ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಪಿಎಂ ಕಾರ್ಖಾನೆ ಪುನಶ್ಚೇತನಕ್ಕೆ ಗುತ್ತಿಗೆ ನವೀಕರಣ ಅನಿವಾರ್ಯ: ರಾಘವೇಂದ್ರ

Last Updated 9 ಜನವರಿ 2021, 12:59 IST
ಅಕ್ಷರ ಗಾತ್ರ

ಸಾಗರ: ಭದ್ರಾವತಿಯ ಎಂಪಿಎಂ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಜಿಲ್ಲೆಯಲ್ಲಿ ನಿಗದಿಪಡಿಸಿದ ಅರಣ್ಯ ಹಾಗೂ ಕಂದಾಯ ಭೂಮಿಯಲ್ಲಿ ನೆಡುತೋಪು ಬೆಳೆಸಲು ಎಂಪಿಎಂಗೆ ನೀಡಿರುವ ಗುತ್ತಿಗೆಯನ್ನು ನವೀಕರಣಗೊಳಿಸುವುದು ಅನಿವಾರ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಸ್ಪಷ್ಟಪಡಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಂದೆಡೆ ಕಸ್ತೂರಿರಂಗನ್ ವರದಿ ಜಾರಿ ಬೇಡ ಎನ್ನುವುದು, ಮತ್ತೊಂದೆಡೆ ಎಂಪಿಎಂಗೆ ನೀಡಿರುವ ಗುತ್ತಿಗೆ ನವೀಕರಿಸಬೇಡಿ ಎನ್ನುವುದು ದ್ವಂದ್ವ ನಿಲುವು ಆಗುತ್ತದೆ’ ಎಂದರು.

ಅಕೇಶಿಯಾದಲ್ಲಿ ವಿವಿಧ ಜಾತಿಗಳಿವೆ. ಪರಿಸರಕ್ಕೆ ಮಾರಕವಾಗುವ ಅಕೇಶಿಯಾ, ನೀಲಗಿರಿ ತಳಿಗಳ ಬದಲು ಪರಿಸರಕ್ಕೆ ಪೂರಕವಾಗುವ ಗಿಡಗಳನ್ನೊಳಗೊಂಡ ನೆಡುತೋಪು ನಿರ್ಮಿಸುವಂತೆ ನೋಡಿಕೊಳ್ಳಲಾಗುವುದು. ಎಂಪಿಎಂ ಕಾರ್ಖಾನೆಯೇ ಇದರ ನಿರ್ವಹಣೆ ವಹಿಸುತ್ತದೆ ಹೊರತು ಭೂಮಿಯನ್ನು ಯಾವುದೇ ಬಂಡವಾಳಶಾಹಿಗಳ ವಶಕ್ಕೆ ನೀಡುವುದಿಲ್ಲ ಎಂದು ತಿಳಿಸಿದರು.

ತಾಲ್ಲೂಕಿನ ಯಲಗಳಲೆ ಗ್ರಾಮದ ಸ.ನಂ. 105ರ 50 ಎಕರೆ ಪ್ರದೇಶದಲ್ಲಿ ನೂತನ ಪೊಲೀಸ್ ತರಬೇತಿ ಕೇಂದ್ರ ಆರಂಭಗೊಳ್ಳಲಿದೆ. ಲಿಂಗನಮಕ್ಕಿ ಸೇರಿ ರಾಜ್ಯದ ಪ್ರಮುಖ ಜಲಾಶಯ, ಸೇನಾ ಕೇಂದ್ರಗಳ ಭದ್ರತೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಈ ಕೇಂದ್ರದ ಮೇಲೆ ಇರಲಿದೆ ಎಂದರು.

ತಾಲ್ಲೂಕಿನ ತಾಳಗುಪ್ಪ ಹಾಗೂ ಇಲ್ಲಿನ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಸಾಗರದ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇದು ಮುಕ್ತಾಯವಾದಲ್ಲಿ ಈಗ ಹೊರಡುತ್ತಿರುವ ರೈಲಿನ ಸಮಯವನ್ನು ಜನರ ಅನುಕೂಲಕ್ಕೆ ತಕ್ಕಂತೆ ಬದಲಿಸಲಾಗುವುದು ಎಂದು ಹೇಳಿದರು.

ರೈಲ್ವೆ ಕೋಚಿಂಗ್ ಟರ್ಮಿನಲ್ ಕೇಂದ್ರವನ್ನು ತಾಳಗುಪ್ಪ ಅಥವಾ ಕೋಟೆಗಂಗೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಈಗ ಕೋಟೆಗಂಗೂರಿನಲ್ಲಿ ಅದು ಕಾರ್ಯಾರಂಭ ಮಾಡುವುದು ಖಚಿತವಾಗಿದೆ. ಇದಕ್ಕೆ ಅಧಿಕಾರಿಗಳು ನೀಡಿರುವ ತಾಂತ್ರಿಕ ವರದಿ ಕಾರಣವೇ ಹೊರತು ರಾಜಕೀಯ ಕಾರಣಗಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೋಗದ ಅಭಿವೃದ್ಧಿಗೆ ₹ 160 ಕೋಟಿ ಮಂಜೂರಾಗಿದೆ. ಯಾವ ರೀತಿ ಜೋಗವನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಕುರಿತು ಚಿಂತನೆ ನಡೆದಿದೆ. ಸಾಗರದ ನ್ಯೂ ಬಿ.ಎಚ್. ರಸ್ತೆ ವಿಸ್ತರಣೆ ಕಾರ್ಯ ಶೀಘ್ರದಲ್ಲೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಶಾಸಕ ಎಚ್. ಹಾಲಪ್ಪ ಹರತಾಳು, ಟೂರಿಸಂ ಟಾಸ್ಕ್‌ಫೋರ್ಸ್‌ನಲಕ್ಷ್ಮೀನಾರಾಯಣ ಕಾಶಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT