಿರುವ ಕುರಿತು ಇನ್ನೂ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ’ ಎಂದು ‌ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT