ಶಿವಮೊಗ್ಗ: ಸಮೀಪದ ಆಲದೇವರು ಹೊಸೂರು ಗ್ರಾಮದ ಬಳಿಯ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಕಾಡಾನೆ ದಾಳಿಗೆ ಕೃಷಿ ಕಾರ್ಮಿಕ ಹನುಮಂತಪ್ಪ (50) ಸಾವನ್ನಪ್ಪಿದ್ದಾರೆ.
ಪುರದಾಳು ಗ್ರಾಮ ಸಮೀಪ ಇರುವ ಆಲದೇವರ ಹೊಸೂರು ಗ್ರಾಮ ವ್ಯಾಪ್ತಿಯಲ್ಲಿನ ಸಂಪತ್ ಕುಮಾರ್ ಎಂಬುವವರ ತೋಟದ ಮನೆಯಲ್ಲಿ ವಾಸವಿದ್ದ ಹನುಮಂತಪ್ಪ, ಸ್ಥಳೀಯವಾಗಿ ಕೃಷಿ ಕೂಲಿ ಕೆಲಸದ ಜೊತೆಗೆ ಬೇರೆಯವರ ತೋಟ ನೋಡಿಕೊಳ್ಳುತ್ತಿದ್ದರು.
ರಾತ್ರಿ ಪುರದಾಳು ಗ್ರಾಮಕ್ಕೆ ಹೋಗಿ ವಾಪಸ್ ತೋಟದ ಮನೆಗೆ ಬರುವಾಗ ಆನೆ ಸರದ ಬಳಿಯೇ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
'ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಪುರದಾಳು, ಚನ್ನಹಳ್ಳಿ, ಮಂಜರಿಕೊಪ್ಪ ಮಲೆಶಂಕರ ಗಡಿಭಾಗದಲ್ಲಿ ಕಾಡಾನೆಗಳ ಓಡಾಟ ಮಾಮೂಲಿಯಾಗಿದೆ. ಆನೆ ಸರದ ಬಳಿ ಕೆರೆ ಇದ್ದು, ಸುತ್ತಲೂ ಬಿದಿರಿನ ಮೆಳೆ ಇದೆ. ಬಿದಿರು ತಿನ್ನಲು ಅಲ್ಲಿಗೆ ಆನೆಗಳು ಬರುತ್ತಿರುತ್ತವೆ. ಕತ್ತಲೆಯಲ್ಲಿ ಬಹುಶಃ ಹನುಮಂತಪ್ಪ ಆನೆಯನ್ನು ಗಮನಿಸಿರಲಿಕ್ಕಿಲ್ಲ" ಎಂದು ಶಿವಮೊಗ್ಗ ವನ್ಯ ಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
ಡಿಸಿಎಫ್ ಪ್ರಸನ್ನ ಪಟಗಾರ ರಾತ್ರಿ ಘಟನೆ ನಡೆದ ಸ್ಥಳಕ್ಜೆ ತೆರಳಿ ಪರಿಶೀಲಿಸಿದರು.
ಮೃತ ಹನುಮಂತಪ್ಪ ಮೂಲತಃ ಗದದ ಜಿಲ್ಲೆ ಲಕ್ಷ್ಮೇಶ್ವರದವರು. ಅವರಿಗೆ ಪತ್ನಿ, ನಾಲ್ವರು ಮಕ್ಕಳು ಇದ್ದಾರೆ. ಕೂಲಿ ಕೆಲಸಕ್ಕೆಂದು ಶಿವಮೊಗ್ಗ ಜಿಲ್ಲೆಗೆ ಗುಳೆ ಬಂದಿದ್ದರು.