ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಅರವಳಿಕೆ ಕೊಟ್ಟು ಮುಶಿಯಾ ಸೆರೆ

ಶಕುನವಳ್ಳಿ: ವಾರದಲ್ಲಿ 14 ಮಕ್ಕಳಿಗೆ ಕಚ್ಚಿದ್ದ ವಾನರರ ಗುಂಪು
Published 1 ಏಪ್ರಿಲ್ 2024, 6:17 IST
Last Updated 1 ಏಪ್ರಿಲ್ 2024, 6:17 IST
ಅಕ್ಷರ ಗಾತ್ರ

ಶಿವಮೊಗ್ಗ: ಸೊರಬ ತಾಲ್ಲೂಕಿನ ಶಕುನವಳ್ಳಿಯಲ್ಲಿ ಕಳೆದೊಂದು ವಾರದಲ್ಲಿ 14 ಮಕ್ಕಳಿಗೆ ಕಚ್ಚಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮೂರು ಮುಶಿಯಾಗಳ (ಹನುಮಾನ್‌ ಲಂಗೂರ್‌) ಪೈಕಿ ಒಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಸೆರೆಹಿಡಿದಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರವಳಿಕೆ ಮದ್ದು ನೀಡಿ ಮುಶಿಯಾ ಸೆರೆ ಹಿಡಿಯಲಾಗಿದೆ.

ಗ್ರಾಮದಲ್ಲಿ ಮುಶಿಯಾಗಳ ತಂಡ ಬೀಡು ಬಿಟ್ಟಿದೆ. ಅದರಲ್ಲಿ ಮೂರು ಮುಶಿಯಾ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎನ್ನಲಾಗಿದೆ. ವಾನರರ ಕಾಟಕ್ಕೆ ಇಡೀ ಗ್ರಾಮವೇ ನಲುಗಿ ಹೋಗಿತ್ತು. ಮುಶಿಯಾಗಳ ದಾಳಿಗೆ ಸಿಲುಕಿ ಗಾಯಗೊಂಡವರಲ್ಲಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಹೆಚ್ಚು ಇದ್ದರು.

ಮಕ್ಕಳಿಗೆ ತೊಂದರೆ ನೀಡುತ್ತಿದ್ದ ಇನ್ನೂ ಎರಡು ಮುಶಿಯಾಗಳ ಸೆರೆಗೆ ಕ್ರಮ ವಹಿಸಲಾಗಿದೆ. ಎಸಿಎಫ್‌ ಮೋಹನ್‌ಕುಮಾರ್ ನೇತೃತ್ವದಲ್ಲಿ ಗ್ರಾಮದಲ್ಲಿ ಇಡೀ ದಿನ ಕಾರ್ಯಾಚರಣೆ ನಡೆಯಿತು ಎಂದು ಆನವಟ್ಟಿ ವಲಯದ ಆರ್‌ಎಫ್‌ಒ ಪುರುಷೋತ್ತಮ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವುದೇ ಪ್ರತಿರೋಧ ತೋರದ ಕಾರಣ ಮಕ್ಕಳನ್ನೇ ಈ ಮುಶಿಯಾಗಳು ಗುರಿ ಮಾಡುತ್ತಿದ್ದವು. ಅಂಗಳದಲ್ಲಿ ಆಟವಾಡುವ ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸುತ್ತಿದ್ದವು. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಅಂಜುತ್ತಿದ್ದರು.

‘ಗ್ರಾಮ ಪಂಚಾಯಿತಿ ಮನವಿ ಮೇರೆಗೆ ಮುಶಿಯಾಗಳ ಸೆರೆ ಕಾರ್ಯಾಚರಣೆ ಆರಂಭಿಸಿದ್ದೇವೆ. ಅರವಳಿಕೆ ಮದ್ದು ನೀಡಲು ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಿಂದ ವೈದ್ಯರ ಕರೆಸಿದ್ದೇವೆ. ಆನವಟ್ಟಿ ವಲಯದ 20ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ’ ಎಂದು ಪುರುಷೋತ್ತಮ ಹೇಳಿದರು.

‘ಮಳೆ ಇಲ್ಲ, ಬರಗಾಲ. ಕಾಡಿನಲ್ಲಿ ಸರಿಯಾಗಿ ಆಹಾರ ಸಿಗದೇ ಮಂಗ, ಮುಶಿಯಾಗಳ ಗುಂಪು ಊರಿನತ್ತ ಬರುತ್ತಿವೆ. ಹಸಿವಿನಿಂದ ಕೆಲವು ಆಕ್ರಮಣಕಾರಿಯಾಗಿರುತ್ತವೆ. ಶಕುನವಳ್ಳಿಯಲ್ಲಿ ಮಕ್ಕಳ ಮೇಲೆ ದಾಳಿ ನಡೆಸಿವೆ’ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವನ್ಯಜೀವಿ ತಜ್ಞ ಡಾ.ಮುರಳಿ ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಯಾಚರಣೆಯಲ್ಲಿ ಗಂಡು ಮುಶಿಯಾ ಸೆರೆಹಿಡಿಯಲಾಗಿದೆ. ಅರೆವಳಿಕೆ ಮದ್ದಿನಿಂದ ಪ್ರಜ್ಞೆ ತಪ್ಪಿದ್ದ ಅದು ಈಗ ಎಚ್ಚರಗೊಂಡಿದೆ. ಆರೋಗ್ಯವಾಗಿದೆ. ಇನ್ನೂ ಎರಡು ಮುಶಿಯಾಗಳನ್ನು ಶೀಘ್ರ ಸೆರೆಹಿಡಿಯಲಾಗುವುದು’ ಎಂದರು.

ಅರಣ್ಯ ಸಿಬ್ಬಂದಿ ಗೋಳು ಹೊಯ್ದುಕೊಂಡ ವಾನರ...

ತಮ್ಮನ್ನು ಹಿಡಿಯಲು ಬಂದಿದ್ದ ಅರಣ್ಯ ಸಿಬ್ಬಂದಿ ಹಾಗೂ ವೈದ್ಯರನ್ನು ಇಡೀ ದಿನ ಕೈಗೆ ಸಿಗದೇ ಗೋಳು ಹೊಯ್ದುಕೊಂಡವು. ಕ್ಷಣ ಮಾತ್ರದಲ್ಲಿ ಮನೆಯ ಮಾಳಿಗೆ ಮರ ವಿದ್ಯುತ್ ಕಂಬ ಹೀಗೆ ಸಿಕ್ಕ ಸಿಕ್ಕ ಕಡೆ ಲಾಗಾ ಹಾಕುತ್ತಾ ಮಾಯವಾಗುತ್ತಿದ್ದ ಮುಶಿಯಾಗಳನ್ನು ಹಿಂಬಾಲಿಸಿದಅರಣ್ಯ ಸಿಬ್ಬಂದಿ ಬಿರು ಬಿಸಿಲಿಗೆ ಸಿಲುಕಿ ಹೈರಾಣಾಗಿದ್ದರು. ಕಾರ್ಯಾಚರಣೆ ನೋಡಲು ಭಾರೀ ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆದಿದ್ದು ಆ ಗದ್ದಲ ಕೂಡ ಮುಶಿಯಾಗಳ ಸೆರೆ ಹಿಡಿಯಲು ಅಡ್ಡಿಯಾಯಿತು. ಸಂಜೆ ಒಂದು ಮುಶಿಯಾ ಅರೆವಳಿಕೆ ಗನ್‌ನ ಗುರಿಗೆ ಸಿಲುಕಿ ಸೆರೆ ಸಿಕ್ಕಿತು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT