‘ದೇಶ ಮೊದಲು ಎಂಬ ಭಾವ ಮೂಡಲಿ’: ಎಚ್.ಹಾಲಪ್ಪ ಹರತಾಳು

ಸಾಗರ: ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾಗಿ ಮಾರ್ಪಾಟಾದ ನಂತರ ಹಲವು ಕ್ಷೇತ್ರಗಳಲ್ಲಿ ದೇಶ ಅನೇಕ ರೀತಿಯ ಅಭಿವೃದ್ಧಿ ಸಾಧಿಸಿದೆ. ದೇಶ ಮೊದಲು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿದರೆ ಮತ್ತಷ್ಟು ಪ್ರಗತಿ ಸಾಧ್ಯ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ತಾಲ್ಲೂಕು ಆಡಳಿತ ಗುರುವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ದೇಶ ಸ್ವಾತಂತ್ರ್ಯ ಗಳಿಸಿದಾಗ ನಮ್ಮ ಜನಸಂಖ್ಯೆ ಕೇವಲ 33 ಕೋಟಿ ಇತ್ತು. ಆಗ ಆಹಾರ ಧಾನ್ಯದ ಕೊರತೆ ಇತ್ತು. ಈಗ ಜನಸಂಖ್ಯೆ 133 ಕೋಟಿಗೆ ಏರಿದೆ. ಈಗ ದೇಶದ ಜನರಿಗೆ ಆಹಾರ ಪೂರೈಸುವ ಜೊತೆಗೆ ವಿದೇಶಗಳಿಗೂ ಕಳುಹಿಸುವಷ್ಟು ಸಾಮರ್ಥ್ಯ ಬಂದಿರುವುದಕ್ಕೆ ರೈತ, ಕೂಲಿ ಕಾರ್ಮಿಕ ಸಮುದಾಯಕ್ಕೆ ನಾವು ಕೃತಜ್ಞರಾಗಿರಬೇಕು’ ಎಂದರು.
ಸಾಗರ ಕ್ಷೇತ್ರ ಕೂಡ ಹಲವು ರೀತಿಯ ಅಭಿವೃದ್ಧಿಗಳನ್ನು ಕಾಣುತ್ತಿದೆ. ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗೂ ಕುಡಿಯುವ ನೀರು ಪೂರೈಸಲಾಗುತ್ತಿದೆ. ನಗರದ ನಾಲ್ಕೂ ದಿಕ್ಕುಗಳಲ್ಲಿ ದ್ವಿಪಥ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಸಂವಿಧಾನದ ಉದಾತ್ತ ಆಶಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಸದೃಢ ಭಾರತ ನಿರ್ಮಾಣಕ್ಕೆ ಸಂವಿಧಾನದ ಕೊಡುಗೆ ಮಹತ್ವದ್ದಾಗಿದೆ ಎಂದು ಧ್ವಜಾರೋಹಣ ನೆರವೇರಿಸಿದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಹೇಳಿದರು.
ಗ್ರಾಮ ಒನ್ ಯೋಜನೆಯಡಿ ರಾಜ್ಯ ಪ್ರಶಸ್ತಿ ಪಡೆದ ಹೆಗ್ಗೋಡಿನ ಶಿಶಿರ್, ಸಂಗೀತ ಪ್ರಭು ಕೊನಗನವಳ್ಳಿ, ಸೌಮ್ಯ ಎಚ್.ಸಿರಿವಂತೆ ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ಎಎಸ್‌ಪಿ ರೋಹನ್ ಜಗದೀಶ್, ತಾಲ್ಲೂಕು ಪಂಚಾಯಿತಿ ಇಒ ಪುಷ್ಪಾ ಕಮ್ಮಾರ್, ಪೌರಾಯುಕ್ತ ಎಚ್.ಕೆ. ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್. ಇದ್ದರು. ಪಥ ಸಂಚಲನ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.