ಶನಿವಾರ, ಆಗಸ್ಟ್ 20, 2022
21 °C
ಪಟ್ಟಣ ಪಂಚಾಯಿತಿ ಸದಸ್ಯರ ಒತ್ತಾಯ

ಬಾಕಿ ಹಣ ವಸೂಲಿಗೆ ಕಾನೂನು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ಕುರಿ, ಕೋಳಿ ಮಾಂಸದ ಅಂಗಡಿಗಳಿಂದ ಬರಬೇಕಾದ ಲಕ್ಷಾಂತರ ರೂಪಾಯಿ ಬಾಡಿಗೆ ಹಣವನ್ನು ಕಾನೂನು ಕ್ರಮ ಜರುಗಿಸುವ ಮೂಲಕ ವಸೂಲಿ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಟಿ.ರಾಜು ಹೇಳಿದರು.

ಪಟ್ಟಣದ ಬಿ.ಎಸ್. ಯಡಿಯೂರಪ್ಪ ಸಭಾಂಗಣದಲ್ಲಿ ಬುಧವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಅನಿಲ್ ಸುರಹೊನ್ನೆ, ‘ರಸ್ತೆ ಬದಿಯಲ್ಲಿ ಹಣ್ಣು ಹಾಗೂ ಹೂವಿನ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ಚಿಲ್ಲರೆ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗವನ್ನು ನೀಡುವವರೆಗೂ ತೆರವುಗೊ
ಳಿಸಬಾರದು’ ಎಂದು ಆಗ್ರಹಿಸಿದರು.

ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯವನ್ನು ನೆಲಸಮಗೊಳಿಸಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು. ಬಸ್ ನಿಲ್ದಾಣದ ಸಮೀಪ ಬೀದಿ ಬದಿ ವ್ಯಾಪಾರಿಗಳಿಗಾಗಿ ಫುಡ್ ಕೋರ್ಟ್ ನಿರ್ಮಾಣ, ಪಟ್ಟಣ ಪಂಚಾಯಿತಿ ಕಾರ್ಯಗಳಿಗಾಗಿ ಬಾಡಿಗೆ ವಾಹನ ಪಡೆಯುವುದು, ಅನಧಿಕೃತ ನಲ್ಲಿಗಳನ್ನು ಸಕ್ರಮಗೊಳಿಸುವುದು ಸೇರಿ ಹಲವು ವಿಷಯಗಳಿಗೆ ಒಪ್ಪಿಗೆ ನೀಡಲಾಯಿತು.

ಬಳಿಕ ಸ್ಥಾಯಿ ಸಮಿತಿಗೆ 5 ಜನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯ‌ಕ್ಷೆ ರಾಜೇಶ್ವರಿ ವಸಂತ, ಮುಖ್ಯಾಧಿಕಾರಿ ಹೇಮಂತ, ಸದಸ್ಯರಾದ ಅನಿಲ್, ಮಕ್ಬೂಲ್ ಸಾಬ್, ಮಹಾಬಲ, ಲಲಿತಮ್ಮ, ವಿಜಯಲಕ್ಷ್ಮಿ ಲೋಕೇಶ್, ತಸ್ಲಿಂ ಭಾಗವಹಿಸಿದ್ದರು.

ಕಾನೂನು ಬಾಹಿರ ಸಭೆ– ಆರೋಪ: ಸಾಮಾನ್ಯ ಸಭೆಯಲ್ಲಿ ಕೋರಂ ಕೊರತೆ ಇದ್ದರೂ ಕಾನೂನು ಬಾಹಿರವಾಗಿ ಸಭೆ ಮಾಡಿದ್ದಾರೆ ಎಂದು ಪಟ್ಟಣ ಪಂಚಾಯಿತಿ ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು.

ಈ ಬಗ್ಗೆ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಸಭೆಯಲ್ಲಿ 9 ಜನ ಸದಸ್ಯರು ಭಾಗವಹಿಸಿದ್ದರು. ಹಾಗಾಗಿ ಕೋರಂ ಕೊರತೆಯಿಲ್ಲದ ಕಾರಣ ಸಭೆಯನ್ನು ನಡೆಸಲಾಯಿತು ಎಂದು ಮುಖ್ಯಾಧಿಕಾರಿ ಉತ್ತರಿಸಿದರು.

ವಿರೋಧ ಪಕ್ಷದ ಸದಸ್ಯರು ಸಭೆಗೆ ಬಂದ ಕೂಡಲೇ ಅಧ್ಯಕ್ಷರು ಎದ್ದುಹೋಗಿದ್ದು ಪಟ್ಟಣದ ನಾಗರಿಕರಿಗೆ ಮಾಡಿದ ಅವಮಾನ ಎಂದು  ಸದಸ್ಯರಾದ ಮುದಾಸಿರ್, ತಡಗಣಿ ರಾಜಣ್ಣ ದೂರಿದರು.

ಅಧ್ಯಕ್ಷೆ ಮಂಜುಳಾ ರಾಜು, ‘ಸಾಮಾನ್ಯ ಸಭೆಯ ಅಜೆಂಡಾ, ಸ್ಥಳ ಹಾಗೂ ಸಮಯವನ್ನು 7 ದಿನಗಳ ಮುಂಚಿತವಾಗಿ ಕಳುಹಿಸಿಕೊಡಲಾಗಿದೆ. ವಿರೋಧ ಪಕ್ಷದ ಸದಸ್ಯರು ಕಾಳಜಿ ಇದ್ದಿದ್ದರೆ ಸಮಕ್ಕೆ ಬರಬೇಕಾಗಿತ್ತು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.